ADVERTISEMENT

ಪರಿಹಾರದ ಹಣವನ್ನೂ ಕದ್ದು ಸಿಕ್ಕಿಬಿದ್ದ!

ಕುಖ್ಯಾತ ಕಳ್ಳ ಸಮೀರ್ ಶರ್ಮಾ ಬಂಧನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:35 IST
Last Updated 22 ಮಾರ್ಚ್ 2018, 20:35 IST
ಆರೋಪಿಯಿಂದ ಜಪ್ತಿ ಮಾಡಿದ್ದ ಹಣವನ್ನು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್ ಗುರುವಾರ ದಂಪತಿಗೆ ಮರಳಿಸಿದರು
ಆರೋಪಿಯಿಂದ ಜಪ್ತಿ ಮಾಡಿದ್ದ ಹಣವನ್ನು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್ ಗುರುವಾರ ದಂಪತಿಗೆ ಮರಳಿಸಿದರು   

ಬೆಂಗಳೂರು:‌ ಮಕ್ಕಳಿಬ್ಬರು ಕ್ವಾರಿಯಲ್ಲಿ ಮುಳುಗಿ ಮೃತಪಟ್ಟಿದ್ದಕ್ಕೆ ಕೂಲಿ ಕಾರ್ಮಿಕ ದಂಪತಿಗೆ ಪರಿಹಾರವಾಗಿ ನೀಡಲಾಗಿದ್ದ ₹ 2 ಲಕ್ಷವನ್ನೂ ದೋಚಿಕೊಂಡು ಹೋಗಿದ್ದ ಕುಖ್ಯಾತ ಕಳ್ಳ ಸಮೀರ್ ಶರ್ಮಾ (32) ಎಲೆಕ್ಟ್ರಾನಿಕ್‌ಸಿಟಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪಂಜಾಬ್‌ನ ಸಮೀರ್, ಪತ್ನಿ ಜತೆ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನೆಲೆಸಿದ್ದ. ಈತ ಕದ್ದು ತರುತ್ತಿದ್ದ ಆಭರಣಗಳನ್ನು ಖರೀದಿಸುತ್ತಿದ್ದ ತಪ್ಪಿಗೆ ಕಬ್ಬನ್‌ಪೇಟೆಯ ಆಭರಣ ವ್ಯಾಪಾರಿ ರಾಮಬಾಬು (48) ಎಂಬಾತನೂ ಜೈಲುಪಾಲಾಗಿದ್ದಾನೆ. ಆರೋಪಿಗಳಿಂದ ₹ 42 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿದ್ಯಾಭ್ಯಾಸಕ್ಕೆ ಬಂದವನು... 2005ರಲ್ಲಿ ನಗರಕ್ಕೆ ಬಂದ ಸಮೀರ್, ಅಲ್ ಅಮೀನ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ. ನಂತರ ಚಾಮರಾಜಪೇಟೆಯ ಐಐಎಂಡಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿದ ಆತ, ಹೊಸಕೆರೆಹಳ್ಳಿಯಲ್ಲಿ ‘ಎಸ್‌.ಆರ್.ಕಂಪ್ಯೂಟರ್ಸ್‌’ ಹೆಸರಿನಲ್ಲಿ ಕಂಪ್ಯೂಟರ್ ಸರ್ವಿಸ್ ಅಂಗಡಿ ಪ್ರಾರಂಭಿಸಿದ. ಕಾಲೇಜಿನಲ್ಲಿ ತನ್ನೊಟ್ಟಿಗೆ ಓದುತ್ತಿದ್ದ ರುಷಿಕಾ ಎಂಬುವರನ್ನು 2013ರಲ್ಲಿ ವಿವಾಹವಾಗಿ, ಹೊಸಕೆರೆಹಳ್ಳಿಯಲ್ಲೇ ಮೂರು ಬೆಡ್‌ರೂಮ್‌ನ ಫ್ಲ್ಯಾಟ್ ಬಾಡಿಗೆ ಪಡೆದು ನೆಲೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಕಳ್ಳತನದ ಹಾದಿ ತುಳಿದ ಆತ, ಸಾಫ್ಟ್‌ವೇರ್ ಉದ್ಯೋಗಿಗಳು ಹೆಚ್ಚಾಗಿ ನೆಲೆಸಿರುವ ಕೋರಮಂಗಲ, ಮಡಿವಾಳ, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್‌ಸಿಟಿ ಹಾಗೂ ಬೇಗೂರು ಪ್ರದೇಶಗಳ ಅಪಾರ್ಟ್‌ಮೆಂಟ್ ಸಮುಚ್ಚಯಗಳು ಹಾಗೂ ಪೇಯಿಂಗ್ ಗೆಸ್ಟ್‌ ಕಟ್ಟಡಗಳಲ್ಲಿ ಕಳವು ಮಾಡಲು ಶುರು ಮಾಡಿದ.

2017ರ ಫೆಬ್ರುವರಿಯಲ್ಲಿ ಮೊದಲ ‌ಬಾರಿಗೆ ಸಮೀರ್‌ನನ್ನು ಬಂಧಿಸಿದ್ದ ಮಡಿವಾಳ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ಬೋಳೆತ್ತಿನ್ ನೇತೃತ್ವದ ತಂಡ, ₹ 72 ಲಕ್ಷ ಮೌಲ್ಯದ 151 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಿತ್ತು. ಆ ಪ್ರಕರಣದಲ್ಲಿ ಮೂರು ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದ ಆತ, ಮೇ ತಿಂಗಳಲ್ಲಿ ಬಿಡುಗಡೆಯಾಗಿ ಪುನಃ ಐದು ಮನೆಗಳಲ್ಲಿ ಹಣ, ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಳವು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಪರಿಹಾರವನ್ನೂ ಬಿಡಲಿಲ್ಲ!: ಚಿತ್ರದುರ್ಗದ ತಿಪ್ಪೇಸ್ವಾಮಿ ಹಾಗೂ ತಿಪ್ಪಮ್ಮ ಎಂಬ ದಂಪತಿ, ಇಬ್ಬರು ಮಕ್ಕಳೊಂದಿಗೆ 2015ರಲ್ಲಿ ನಗರಕ್ಕೆ ಬಂದು ಕೋಡಿಚಿಕ್ಕನಹಳ್ಳಿಯಲ್ಲಿ ನೆಲೆಸಿದ್ದರು. ಇಡೀ ಕುಟುಂಬ ಮನೆ ಸಮೀಪದ ಕ್ವಾರಿಯೊಂದರಲ್ಲಿ ಕೆಲಸ ಮಾಡುತ್ತಿತ್ತು. ಮಕ್ಕಳಾದ ಅರ್ಜುನ (7) ಹಾಗೂ ಮಂಜುನಾಥ (9) ಆಕಸ್ಮಿಕವಾಗಿ ಕ್ವಾರಿಗೆ ಬಿದ್ದು ಮೃತಪಟ್ಟಿದ್ದರು.

ಅದಕ್ಕೆ ಪರಿಹಾರವಾಗಿ ಕ್ವಾರಿ ಮಾಲೀಕರು ಇದೇ ಫೆಬ್ರುವರಿಯಲ್ಲಿ ದಂಪತಿಗೆ ₹ 2 ಲಕ್ಷ ಕೊಟ್ಟಿದ್ದರು. ಆ ನಂತರ ದಂಪತಿ ವಾಸ್ತವ್ಯವನ್ನು ಎಲೆಕ್ಟ್ರಾನಿಕ್‌ಸಿಟಿಗೆ ಬದಲಾಯಿಸಿದ್ದರು. ಫೆ.15ರಂದು ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಬೀಗ ಮುರಿದು ಮನೆಗೆ ನುಗ್ಗಿದ್ದ ಸಮೀರ್, ಪರಿಹಾರದ ಹಣದ ಜತೆಗೆ ಚಿನ್ನದ ಮಾಂಗಲ್ಯ ಸರ ಹಾಗೂ ಓಲೆಗಳನ್ನೂ ತೆಗೆದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಂಪತಿ ಎಲೆಕ್ಟ್ರಾನಿಕ್‌ಸಿಟಿ ಠಾಣೆಗೆ ದೂರು ಕೊಟ್ಟಿದ್ದರು.

ಆರೋಪಿಯ ಚಹರೆ ಮನೆ ಸಮೀಪದ ಕಟ್ಟಡದಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹಿಂದೆ ಆತನನ್ನು ಬಂಧಿಸಿದ್ದ ಇನ್‌ಸ್ಪೆಕ್ಟರ್ ಬೋಳೆತ್ತಿನ್, ಮಾರ್ಚ್ 7ರಂದು ಎಲೆಕ್ಟ್ರಾನಿಕ್‌ಸಿಟಿ ಠಾಣೆಗೇ ವರ್ಗವಾದರು. ಕ್ಯಾಮೆರಾ ದೃಶ್ಯಗಳನ್ನು ನೋಡಿದ ಕೂಡಲೇ ಅವರು, ‘ಹಿಂದೆ ಮಡಿವಾಳ ಠಾಣೆಯಲ್ಲಿದ್ದಾಗ ನಾವೇ ಈತನನ್ನು ಬಂಧಿಸಿದ್ದೆವು’ ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರು. ನಂತರ ವಿಶೇಷ ತಂಡ ರಚಿಸಿಕೊಂಡು ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

‘ಸಮೀರ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಕಳವು ಮಾಡಿದ್ದ ಒಡವೆಗಳನ್ನು ಕಬ್ಬನ್‌ಪೇಟೆಯ ಆಭರಣ ಮಳಿಗೆಗೆ ಮಾರಾಟ ಮಾಡಿರುವುದಾಗಿ ಹೇಳಿದ. ನಂತರ ಆ ಮಳಿಗೆ ಮಾಲೀಕ ರಾಮಬಾಬುನನ್ನೂ ವಶಕ್ಕೆ ಪಡೆಯಲಾಯಿತು. ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.

(ಸಮೀರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.