ADVERTISEMENT

ಪರಿಷ್ಕೃತ ಪಠ್ಯ ಆನ್‌ಲೈನ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 18 ಮೇ 2017, 20:32 IST
Last Updated 18 ಮೇ 2017, 20:32 IST

ಬೆಂಗಳೂರು:  ರಾಜ್ಯ ಪಠ್ಯಕ್ರಮದ ಒಂದರಿಂದ   ಹತ್ತನೇ ತರಗತಿವರೆಗಿನ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿ (http://www.ktbs.kar.nic.in) ಹಾಕಲಾಗುತ್ತಿದೆ.

ಒಟ್ಟು 511 ಪುಸ್ತಕಗಳ (ಟೈಟಲ್ಸ್) ಪೈಕಿ ಈಗಾಗಲೇ ಶೇ 50ರಷ್ಟು ಆನ್‌ಲೈನ್‌ನಲ್ಲಿ ಲಭ್ಯ ಇವೆ. ಕೆಲವು ದಿನಗಳಲ್ಲೇ ಎಲ್ಲ ಪಠ್ಯಪುಸ್ತಕಗಳನ್ನು ವೆಬ್‌ಸೈಟ್‌ಗೆ ಅಳವಡಿಸಲಾಗುತ್ತದೆ.

2017-18ನೇ ಸಾಲಿನ ಶೈಕ್ಷಣಿಕ ವರ್ಷ ಜೂನ್‌ 1ರಿಂದ ಆರಂಭವಾಗಲಿದ್ದು, ಅದಕ್ಕೆ ಮೊದಲೇ ಎಲ್ಲ ಪುಸ್ತಕಗಳು ವೆಬ್‌ಸೈಟ್‌ನಲ್ಲಿ ಸಿಗಲಿವೆ.

ADVERTISEMENT

ಸದ್ಯ ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ, ತೆಲುಗು, ಮರಾಠಿ, ತುಳು, ಅರೇಬಿಕ್‌, ಪರ್ಷಿಯನ್‌ ಭಾಷಾ ಪುಸ್ತಕಗಳು, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಸ್ತಕಗಳು ಲಭ್ಯವಿವೆ.

1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳಲ್ಲಿ ಸಾಕಷ್ಟು ತಪ್ಪು ಮಾಹಿತಿಗಳಿವೆ ಎಂದು ದೂರು ಬಂದಿದ್ದವು. ಹೀಗಾಗಿ ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣೆಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪರಿಷ್ಕರಣಾ ಸಮಿತಿ ರಚಿಸಿತ್ತು. ಸಮಿತಿಯು ಸಿ.ಡಿಗಳ ಮೂಲಕ ಪರಿಷ್ಕೃತ ಪಠ್ಯಪುಸ್ತಕಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅದೇ ಪುಸ್ತಕಗಳು ಮುದ್ರಣ ಆಗುತ್ತಿವೆ, ವೆಬ್‌ಸೈಟ್‌ಗೂ ಅಪ್‌ಲೋಡ್‌ ಮಾಡಲಾಗುತ್ತಿದೆ.

ಎರಡು ಭಾಗ
ಈ ಬಾರಿ ಪಠ್ಯಪುಸ್ತಕಗಳನ್ನು ಎರಡು ಭಾಗವಾಗಿ ಮಾಡಿ ಮುದ್ರಣ ಮಾಡಲಾಗುತ್ತದೆ. ಅದೇ ರೀತಿ ವೆಬ್‌ಸೈಟ್‌ನಲ್ಲೂ ಭಾಗ–1 ಮತ್ತು ಭಾಗ–2 ಲಭ್ಯವಾಗಲಿವೆ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ನರಸಿಂಹಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.