ADVERTISEMENT

‘ಪುರುಷರಲ್ಲಿ ಹೆಚ್ಚಾಗಿದೆ ಯಕೃತ್‌ ಸಮಸ್ಯೆ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 20:06 IST
Last Updated 17 ಏಪ್ರಿಲ್ 2018, 20:06 IST
‘ಪುರುಷರಲ್ಲಿ ಹೆಚ್ಚಾಗಿದೆ ಯಕೃತ್‌ ಸಮಸ್ಯೆ’
‘ಪುರುಷರಲ್ಲಿ ಹೆಚ್ಚಾಗಿದೆ ಯಕೃತ್‌ ಸಮಸ್ಯೆ’   

ಬೆಂಗಳೂರು: ‘ಯಕೃತ್‌ಗೆ ಸಂಬಂಧಿಸಿದ ರೋಗಗಳು ಪುರುಷರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ’ ಎಂದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಡಾ.ಸಿ.ವಿಕ್ರಂ ಬೆಳ್ಳಿಯಪ್ಪ ತಿಳಿಸಿದರು.

ವಿಶ್ವ ಯಕೃತ್‌ ದಿನದ ಪ್ರಯುಕ್ತ ಮಂಗಳವಾರ ವಿಕ್ರಂ ಆಸ್ಪತ್ರೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ದೇಶದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಅಧಿಕ ಮಂದಿ ಯಕೃತ್‌ಗೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಿದೆ. ಮದ್ಯಪಾನ ಸೇವನೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಮಾಹಿತಿ ನೀಡಿದರು.

ADVERTISEMENT

ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯ ಧೀರಜ್‌ ಕಾರಂತ್‌ ಸಲಹೆ ನೀಡಿದರು. ಪಿತ್ತಜನಕಾಂಗದ ಕಸಿ ಹಾಗೂ ಸ್ಟೆಮ್‌ಸೆಲ್‌ ಚಿಕಿತ್ಸೆಯನ್ನು ಇತ್ತೀಚೆಗೆ ಸಂಶೋಧಿಸಲಾಗಿದೆ. ಗಂಭೀರ ಸ್ವರೂಪಕ್ಕೆ ಹೋಗುವವರೆಗೂ ಯಕೃತ್‌ಗೆ ಸಂಬಂಧಿಸಿದ ಕಾಯಿಲೆ ಅರಿವಿಗೆ ಬರುವುದಿಲ್ಲ. ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದು ಹೇಳಿದರು.

ವೈದ್ಯರಿಂದ ಅಂಗಾಂಗ ದಾನ: ವಿಕ್ರಂ ಆಸ್ಪತ್ರೆಯಲ್ಲಿನ 70 ವೈದ್ಯರ ಪೈಕಿ 32ಮಂದಿ ವೈದ್ಯರು ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಸ್ವೀಕರಿಸಿದರು. ಹೆಚ್ಚುತ್ತಿರುವ ಯಕೃತ್‌ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪವನ್ನು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.