ADVERTISEMENT

ಪೊಲೀಸರಿಂದ ₹8 ಲಕ್ಷ ದರೋಡೆ ಆರೋಪ

ಸುಕನ್ಯಾ ಎಂಬುವರಿಂದ ಕಮಿಷನರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:41 IST
Last Updated 3 ಡಿಸೆಂಬರ್ 2016, 19:41 IST

ಬೆಂಗಳೂರು: ಗಿರಿನಗರ ಠಾಣೆಯ ಕಾನ್‌ಸ್ಟೆಬಲ್‌ಗಳಿಬ್ಬರು ಶುಕ್ರವಾರ ತಮ್ಮ ಬಳಿಯ ₹8 ಲಕ್ಷ ನಗದು ದೋಚಿರುವುದಾಗಿ ಮೆಜೆಸ್ಟಿಕ್‌ ನಿವಾಸಿ ಸುಕನ್ಯಾ ಎಂಬುವರು ದೂರು ನೀಡಿದ್ದು, ಅದರನ್ವಯ ತನಿಖೆ ನಡೆಸುವಂತೆ ಪೊಲೀಸ್‌ ಕಮಿಷನರ್‌್ ಎನ್‌.ಎಸ್‌.ಮೇಘರಿಕ್‌, ದಕ್ಷಿಣ ವಿಭಾಗದ ಡಿಸಿಪಿ ಅವರಿಗೆ ಆದೇಶಿಸಿದ್ದಾರೆ.

‘ಸುಕನ್ಯಾ ಅವರು ಸಂಬಂಧಿಕರಿಗೆ ನೀಡಲೆಂದು ರದ್ದಾದ ₹500, ₹1,000 ಮುಖಬೆಲೆಯ  ಸುಮಾರು ₹8 ಲಕ್ಷದೊಂದಿಗೆ ಮೆಜೆಸ್ಟಿಕ್‌ನಿಂದ ಪದ್ಮನಾಭನಗರಕ್ಕೆ ರಾತ್ರಿ 9ರ ಸುಮಾರಿಗೆ ಆಟೊದಲ್ಲಿ ಹೋಗುತ್ತಿದ್ದರು. ಇದೇ ವೇಳೆ ಗಿರಿನಗರ ಠಾಣೆ ವ್ಯಾಪ್ತಿಯ ಸೀತಾ ವೃತ್ತದಲ್ಲಿ ಗಸ್ತಿನಲ್ಲಿದ್ದ ಕಾನ್‌ಸ್ಟೆಬಲ್‌ಗಳಿಬ್ಬರು ಅವರನ್ನು ತಡೆದು ಹಣ ದರೋಡೆ ಮಾಡಿದ್ದಾರೆ ಎಂದು ದೂರಿದ್ದಾರೆ. ಆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’  ಎಂದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ  ‘ಪ್ರಜಾವಾಣಿ’ಗೆ ತಿಳಿಸಿದರು.

ತಡರಾತ್ರಿವರೆಗೆ ಠಾಣೆಯಲ್ಲಿ: ‘ಆಟೊ ತಡೆದು ತಪಾಸಣೆ ನಡೆಸಿದಾಗ ನನ್ನ ಬಳಿ ಹಣ ಇರುವುದು ಗೊತ್ತಾಗಿತ್ತು. ಒಬ್ಬ ಕಾನ್‌ಸ್ಟೆಬಲ್‌್ ನನ್ನನ್ನು ಠಾಣೆಗೆ ಕರೆದುಕೊಂಡು ಹೋದರು. ಮತ್ತೊಬ್ಬರು ಹಣವನ್ನು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಹೋದರು’ ಎಂದು ಕಮಿಷನರ್‌ ಅವರಿಗೆ ನೀಡಿದ ದೂರಿನಲ್ಲಿ ಸುಕನ್ಯಾ ಹೇಳಿದ್ದಾರೆ.

ADVERTISEMENT

‘ರಾತ್ರಿ 1.30ರವರೆಗೆ ನನ್ನನ್ನು ಠಾಣೆಯಲ್ಲಿರಿಸಿದ್ದರು. ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಹೇಳಿದರೂ ಅವಕಾಶ ನೀಡಲಿಲ್ಲ. 1.30ರ ಬಳಿಕ ಚೀತಾ ವಾಹನದಲ್ಲಿ ನನ್ನನ್ನು ಮನೆಗೆ ಬಿಟ್ಟು ಹೋದರು. ಆದರೆ, ಹಣವನ್ನು ತೆಗೆದುಕೊಂಡು ಹೋದ ಕಾನ್‌ಸ್ಟೆಬಲ್‌ ಠಾಣೆಗೆ ಬರದೇ ನಾಪತ್ತೆಯಾಗಿದ್ದಾರೆ. ಹಣವನ್ನು ಅವರಿಬ್ಬರು ಸೇರಿ ದರೋಡೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

ಕಾನ್‌ಸ್ಟೆಬಲ್‌ಗಳು ನಾಪತ್ತೆ
ಹಣ ತೆಗೆದುಕೊಂಡು ಹೋದ ಕಾನ್‌ಸ್ಟೆಬಲ್‌ಗಳನ್ನು ಮಯೂರ್‌ ಹಾಗೂ ರಾಘವ್‌ಕುಮಾರ್‌ ಎಂದು ಗುರುತಿಸಲಾಗಿದ್ದು, ಶನಿವಾರ ಅವರು ಸೇವೆಗೆ ಗೈರು ಹಾಜರಾಗಿದ್ದಾರೆ.

‘ಸುಕನ್ಯಾ ಅವರು ತಮ್ಮ ವಕೀಲರ ಮೂಲಕ ದೂರು ನೀಡಿದ್ದಾರೆ. ಈಗ ಹೊಸದಾಗಿ ಮತ್ತೊಂದು ದೂರು ನೀಡುವುದಾಗಿ ಹೇಳಿದ್ದಾರೆ. ಸದ್ಯ ಕಾನ್‌ಸ್ಟೆಬಲ್‌ಗಳು ಠಾಣೆಗೆ ಬಂದಿಲ್ಲ. ಅವರನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಡಿಸಿಪಿ ಶರಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.