ADVERTISEMENT

ಪರೀಕ್ಷಾ ಪದ್ಧತಿಯಿಂದ ಶಿಕ್ಷಣ ವ್ಯವಸ್ಥೆ ಹಾಳು

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:39 IST
Last Updated 29 ಜುಲೈ 2015, 19:39 IST

ಬೆಂಗಳೂರು: ‘ದೇಶದ ಶಿಕ್ಷಣ ವ್ಯವಸ್ಥೆ ಹಾಳಾಗಲು ನಮ್ಮ ಪರೀಕ್ಷಾ ಪದ್ಧತಿಯೇ ಪ್ರಮುಖ ಕಾರಣ’ ಎಂದು ಎಂದು ಹಿರಿಯ ವಿಜ್ಞಾನಿ ಪ್ರೊ. ಸಿ.ಎನ್‌.ಆರ್‌. ರಾವ್‌  ಅಭಿಪ್ರಾಯಪಟ್ಟರು. ಕರ್ನಾಟಕ ಜ್ಞಾನ ಆಯೋಗ, ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ  (ಎನ್‌ಐಎಎಸ್‌), ‘ಫ್ಯೂಚರ್‌ ಅಜೆಂಡಾ ಮತ್ತು ‘ಇಯಾನ್‌ ಟಾಟಾ ಕನ್ಸಲೆಟ್ನ್ಸಿ ಸರ್ವಿಸೆಸ್‌’ನಿಂದ ಬುಧವಾರ ನಗರದಲ್ಲಿ ಆಯೋಜಿಸಿದ್ದ ‘ಶಿಕ್ಷಣದ ಭವಿಷ್ಯ: ಭವಿಷ್ಯದ ಶಾಲೆಗಳು’ ಕುರಿತ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.

‘ನಮ್ಮ ಶಿಕ್ಷಣ ವ್ಯವಸ್ಥೆಯು ಅಂಕ ಗಳಿಕೆಗೆ ಹೆಚ್ಚು ಮಹತ್ವ ನೀಡುತ್ತಿದೆ ಹೊರತು ಜ್ಞಾನ, ಕೌಶಲಕ್ಕಲ್ಲ. ಇದರಿಂದ ವಿದ್ಯಾರ್ಥಿಗಳು ಅಂಕ ಗಳಿಕೆಗಷ್ಟೇ ಸೀಮಿತರಾಗುತ್ತಿದ್ದಾರೆ’ ಎಂದರು. ‘ಪೋಷಕರು, ಬಾಹ್ಯ ಕಾರಣಗಳಿಂದ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಬೇಕು ಎಂಬ ಒತ್ತಡಕ್ಕೆ ಒಳಗಾಗಿದ್ದಾರೆ. ಒಂದುವೇಳೆ ಅದರಲ್ಲಿ ಅವರು ವಿಫಲರಾದರೆ ಆತ್ಮಹತ್ಯೆ ಸೇರಿದಂತೆ ಇತರ ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ವಿವರಿಸಿದರು.

‘ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ನಮ್ಮ ದೇಶದಲ್ಲಿ ಎಷ್ಟು ಪ್ರಾಮುಖ್ಯತೆ ಸಿಗಬೇಕಿತ್ತೊ ಅಷ್ಟು ಸಿಕ್ಕಿಲ್ಲ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಈ ಕ್ಷೇತ್ರಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ಕಾರಣಕ್ಕಾಗಿಯೇ ಜಗತ್ತಿನ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರ ಹಿಂದುಳಿದಿದೆ’ ಎಂದರು.

‘ನಮ್ಮ ದೇಶಕ್ಕಿಂತ ಹೆಚ್ಚಿನ ಜನಸಂಖ್ಯೆ ಚೀನಾದಲ್ಲಿ ಇದೆ. ಆ ದೇಶಕ್ಕೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾದರೆ ನಮ್ಮಿಂದೇಕೆ ಅದು ಸಾಧ್ಯವಾಗುತ್ತಿಲ್ಲ?’ ಎಂದು ಪ್ರಶ್ನಿಸಿದರು. ‘ಇಲ್ಲಿಯವರೆಗೆ ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳು ಕೂಡ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಗಮನಹರಿಸಿಲ್ಲ. ಇದರಿಂದಾಗಿ ಶಿಕ್ಷಣ ರಂಗದಲ್ಲಿ ನಾವು ವಿಫಲರಾಗಿದ್ದೇವೆ’ ಎಂದರು.

‘ತಂತ್ರಜ್ಞಾನದಿಂದ ಸಾಕಷ್ಟು ಬದಲಾವಣೆ ಆಗಿರುವುದು ನಿಜ. ಆದರೆ ಸಂಪೂರ್ಣವಾಗಿ ಅದನ್ನೇ ಅವಲಂಬಿಸುವಂತಿಲ್ಲ. ಅಮೆರಿಕದಲ್ಲಿ ಶಿಕ್ಷಣ ವ್ಯವಸ್ಥೆ ಏಕೆ ಯಶಸ್ವಿಯಾಗಲಿಲ್ಲ ಎಂದರೆ ಅದು ಪೂರ್ಣವಾಗಿ ತಂತ್ರಜ್ಞಾನವನ್ನು ಅವಲಂಬಿಸಿರುವ ಕಾರಣದಿಂದ’ ಎಂದು ಹೇಳಿದರು.

‘ತಂತ್ರಜ್ಞಾನವನ್ನು ಪೂರಕವಾಗಿ ಮಾತ್ರ ಬಳಸಿಕೊಳ್ಳಬಹುದು. ಈಗ   ಕೂಡ ಶಿಕ್ಷಕರ ಪಾತ್ರವೇ  ಮಹತ್ವದ್ದಾಗಿದೆ. ಜೊತೆಗೇ ಶಿಕ್ಷಕರನ್ನು ಗೌರವಿಸುವ ವಾತಾವರಣ ಕೂಡ ಬೆಳೆಸಬೇಕಾಗಿದೆ’ ಎಂದು ತಿಳಿಸಿದರು.‘ನಮ್ಮ ಮಕ್ಕಳನ್ನು ಅಂತರರಾಷ್ಟ್ರೀಯ ಸ್ಪರ್ಧೆಗೆ ಅಣಿಗೊಳಿಸುವ ದೊಡ್ಡ ಜವಾಬ್ದಾರಿ ಇದೆ. ಆದರೆ ಆ ನಿಟ್ಟಿನಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ’ ಎಂದು ಹೇಳಿದರು.

‘ಮುಂದಿನ ಹತ್ತು ವರ್ಷಗಳಲ್ಲಿ ಇನ್ನೂ ಐದು ಕೋಟಿ ಮಕ್ಕಳು ಹೊಸದಾಗಿ ಶಾಲೆಗೆ ಸೇರುತ್ತಾರೆ. ಅದಕ್ಕಾಗಿ ಈಗಿನಿಂದಲೇ ಸೂಕ್ತ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ’ ಎಂದರು. ‘ಬಡತನ ರೇಖೆಗಿಂತ ಕೆಳಗಿರುವ ಮಕ್ಕಳ ಬಗ್ಗೆ ವಿಶೇಷವಾಗಿ ಗಮನಹರಿಸಿ ಆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಫ್ಯೂಚರ್‌ ಅಜೆಂಡಾ’ ಸಂಸ್ಥೆ ನಿರ್ದೇಶಕ ಡಾ. ಟಿಮ್‌ ಜೋನ್ಸ್‌ ಮಾತನಾಡಿ, ‘ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಒಂದೇ ಗುಣಮಟ್ಟದ ಶಿಕ್ಷಣ ಸಿಗುವಂತಹ ವ್ಯವಸ್ಥೆ ಜಾರಿಗೆ ಬರಬೇಕು’ ಎಂದು ಸಲಹೆ ನೀಡಿದರು. ‘ಹಲವು ದೇಶಗಳಲ್ಲಿ ಇಂದಿಗೂ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದನ್ನು ದೂರ ಮಾಡಬೇಕಿದೆ. ಜೊತೆಗೇ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಇಯಾನ್‌ ಟಾಟಾ ಕನ್ಸಲೆಟ್ನ್ಸಿ ಸರ್ವಿಸೆಸ್’ ಬಿಸಿನೆಸ್‌ ಮುಖ್ಯಸ್ಥ ವೆಂಕಟರಾವ್‌ ಮಲ್ಲಿನೇನಿ ಮಾತನಾಡಿ, ‘ತಂತ್ರಜ್ಞಾನ ನಮ್ಮ ಬದುಕಿನ ಭಾಗವಾಗಿದೆ. ಅದೇ ರೀತಿ ಶಿಕ್ಷಣವು ತಂತ್ರಜ್ಞಾನದ ಒಂದು ಭಾಗವಾಗಿದೆ’ ಎಂದರು. ‘ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಾಲೆ, ಶಿಕ್ಷಕರು ಹಾಗೂ ತಂತ್ರಜ್ಞಾನದ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.