ADVERTISEMENT

ಪರಿಶಿಷ್ಟರಿಗೆ ಮದ್ಯದಂಗಡಿ ಪ್ರಸ್ತಾವ ಇಲ್ಲ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 19:30 IST
Last Updated 2 ಸೆಪ್ಟೆಂಬರ್ 2014, 19:30 IST

ಬೆಂಗಳೂರು:  ಮದ್ಯದಂಗಡಿ ತೆರೆಯಲು ಪರಿಶಿಷ್ಟರಿಗೆ ಅನುಮತಿ ನೀಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಸ್ಪಷ್ಟಪಡಿಸಿದರು.

ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟರಿಗೆ 1500 ಮದ್ಯದಂಗಡಿ ಪರವಾನಗಿ ನೀಡಬೇಕು ಎಂದು ವಿಧಾನ ಮಂಡಲ ಸಮಿತಿ ಶಿಫಾರಸು ಮಾಡಿರುವ ಕುರಿತ ಪ್ರಶ್ನೆಗೆ ಅವರು ಈ ಸ್ಪಷ್ಟನೆ ನೀಡಿದರು. ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುದ್ದಿ ಗಾರರ ಜೊತೆ ಮಾತನಾಡಿದ ಅವರು, ‘ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿದ್ದ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ (ಡಿನೋಟಿಫೈ) ಪ್ರಕರಣ ಕುರಿತು ಬಿಜೆಪಿ ಯವರು ತಮ್ಮ ಮೇಲೆ ಆರೋಪ ಹೊರಿ­ಸುವುದನ್ನು ಮುಂದುವರಿಸಿದರೆ, ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಪ್ರಕರ ಣಗಳ ಬಗ್ಗೆಯೂ ಹೋರಾಟ ನಡೆಸ­ಬೇಕಾ­ಗುತ್ತದೆ ಎಂದು ಎಚ್ಚರಿಸಿದರು.

‘ರಾಜ್ಯಪಾಲ ವಜುಭಾಯಿ ವಾಲಾ ಅವರ ಜೊತೆ ಮಾತನಾಡಿದ್ದೇನೆ. ಅವರು ಕಾನೂನು ಚೌಕಟ್ಟು ಮೀರು ವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿ ದರು. ‘ಅರ್ಕಾವತಿ ಡಿನೋಟಿಫಿಕೇಷನ್‌’ ಪ್ರಕರ ಣದಲ್ಲಿ ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಆರಂಭಿಸಲು ರಾಜ್ಯ ಪಾಲರ ಅನುಮತಿ ಕೋರಲು ಬಿಜೆಪಿ ಮುಂದಾಗಿದೆ.

ಡಿಸಿಎಂ: ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಕುರಿತು ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನಿಸಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟ­ಪಡಿಸಿದರು. ‘ನೀವೂ ಈ ಹಿಂದೆ ಉಪ ಮುಖ್ಯಮಂತ್ರಿ ಆಗಿದ್ದವರಲ್ಲವೇ? ಆ ಸ್ಥಾನ ಸೃಷ್ಟಿ ಕುರಿತು ನಿಮ್ಮ ನಿಲುವೇನು?’ ಎಂಬ ಪ್ರಶ್ನೆಗೆ, ‘ಅದರ ಬಗ್ಗೆ ಚರ್ಚಿಸಲು ಇದು ವೇದಿಕೆಯಲ್ಲ’ ಎಂದು ಉತ್ತರಿಸಿದರು.

ಮಹಿಷಿ ವರದಿ: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಕುರಿತು ಕಾರ್ಮಿಕ ಮತ್ತು ಕೈಗಾರಿಕಾ ಇಲಾಖೆಯಿಂದ ವರದಿ ಕೇಳಲಾಗಿದೆ. ವರದಿ ಬಂದ ನಂತರ ಸರೋಜಿನಿ ಮಹಿಷಿ ವರದಿ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.