ADVERTISEMENT

ಪಾಲಿಕೆಯಲ್ಲಿ ಮೆರೆಯಲಿದೆ ‘ಸ್ತ್ರೀಶಕ್ತಿ’!

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಚುನಾವಣೆ ಬಳಿಕ  ಸ್ತ್ರೀಶಕ್ತಿ ‘ರಾಜ್ಯಭಾರ’ ನಡೆಯುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಈ ಸಲ ಶೇ 50ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲಾಗಿದ್ದು, ಇತರ ಕ್ಷೇತ್ರಗಳಿಂದಲೂ ಕೆಲವು ಮಹಿಳೆಯರು ಸದಸ್ಯರಾಗಿ ಚುನಾಯಿತರಾಗುವ ಸಾಧ್ಯತೆ ಇದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಸಾಮಾನ್ಯ ವರ್ಗ ಎಲ್ಲವೂ ಸೇರಿದಂತೆ ಮಹಿಳೆಯರಿಗೆ ಒಟ್ಟಾರೆ 97 ಸ್ಥಾನ ಮೀಸಲಿಡಲಾಗಿದೆ. ಹಿಂದಿನ ಕೌನ್ಸಿಲ್‌ನಲ್ಲಿ 68 ಮಹಿಳಾ ಸದಸ್ಯರಿದ್ದರು. ಅದರಲ್ಲಿ ಕೆಲವರು ಸಾಮಾನ್ಯ ಸ್ಥಾನದಿಂದ ಗೆದ್ದುಬಂದಿದ್ದರು. ಅಂಥವರು ಈ ಸಲವೂ ಅದೃಷ್ಟ ಪರೀಕ್ಷೆಗೆ ನಿರ್ಧರಿಸಿದ್ದಾರೆ.

ಬಿಬಿಎಂಪಿ ಕೌನ್ಸಿಲ್‌ ವಿಸರ್ಜನೆಗೆ ಮುನ್ನ ಮೇಯರ್‌ ಆಗಿದ್ದ ಎನ್‌್. ಶಾಂತಕುಮಾರಿ ಮೂಡಲಪಾಳ್ಯದಿಂದ ಚುನಾಯಿತರಾಗಿದ್ದರು. ಈ ಸಲ ಮೂಡಲಪಾಳ್ಯ ವಾರ್ಡ್‌ ಹಿಂದುಳಿದ ವರ್ಗ ‘ಬಿ’ಗೆ ಮೀಸಲಾಗಿದೆ. ಹೀಗಾಗಿ ಅವರು ಅಲ್ಲಿ ಸ್ಪರ್ಧಿಸುವಂತಿಲ್ಲ. ಪಕ್ಕದ ಮಾರುತಿ ಮಂದಿರ  ವಾರ್ಡ್‌ ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿದ್ದು, ಅಲ್ಲಿಂದಲೇ ಸ್ಪರ್ಧಿಸಲು ಶಾಂತಕುಮಾರಿ ಉದ್ದೇಶಿಸಿದ್ದಾರೆ.

ಮಾರುತಿ ಮಂದಿರ ವಾರ್ಡ್‌ ಏನೂ ಮಹಿಳೆಗೆ ಮೀಸಲಾಗಿಲ್ಲ. ‘ಎದುರಾಳಿಗಳಾಗಿ ಪುರುಷ ಸ್ಪರ್ಧಿಗಳಿದ್ದರೂ ನನಗೇನೂ ಚಿಂತೆಯಿಲ್ಲ. ಮೂಡಲಪಾಳ್ಯದಲ್ಲೂ ಪುರುಷ ಸ್ಪರ್ಧಿಗಳ ವಿರುದ್ಧವೇ ಜಯಿಸಿದ್ದೆ’ ಎಂದು ಅವರು ಹೇಳುತ್ತಾರೆ.

ಎಚ್‌ಎಸ್‌ಆರ್‌ ಲೇಔಟ್‌ ವಾರ್ಡ್‌ ಈ ಹಿಂದೆ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಈಗ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಳೆದ ಬಾರಿ ಈ ವಾರ್ಡ್‌ನ ಸದಸ್ಯೆಯಾಗಿದ್ದ ಲತಾ ನರಸಿಂಹಮೂರ್ತಿ ಮತ್ತೆ ಅದೇ ವಾರ್ಡ್‌ನಿಂದ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ದೊಮ್ಮಲೂರು ವಾರ್ಡ್‌ ಸದಸ್ಯೆಯಾಗಿದ್ದ ಗೀತಾ ಶ್ರೀನಿವಾಸರೆಡ್ಡಿ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ನಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಮಹಿಳೆಗೆ ಮೀಸಲಿಲ್ಲದ 3–4 ಸ್ಥಾನಗಳಲ್ಲಿ ಮಹಿಳೆಯರು ಗೆದ್ದರೂ ಪಾಲಿಕೆಯಲ್ಲಿ ಸ್ತ್ರೀಶಕ್ತಿ ಹೆಚ್ಚಲಿದೆ. ಇದುವರೆಗೆ ಇದ್ದ ಪುರುಷ ಪ್ರಧಾನ್ಯಕ್ಕೆ ಕೊನೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.