ADVERTISEMENT

ಪೊಲೀಸರಿಗೇ ಥಳಿತ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 20:08 IST
Last Updated 2 ಸೆಪ್ಟೆಂಬರ್ 2015, 20:08 IST

ಬೆಂಗಳೂರು: ಪಾನಮತ್ತರಾಗಿ ಬೀದಿಯಲ್ಲಿ ರಂಪಾಟ ಮಾಡುತ್ತಿದ್ದುದನ್ನು ಪ್ರಶ್ನಿಸಲು ಮುಂದಾದ ಪೊಲೀಸರ ಮೇಲೆ ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತರು ಹಲ್ಲೆ ನಡೆಸಿರುವ ಘಟನೆ ಜೋಗುಪಾಳ್ಯದ ನಾಲಾ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

‘ಈ ಸಂಬಂಧ ದೆಹಲಿ ಮೂಲದ ರುಚಿತಾ ಲಾಲ್, ಅಫ್ರೋಜ್‌ ಅಲಿ ಹಾಗೂ ತನ್ವೀರ್ ಎಂಬುವರ ವಿರುದ್ಧ ಸರ್ಕಾರಿ ನೌಕರನ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ (ಐಪಿಸಿ 353 ಹಾಗೂ 332) ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಫ್ರೋಜ್‌ನನ್ನು ಬಂಧಿಸಲಾಗಿದ್ದು, ಉಳಿದಿಬ್ಬರು ಪರಾರಿಯಾಗಿದ್ದಾರೆ’ ಎಂದು ಪೂರ್ವ ವಿಭಾಗದ ಡಿಸಿಪಿ ಸತೀಶ್ ಕುಮಾರ್ ತಿಳಿಸಿದರು.

ಘಟನೆಯ ವಿವರ: ‘ಎಚ್‌ಎಎಲ್‌ ಬಳಿಯ ರೆಸ್ಟೋರೆಂಟ್‌ನಲ್ಲಿ ಬಾರ್‌ ಗರ್ಲ್‌ ಆಗಿರುವ ರುಚಿತಾ, ವರ್ಷದಿಂದ ನಾಲಾ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾಳೆ. ರಾತ್ರಿ ಅಫ್ರೋಜ್ ಮತ್ತು ತನ್ವೀರ್‌ ಆಕೆಯ ಮನೆಗೆ ಬಂದಿದ್ದರು. ರಾತ್ರಿ 12 ಗಂಟೆವರೆಗೂ ಪಾನಕೂಟ ನಡೆಸಿದ್ದ ಮೂವರು, ನಂತರ ಬೀದಿಗೆ ಬಂದು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರು’ ಎಂದು ಹಲಸೂರು ಪೊಲೀಸರು ತಿಳಿಸಿದರು.

‘ಆ ಗಲಾಟೆ ಸದ್ದು ಕೇಳಿ ನೆರೆ ಹೊರೆಯವರು ಎಚ್ಚರಗೊಂಡರು. ಆಗ ಸ್ಥಳೀಯ ನಿವಾಸಿ ಸಿಬಿಐನ ನಿವೃತ್ತ ಅಧಿಕಾರಿ ಶ್ರೀನಿವಾಸ್ ನಾಯ್ಡು, ಹಲಸೂರು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಚೀತಾದಲ್ಲಿ ಹೆಡ್‌ಕಾನ್‌ಸ್ಟೆಬಲ್ ನಿಜಗುಣ ಪ್ರಸಾದ್ ಮತ್ತು ಕಾನ್‌ಸ್ಟೆಬಲ್ ಆನಂದ್‌ರನ್ನು ಸ್ಥಳಕ್ಕೆ ಕಳುಹಿಸಲಾಯಿತು.

‘ಮೊದಲು ಅಫ್ರೋಜ್ ಮತ್ತು ತನ್ವೀರ್‌ನನ್ನು ವಶಕ್ಕೆ ಪಡೆದುಕೊಂಡ ಸಿಬ್ಬಂದಿ, ಮನೆಯೊಳಗೆ ಹೋಗುವಂತೆ ರುಚಿತಾಳಿಗೆ ಬುದ್ಧಿ ಮಾತು ಹೇಳಿದರು. ಅವರನ್ನು ಬಿಡುವಂತೆ ಗಲಾಟೆ ಪ್ರಾರಂಭಿಸಿದ ರುಚಿತಾ, ಸಿಬ್ಬಂದಿ ಭುಜ ಹಾಗೂ ಕೈಗಳಿಗೆ ಕಚ್ಚಿದಳು. ನಂತರ ಮೂವರು ಸಿಬ್ಬಂದಿಯನ್ನು ಕೆಳಗೆ ಬೀಳಿಸಿ ಮನಬಂದಂತೆ ಹಲ್ಲೆ ನಡೆಸಿದರು. ಈ ಹಂತದಲ್ಲಿ ರುಚಿತಾ, ಆನಂದ್ ಮೇಲೆ ಎತ್ತಿಹಾಕಲು ಕಲ್ಲು ಹೊತ್ತುಕೊಂಡು ಬಂದಿದ್ದಳು. ಆಗ ಶ್ರೀನಿವಾಸ್ ನಾಯ್ಡು ಅವರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದರು.

‘ನಂತರ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ಇನ್‌ಸ್ಪೆಕ್ಟರ್ ಮತ್ತು ಎಸಿಪಿ ಅವರಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದರು. ಅವರು ಸ್ಥಳಕ್ಕೆ ತೆರಳುವ ವೇಳೆಗಾಗಲೇ ತನ್ವೀರ್ ಕಾರಿನಲ್ಲಿ ಪರಾರಿಯಾಗಿದ್ದ. ರಾತ್ರಿ ವೇಳೆ ಯುವತಿಯನ್ನು ಠಾಣೆಯಲ್ಲಿ ಇರಿಸುವುದು ಸೂಕ್ತವಲ್ಲ ಎಂದು ರುಚಿತಾಳನ್ನು ಅಲ್ಲೇ ಬಿಟ್ಟು, ಅಫ್ರೋಜ್‌ನನ್ನು ಮಾತ್ರ ಬಂಧಿಸಲಾಗಿತ್ತು. ಆದರೆ, ಬೆಳಿಗ್ಗೆಯಿಂದ ಆಕೆ ಕೂಡ ಕಾಣುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.