ADVERTISEMENT

ಪಿಲ್ಲರ್ ಕುಸಿದು ಬಾಲಕ ಸಾವು

ಲಾಲ್‌ಬಾಗ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ನಡೆದ ದುರ್ಘಟನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2016, 20:08 IST
Last Updated 26 ಡಿಸೆಂಬರ್ 2016, 20:08 IST
ಸಾವಿಗೂ ಮುನ್ನ ಬಾಲಕ ವಿಕ್ರಮ್‌  (ಎಡಬದಿ)  ತನ್ನ ಸಂಬಂಧಿ ರಕ್ಷಿತ್ ಜತೆ ಲಾಲ್‌ಬಾಗ್‌ನಲ್ಲಿ ತೆಗೆಸಿಕೊಂಡಿದ್ದ ಫೋಟೊ
ಸಾವಿಗೂ ಮುನ್ನ ಬಾಲಕ ವಿಕ್ರಮ್‌ (ಎಡಬದಿ) ತನ್ನ ಸಂಬಂಧಿ ರಕ್ಷಿತ್ ಜತೆ ಲಾಲ್‌ಬಾಗ್‌ನಲ್ಲಿ ತೆಗೆಸಿಕೊಂಡಿದ್ದ ಫೋಟೊ   

ಬೆಂಗಳೂರು: ಲಾಲ್‌ಬಾಗ್‌ ಉದ್ಯಾನದಲ್ಲಿ ಸೋಮವಾರ ಮಧ್ಯಾಹ್ನ ಸೆಲ್ಫಿ ತೆಗೆದುಕೊಳ್ಳುವಾಗ ಪಿಲ್ಲರ್ ಕುಸಿದು ಮೈಮೇಲೆ ಬಿದ್ದಿದ್ದರಿಂದ ವಿಕ್ರಮ್ (6) ಎಂಬ ಬಾಲಕ ಮೃತಪಟ್ಟಿದ್ದಾನೆ.

ಶ್ರೀರಾಮಪುರದ ಕುಮಾರ್‌ ಹಾಗೂ ರೇವತಿ ದಂಪತಿ ಮಗ ವಿಕ್ರಮ್‌, ಸ್ಥಳೀಯ ಬಿಬಿಎಂಪಿಯ ಭಾರತೀಯ ವಿದ್ಯಾಭವನ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ. ಸಂಬಂಧಿಕರ ಜತೆ ಉದ್ಯಾನಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

‘ಕ್ರಿಸ್‌ಮಸ್‌ ಪ್ರಯುಕ್ತ ಶಾಲೆಗೆ ರಜೆ ಇದ್ದಿದ್ದರಿಂದ ವಿಕ್ರಮ್‌, ತನ್ನ ಚಿಕ್ಕಮ್ಮ ಈಶ್ವರಿ ಹಾಗೂ ಅವರ ಮಕ್ಕಳಾದ ಮಿಥಿಲಾ ಮತ್ತು ರಕ್ಷಿತ್‌ ಜತೆ ಬೋನ್ಸಾಯ್‌ ಉದ್ಯಾನಕ್ಕೆ ಬಂದಿದ್ದ’ ಎಂದು ಸಿದ್ದಾಪುರ ಠಾಣೆಯ ಪೊಲೀಸರು ತಿಳಿಸಿದರು.

‘ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸುವ ಉದ್ದೇಶದಿಂದ ಉದ್ಯಾನದಲ್ಲಿ 4 ಅಡಿ ಎತ್ತರದ ಪಿಲ್ಲರ್ ನಿಲ್ಲಿಸಿ, ಅದರ ಮೇಲೆ ಕಲ್ಲಿನ ತೊಟ್ಟಿ ಇಡಲಾಗಿತ್ತು. ಸಿಬ್ಬಂದಿ ಪಕ್ಷಿಗಳು ಕುಡಿಯಲೆಂದು ನಿತ್ಯ ಆ ತೊಟ್ಟಿಗೆ ನೀರು ತುಂಬಿಸುತ್ತಿದ್ದರು.’

‘ಮಧ್ಯಾಹ್ನ 2.30ರ ಸುಮಾರಿಗೆ ಮಿಥಿಲಾ ಹಾಗೂ ವಿಕ್ರಮ್  ಆಟವಾಡಿಕೊಂಡು ಆ ಪಿಲ್ಲರ್‌ ಬಳಿ ಹೋಗಿದ್ದರು. ಅದರ ಸಮೀಪದಲ್ಲೇ  ಈಶ್ವರಿ, ತಮ್ಮ ಮಗ ರಕ್ಷಿತ್‌ ಜತೆ ಕುಳಿತುಕೊಂಡಿದ್ದರು.’

‘ಮೊಬೈಲ್‌ನಲ್ಲಿ ಫೋಟೊ ತೆಗೆಯಲು ಆರಂಭಿಸಿದ ಮಿಥಿಲಾ, ಸ್ವಲ್ಪ ಸಮಯದ ನಂತರ ವಿಕ್ರಮ್‌ನನ್ನು ಆ ಪಿಲ್ಲರ್ ಮೇಲೆ ಹತ್ತಿಸಿದ್ದಾಳೆ. ನಂತರ ಇಬ್ಬರೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ, ಏಕಾಏಕಿ ಆ ಪಿಲ್ಲರ್‌ ಕುಸಿದು ಬಿದ್ದಿದೆ.’

‘ವಿಕ್ರಮ್‌ ಕೆಳಗೆ ಬಿದ್ದಾಗ, ಆ ಕಲ್ಲಿನ ತೊಟ್ಟಿ  ತಲೆಗೆ ಬಡಿದಿದೆ. ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಚಿಕ್ಕಮ್ಮ, ಸಾರ್ವಜನಿಕರ ನೆರವಿನಿಂದ ವಿಕ್ರಮ್‌ನನ್ನು ಹತ್ತಿರದ ಸೌತ್‌ ಸಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಆದರೆ,  ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾನೆ.’

‘ಆ ನಂತರ ತಂದೆ–ತಾಯಿಗೆ ವಿಷಯ ತಿಳಿಸಿ, ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ವೇಳೆ ಪಿಲ್ಲರ್‌ ಪಕ್ಕದಲ್ಲೇ ನಿಂತಿದ್ದ ಮಿಥಿಲಾಳಿಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಪೊಲೀಸರು ತಿಳಿಸಿದರು.

ಎಚ್ಚರಿಕೆ ನೀಡಿದ್ದ ಸಿಬ್ಬಂದಿ: ‘ಪಿಲ್ಲರ್ ಪಕ್ಕವೇ ಗಿಡಗಳಿದ್ದು, ಅಲ್ಲಿ ಹೂವುಗಳು ಬೆಳೆದಿವೆ. ಪಿಲ್ಲರ್‌ ಮೇಲೆ ಕುಳಿತಿದ್ದ ಬಾಲಕ, ಆ ಹೂವುಗಳನ್ನು ಮುಟ್ಟಲು ಪ್ರಯತ್ನಿಸುತ್ತಿದ್ದ.

ಮಿಥಿಲಾ ಪಿಲ್ಲರ್‌ಗೆ ಒರಗಿಗೊಂಡ ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಇದರಿಂದ ಒತ್ತಡ ಹೆಚ್ಚಾಗಿ ಅದು ಉರುಳಿತು’ ಎಂದು ಲಾಲ್‌ಬಾಗ್‌ ಉಪನಿರ್ದೇಶಕ ಎಂ.ಆರ್‌. ಚಂದ್ರ ಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆಗೂ ಮುನ್ನ ಪಿಲ್ಲರ್ ಬಳಿ ಹೋಗದಂತೆ ಸಿಬ್ಬಂದಿ ರಾಮಚಂದ್ರಪ್ಪ ಎಂಬುವರು ಅವರಿಗೆ ಎಚ್ಚರಿಕೆ ನೀಡಿದ್ದರು. ಅವರು ಗಿಡಗಳಿಗೆ ನೀರು ಹಾಕಲು ಬೇರೆಡೆ ಹೋಗಿದ್ದ ವೇಳೆ ಬಾಲಕನನ್ನು ಪಿಲ್ಲರ್‌ ಮೇಲೆ ಹತ್ತಿಸಲಾಗಿತ್ತು. ಅದುವೇ ದುರಂತಕ್ಕೆ ಕಾರಣವಾಯಿತು’ ಎಂದು ವಿವರಿಸಿದರು.

20 ನಿಮಿಷ ನರಳಾಡಿದ ಬಾಲಕ: ‘ಘಟನೆ ನಡೆದ ವೇಳೆ ಉದ್ಯಾನದಲ್ಲಿ ನೂರಾರು ಸಂಖ್ಯೆಯಲ್ಲಿ ಜನರಿದ್ದರು. ಆದರೆ, ಅವರಲ್ಲಿ ಯಾರೊಬ್ಬರು ಬಾಲಕನ ರಕ್ಷಣೆಗೆ ಹೋಗಲಿಲ್ಲ. ಇದರಿಂದ ಸುಮಾರು 20 ನಿಮಿಷಗಳವರೆಗೆ ರಕ್ತದ ಮಡುವಿನಲ್ಲೇ ಬಾಲಕ ನರಳಾಡುವಂತಾಯಿತು’ ಎಂದು ವಿಕ್ರಮ್‌ ಸಂಬಂಧಿಯೊಬ್ಬರು ದೂರಿದರು.

‘ಜನ ಸೇರಿರುವುದನ್ನು ನೋಡಿ ಸ್ಥಳಕ್ಕೆ ಹೋದೆ. ಬಾಲಕನನ್ನು ಎತ್ತಿ ಕೊಂಡು  ಸ್ಕೂಟರ್‌ನಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದೆ. ಯುವಕನೊಬ್ಬ ಬಾಲಕನನ್ನು ಕೂರಿಸಿಕೊಂಡು ಹಿಂದೆ ಕುಳಿತಿದ್ದ’ ಎಂದು ಉದ್ಯಾನದ ಭದ್ರತಾ ಸಿಬ್ಬಂದಿ ಗೋಪಿ ಹೇಳಿದರು.

ಮನೆಯಲ್ಲಿದ್ದ ತಾಯಿ: ‘ಬಾಲಕನ ತಂದೆ ಕುಮಾರ್‌ ಅವರು ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕರಾಗಿದ್ದು, ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ಬಂದಿದ್ದ ಈಶ್ವರಿ, ರೇವತಿ ಅವರನ್ನು ಲಾಲ್‌ಬಾಗ್‌ಗೆ ಕರೆದಿದ್ದರು.’

‘ಮನೆಯಲ್ಲಿ ಕೆಲಸವಿದ್ದಿದ್ದರಿಂದ ರೇವತಿ, ವಿಕ್ರಮ್‌ನನ್ನು ಮಾತ್ರ ಕಳುಹಿಸಿಕೊಟ್ಟಿದ್ದರು. ಲಾಲ್‌ಬಾಗ್‌ಗೆ ಬಂದ ಅವರೆಲ್ಲ ಪಾಪ್‌ಕಾರ್ನ್‌ ಹಾಗೂ ಕಡ್ಲೆ ಬೀಜ ಖರೀದಿಸಿ ಬೋನ್ಸಾಯ್‌ ಉದ್ಯಾನ ಪ್ರವೇಶಿಸಿದ್ದರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು  ತಿಳಿಸಿದರು.

ಕಳಪೆ ಸಿಮೆಂಟ್‌ ಬಳಕೆ: ಆರೋಪ
‘ಬೋನ್ಸಾಯ್‌ ಉದ್ಯಾನದಲ್ಲಿ ಸಸಿ ಗಳ ಪಾಲನೆಗೆ ಹೆಚ್ಚು ಒತ್ತು ನೀಡಿದ್ದು, ಅದಕ್ಕಾಗಿ 3ರಿಂದ 5 ಅಡಿ ಎತ್ತರದ 20ಕ್ಕೂ ಹೆಚ್ಚು ಪಿಲ್ಲರ್‌ಗಳನ್ನು ನಿಲ್ಲಿಸಲಾಗಿದೆ.’

‘ಕೆಳಭಾಗದಲ್ಲಿ ಚೌಕಾಕಾರದ ಕಲ್ಲು, ಅದರ ಮೇಲೊಂದು ಕಂಬ, ಅದರ ಮೇಲೆ ತೊಟ್ಟಿ ಮಾದರಿಯ ಕಲ್ಲು ಇಟ್ಟು ಸಸಿ ನೆಡಲಾಗಿದೆ. ಆದರೆ, ಮೂರು ಕಲ್ಲುಗಳ ಜೋಡಣೆಗೆ ಸಿಮೆಂಟ್‌ ಬಳಸ ಲಾಗಿದೆ. ಅದು ಸಹ ಕಳಪೆ ಮಟ್ಟ ದ್ದಾಗಿದ್ದು, ದಿನದಿಂದ ದಿನಕ್ಕೆ ಒಂದೊಂದೇ ಪಿಲ್ಲರ್‌ಗಳು ಕಳಚಿ ಬೀಳುತ್ತಿವೆ’ ಎಂದು ಉದ್ಯಾನದಲ್ಲಿರುವ ಹಣ್ಣಿನ ಅಂಗಡಿ ವ್ಯಾಪಾರಿಯೊಬ್ಬರು ದೂರಿದರು. 

‘ಪಿಲ್ಲರ್‌ಗಳನ್ನು ಲಾಕಿಂಗ್‌ ವ್ಯವಸ್ಥೆಯಲ್ಲೇ ಜೋಡಿಸಲಾಗಿದೆ. ಸಾರ್ವಜನಿಕರು ಅವುಗಳನ್ನು ಮುಟ್ಟುವುದರಿಂದ ಉರುಳಿ ಬೀಳುತ್ತವೆ’ ಎಂದು ಉಪನಿರ್ದೇಶಕ ಚಂದ್ರಶೇಖರ್‌ ಹೇಳಿದರು.

ಕಣ್ಣುಗಳ ದಾನ
ದಂಪತಿಗೆ ವಿಕ್ರಮ್‌ ಒಬ್ಬನೇ ಮಗ.  ಸಾವಿನ ಬಳಿಕವೂ ಆತನ ಕಣ್ಣುಗಳನ್ನು ದಾನ ಮಾಡಲು ಕುಮಾರ್ ಹಾಗೂ ರೇವತಿ ತೀರ್ಮಾನಿಸಿದ್ದಾರೆ. ‘ಆಸ್ಪತ್ರೆಗೆ ಬಂದಿದ್ದ ಪೋಷಕರು, ಮಗನ ಕಣ್ಣುಗ ಳನ್ನು ದಾನ ಮಾಡುವುದಾಗಿ ಹೇಳಿದ್ದಾರೆ. ಆ ಕಣ್ಣುಗಳನ್ನು ತೆಗೆದುಕೊಂಡು, ಅಗತ್ಯವಿರು ವರಿಗೆ ನೀಡುತ್ತೇವೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ತಿಳಿಸಿದರು.

ಹಿಂದೆಯೂ ನಡೆದಿತ್ತು ಎರಡು ಘಟನೆ
2015, ಆಗಸ್ಟ್‌ 18:
ಜೈವಿಕ ಉದ್ಯಾನದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಆಗಸ್ಟ್‌ ಬಂದಿದ್ದ ಏಳು ವರ್ಷದ ವೈಷ್ಣವಿ ಹೆಜ್ಜೇನು ಕಡಿತದಿಂದ ಮೃತಪಟ್ಟಿದ್ದಳು.

ಈ ಘಟನೆ ನಡೆದ ಎಂಟು ತಿಂಗಳ ನಂತರ ವೈಷ್ಣವಿಯ ಅಜ್ಜ ಕೆ.ವಿ.ಮೂರ್ತಿ ಹಾಗೂ ಅಜ್ಜಿ  ಛಾಯಾ ಸಹ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡರು.‘ಮೊಮ್ಮಗಳಿಲ್ಲದೆ ಮನೆಯಲ್ಲಿ ಇರಲು ಆಗುತ್ತಿಲ್ಲ. ಹೀಗಾಗಿ ಸಾಯಲು ನಿರ್ಧರಿಸಿದ್ದೇವೆ’ ಎಂದು ಅವರ ಪತ್ರ ಬರೆದಿಟ್ಟಿದ್ದರು.

2014, ಸೆ.14: ಲಾಲ್‌ಬಾಗ್‌ನಲ್ಲಿ   ಆಟವಾಡುತ್ತಿದ್ದ ವೇಳೆ ಎರಡೂವರೆ ವರ್ಷದ ಪ್ರಜ್ವಲ್‌ ಎಂಬಾತ ನೀರಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿದ್ದ. ತೊಟ್ಟಿಗೆ ಮುಚ್ಚಳ ಮುಚ್ಚಿರಲಿಲ್ಲ. ಆಟವಾಡಿಕೊಂಡು ಅಲ್ಲಿಗೆ ಹೋಗಿದ್ದ ಮಗು, ಆಯ ತಪ್ಪಿ ತೊಟ್ಟಿಗೆ ಬಿದ್ದಿತ್ತು.

***
ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ನೊಂದಿರುವ ಪೋಷಕರನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿಲ್ಲ. ಕೆಲದಿನಗಳ ಬಳಿಕ  ಹೇಳಿಕೆ ಪಡೆಯಲಾಗುವುದು
-ಎಸ್‌.ಡಿ.ಶರಣಪ್ಪ
ಡಿಸಿಪಿ, ದಕ್ಷಿಣ ವಿಭಾಗ 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.