ADVERTISEMENT

ಪಾನಮತ್ತ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯ

ಯಮನ್ ಪ್ರಜೆ ಸೇರಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:59 IST
Last Updated 18 ಜನವರಿ 2017, 19:59 IST
ಯುವತಿಯನ್ನು ತಬ್ಬಿಕೊಂಡಿರುವ ದೃಶ್ಯ ಬಾರ್‌ನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು
ಯುವತಿಯನ್ನು ತಬ್ಬಿಕೊಂಡಿರುವ ದೃಶ್ಯ ಬಾರ್‌ನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು   

ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ರಿಕ್ಕಿ ಅಲಿಯಾಸ್ ತಿಮ್ಮಣ್ಣ ಉತ್ತಪ್ಪ (26) ಹಾಗೂ ಯಮನ್ ದೇಶದ ಆಯೂಬ್ ಖಾನ್ (27)  ಎಂಬುವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ 25 ವರ್ಷದ ಯುವತಿ ಜ.15ರಂದು ಬಾಣಸವಾಡಿ ಠಾಣೆಗೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ಲೈಂಗಿಕ ದೌರ್ಜನ್ಯ (ಐಪಿಸಿ 354) ಆರೋಪದಡಿ ಎಫ್ಐಆರ್ ದಾಖಲಿಸಿ, ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯ ದೂರು ಹೀಗಿತ್ತು: ‘ಜ.13ರ ರಾತ್ರಿ ನಾನು ಎಂ.ಜಿ.ರಸ್ತೆಯ ‘ಫ್ಯೂಷನ್’ ಬಾರ್‌ಗೆ ಹೋಗಿದ್ದೆ. ಅಲ್ಲಿ ಪಾನಮತ್ತಳಾದ ಬಳಿಕ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋದ ಯಾರೋ ಇಬ್ಬರು, ಕಮ್ಮನಹಳ್ಳಿ ಬಳಿ ಬಿಟ್ಟು ಹೋದರು. ಸ್ಥಳೀಯ ಮಹಿಳೆಯೊಬ್ಬರು ನನಗೆ ಆಶ್ರಯ ಕೊಟ್ಟರು. ಮರುದಿನ ಬೆಳಿಗ್ಗೆ ಮೈ–ಕೈ ನೋವು ಹಾಗೂ ಜ್ವರ ಕಾಣಿಸಿಕೊಂಡಿತು. ದೇಹದ ವಿವಿಧೆಡೆ ಗಾಯಗಳಾಗಿದ್ದವು’ ಎಂದು ಯುವತಿ ದೂರಿನಲ್ಲಿ ಹೇಳಿದ್ದರು.

‘ಬಾರ್‌ನಿಂದ ಹೊರ ಬರುವಾಗಲೇ ನನಗೆ ಪ್ರಜ್ಞೆ ಇರಲಿಲ್ಲ. ಆ ಇಬ್ಬರು ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಏನು ಮಾಡಿದರು ಎಂಬುದೂ ನೆನಪಿಲ್ಲ.  ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಕೋರಿದ್ದರು.

‘ಫಿರ್ಯಾದಿ ಯುವತಿ ಪಾನಮತ್ತರಾಗಿ ತೂರಾಡುತ್ತಿದ್ದ  ಹಾಗೂ ಅವರನ್ನು ಯುವಕರಿಬ್ಬರು ಕರೆದುಕೊಂಡ ಹೋಗುತ್ತಿದ್ದ ದೃಶ್ಯಗಳು ಬಾರ್‌ನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಅಲ್ಲದೆ, ಅವರ ಕಾರಿನ ನೋಂದಣಿ ಸಂಖ್ಯೆ ಕೂಡ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಆ ಸುಳಿವು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪಾರ್ಟಿ ಗೆಳೆಯರು: ನಗರದಲ್ಲೇ ಬಿಸಿಎ ಮುಗಿಸಿರುವ ಆಯೂಬ್,  ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾನೆ. ರಿಕ್ಕಿ ಎಂಜಿನಿಯರಿಂಗ್ ಪದವೀಧರ. ಕಾಲ್‌ಸೆಂಟರ್ ಉದ್ಯೋಗಿಯಾಗಿರುವ ಯುವತಿ, ಪಾರ್ಟಿ ಮಾಡಲು ವಾರದಲ್ಲಿ ಎರಡು ಸಲ ಸ್ನೇಹಿತರ ಜತೆ  ಬಾರ್‌ಗಳಿಗೆ ಹೋಗುತ್ತಿದ್ದರು. ಹೀಗೆ, ಆರು ತಿಂಗಳ ಹಿಂದೆ ಅವರಿಗೆ ಬಾರ್‌ವೊಂದರಲ್ಲಿ ಆರೋಪಿಗಳ ಪರಿಚಯವಾಗಿತ್ತು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

‘ಯುವತಿ ಮೊದಲು ಕಮ್ಮನಹಳ್ಳಿಯ ಪೇಯಿಂಗ್ ಗೆಸ್ಟ್‌ ಕಟ್ಟಡವೊಂದರಲ್ಲಿ ವಾಸವಾಗಿದ್ದರು. ನಿತ್ಯ ಪಾನಮತ್ತರಾಗಿ ಗಲಾಟೆ ಮಾಡುತ್ತಿದ್ದ ಹಾಗೂ ತಡರಾತ್ರಿ  ಕಟ್ಟಡಕ್ಕೆ ಬರುತ್ತಿದ್ದ ಕಾರಣಕ್ಕೆ ಇತ್ತೀಚೆಗೆ ಪಿ.ಜಿ.ಕಟ್ಟಡದ ಮಾಲೀಕರು ಅವರನ್ನು ಪ್ರಶ್ನೆ ಮಾಡಿದ್ದರು. ಈ ವಿಚಾರಕ್ಕೆ ಗಲಾಟೆ ಕೂಡ ಆಗಿತ್ತು’ ಎಂದು ಅಧಿಕಾರಿಗಳು ವಿವರಿಸಿದರು.

‘ಡಿ.31ರ ರಾತ್ರಿ ಕಮ್ಮನಹಳ್ಳಿಯಲ್ಲಿ ನಾಗಲ್ಯಾಂಡ್ ಮೂಲದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ನಂತರ, ಕಟ್ಟಡದ ಮಾಲೀಕರು ಪೇಯಿಂಗ್ ಗೆಸ್ಟ್‌ಗಳ ಸುರಕ್ಷತೆಗೆ ಕೆಲ ನಿರ್ಬಂಧಗಳನ್ನು ವಿಧಿಸಿದ್ದರು. ಅವುಗಳಲ್ಲಿ ರಾತ್ರಿ 10 ಗಂಟೆಯೊಳಗೆ ಬಾರದಿದ್ದರೆ ಬೀಗ ತೆಗೆಯುವುದಿಲ್ಲ ಎಂಬ ಅಂಶವೂ ಇತ್ತು. ಆ ಕಾಲಮಿತಿಯನ್ನು ಒಪ್ಪದ ಯುವತಿ, 15 ದಿನಗಳ ಹಿಂದಷ್ಟೇ ವಾಸ್ತವ್ಯವನ್ನು ಜೆ.ಪಿ.ನಗರಕ್ಕೆ ಬದಲಾಯಿಸಿದ್ದರು.’

‘ಜ.13ರ ರಾತ್ರಿ ಗೆಳೆಯನೊಬ್ಬನಿಗೆ ಕರೆ ಮಾಡಿದ ಯುವತಿ, ಬಾರ್‌ಗೆ ಹೋಗಲು ಕರೆದಿದ್ದರು. ಅದಕ್ಕೆ ಆತ ಒಪ್ಪದಿದ್ದಾಗ ಈ ಇಬ್ಬರು ಸ್ನೇಹಿತರಿಗೆ ಕರೆ ಮಾಡಿದ್ದರು. ಅವರು ಫ್ಯೂಷನ್ ಬಾರ್‌ಗೆ ಬರುವಂತೆ ಸೂಚಿಸಿದ್ದರು. ಅದರಂತೆ ಕ್ಯಾಬ್ ಬುಕ್ ಮಾಡಿದ ಯುವತಿ, ಮನೆಯಲ್ಲಿದ್ದ ಸ್ವಲ್ಪ ಮದ್ಯ ಕುಡಿದು ನಿದ್ರೆಗೆ ಜಾರಿದ್ದರು. ಯುವತಿ ಸೂಚಿಸಿದ್ದ ವಿಳಾಸಕ್ಕೆ ಬಂದ ಕ್ಯಾಬ್ ಚಾಲಕ, ನಾಲ್ಕೈದು ಬಾರಿ ಕರೆ ಮಾಡಿದರೂ ಇವ ರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಕೊನೆಗೆ ಆತ ವಾಪಸ್ ಹೋಗಿದ್ದ. 10 ಗಂಟೆಗೆ ಎಚ್ಚರಗೊಂಡ ಯುವತಿ, ಆಟೊದಲ್ಲಿ ಎಂ.ಜಿ.ರಸ್ತೆಗೆ ಬಂದಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೂರು ಪೆಗ್ ಟೆಕಿಲಾ: ‘ಬಾರ್‌ಗೆ ಬಂದು ಗೆಳೆಯರ ಜತೆ ಮೂರು ಪೆಗ್ ‘ಟೆಕಿಲಾ’ ಕುಡಿದ ಯುವತಿ,  ತೂರಾಡಿಕೊಂಡು ಮೂರ್ನಾಲ್ಕು ಬಾರಿ ಕೆಳಗೆ ಬಿದ್ದರು. ಅಲ್ಲದೆ, ಬಾರ್‌ ನೌಕರನೊಬ್ಬನ ಮೇಲೆ ಹಲ್ಲೆಗೂ ಯತ್ನಿಸಿದ್ದರು. ಈ ವೇಳೆ ಆಯೂಬ್ ಮತ್ತು ರಿಕ್ಕಿ, ಗೆಳತಿಯನ್ನು ತಬ್ಬಿಕೊಂಡು ಹೊರಗೆ ಕರೆತಂದಿದ್ದರು. ನಂತರ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಈ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದರು.

ಗೆಳತಿ ಜೆ.ಪಿ.ನಗರಕ್ಕೆ ವಾಸ್ತವ್ಯ ಬದಲಿಸಿರುವ ವಿಷಯ ತಿಳಿಯದ ಆರೋಪಿಗಳು, ಮೊದಲು ವಾಸವಿದ್ದ ಪಿ.ಜಿ.ಕಟ್ಟಡದ ಹತ್ತಿರವೇ ಕರೆದುಕೊಂಡು ಹೋಗಿದ್ದರು. ಆಗ ಸ್ಥಳೀಯರು, ‘ಈಕೆಯನ್ನು ಇಲ್ಲಿಗೆ ಏಕೆ ಕರೆದುಕೊಂಡು ಬಂದಿದ್ದೀರಿ. ನಿತ್ಯ ಕುಡಿದು ಗಲಾಟೆ  ಮಾಡುತ್ತಿದ್ದಳೆಂದು ಇತ್ತೀಚೆಗೆ ಇಲ್ಲಿಂದ ಖಾಲಿ ಮಾಡಿಸಿದ್ದೆವು’ ಎಂದು ಆರೋಪಿಗಳಿಗೆ ಹೇಳಿದ್ದರು. ಆದರೂ, ಅವರು ಯುವತಿಯನ್ನು ಅಲ್ಲೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ.

ದೂರು ದಾಖಲಿಸಲಿಲ್ಲ: ಸ್ಥಳೀಯ ಮಹಿಳೆಯೊಬ್ಬರ ನೆರವಿನಿಂದ ಮರುದಿನ ಮನೆಗೆ ಮರಳಿದ ಯುವತಿ, ಜ.15ರಂದು ಬನಶಂಕರಿ ಠಾಣೆಗೆ ತೆರಳಿ ‘ಹತ್ತಿರದಲ್ಲಿ ಯಾವುದಾದರೂ ಮಹಿಳಾ ಠಾಣೆ ಇದೆಯೇ’ ಎಂದು ಕೇಳಿದ್ದರು. ಆಗ ಸಿಬ್ಬಂದಿ ಬಸವನಗುಡಿ ಮಹಿಳಾ ಠಾಣೆಯ ವಿಳಾಸ ಕೊಟ್ಟಿದ್ದರು.

ನಂತರ ಅಲ್ಲಿಗೆ ಹೋದ ಯುವತಿ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ಕೊಟ್ಟಿದ್ದರು. ಸಂಪೂರ್ಣ ಮಾಹಿತಿ ಪಡೆದುಕೊಂಡ ಸಿಬ್ಬಂದಿ, ‘ಘಟನೆ ಕಮ್ಮನಹಳ್ಳಿಯಲ್ಲಿ ನಡೆದಿರುವ ಕಾರಣ ಬಾಣಸವಾಡಿ ಠಾಣೆಗೆ ದೂರು ಕೊಡಿ’ ಎಂದು ಹೇಳಿ ಕಳುಹಿಸಿದರು. ಅಂತೆಯೇ ಅವರು ಬಾಣಸವಾಡಿಯಲ್ಲಿ ದೂರು ಕೊಟ್ಟಿದ್ದರು.

ಲಿಫ್ಟ್ ಬಳಿ ಅಸಭ್ಯ ವರ್ತನೆ
‘ಗೆಳತಿಯನ್ನು ನಾವು ಕಾರಿನಲ್ಲಿ ಕರೆದುಕೊಂಡು ಹೋಗಿದ್ದು ನಿಜ. ನಡೆದಾಡುವ ಸ್ಥಿತಿಯಲ್ಲೂ ಇರದ ಕಾರಣ ಆಕೆಯನ್ನು ಪಿ.ಜಿ.ಕಟ್ಟಡಕ್ಕೆ ಡ್ರಾಪ್ ಮಾಡಿದ್ದೆವು. ಆದರೆ, ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಬಾರ್‌ನಲ್ಲೇ ಆಕೆ ನಾಲ್ಕೈದು ಸಲ ಬಿದ್ದಿದ್ದರಿಂದ ತರಚಿದ ಗಾಯಗಳಾಗಿದ್ದವು’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.

ಆದರೆ, ಆರೋಪಿಗಳು ಬಾರ್‌ನಲ್ಲಿ ಈ ಯುವತಿಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿರುವ ದೃಶ್ಯ ಲಿಫ್ಟ್ ಬಳಿ ಇರುವ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಆಧಾರದ ಮೇಲೆಯೇ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

15 ದಿನಗಳಲ್ಲಿ 4ನೇ ಪ್ರಕರಣ
ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲೇ ಕಳೆದ 15 ದಿನಗಳಲ್ಲಿ ನಡೆದ 4ನೇ ಲೈಂಗಿಕ ದೌರ್ಜನ್ಯ (ಐಪಿಸಿ 354) ಪ್ರಕರಣ ಇದಾಗಿದೆ. ಡಿ.31ರ ರಾತ್ರಿ ಕಮ್ಮನಹಳ್ಳಿಯಲ್ಲಿ ನಾಗಲ್ಯಾಂಡ್ ಮೂಲದ ಯುವತಿ ಮೇಲೆ, ಜ.4ರಂದು ಜಿಮ್‌ಗೆ ಹೋಗಿ ಬರುತ್ತಿದ್ದ ಯುವತಿ ಮೇಲೆ ಹಾಗೂ ಅದೇ ದಿನ ಕ್ಯಾಬ್‌ಗಾಗಿ ಕಾಯುತ್ತಿದ್ದ ಖಾಸಗಿ ಕಂಪೆನಿಯೊಂದರ ಮಹಿಳಾ ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಎಲ್ಲ ಪ್ರಕರಣಗಳಲ್ಲೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.