ADVERTISEMENT

ಪೊಲೀಸ್‌ ಖೆಡ್ಡಾಕ್ಕೆ ಬಿದ್ದ ‘ಇರಾನಿ ಗ್ಯಾಂಗ್‌’

₨ 60 ಲಕ್ಷದ ಚಿನ್ನಾಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST
ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರು ಇರಾನಿ ಗ್ಯಾಂಗ್‌ ಸಹಚರರ ಬಂಧನದ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್‌ ಕಮಿಷನರ್‌ಗಳಾದ ಅಲೋಕ್‌ಕುಮಾರ್‌, ಪ್ರಣವ್‌ ಮೊಹಾಂತಿ, ಸಿಸಿಬಿ ಡಿಸಿಪಿ ಅಭಿಷೇಕ್‌ ಗೋಯಲ್‌ (ಕುಳಿತಿರುವವರು), ಇನ್‌ಸ್ಪೆಕ್ಟರ್‌ಗಳಾದ ಶ್ರೀಧರ್ ಪೂಜಾರ್‌, ಬಾಲರಾಜು, ಪ್ರಕಾಶ್‌, ಎಸ್‌ಐಗಳಾದ ದಯಾನಂದ್‌, ಅಶೋಕ್‌ (ನಿಂತಿರುವವರು) ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ
ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರು ಇರಾನಿ ಗ್ಯಾಂಗ್‌ ಸಹಚರರ ಬಂಧನದ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್‌ ಕಮಿಷನರ್‌ಗಳಾದ ಅಲೋಕ್‌ಕುಮಾರ್‌, ಪ್ರಣವ್‌ ಮೊಹಾಂತಿ, ಸಿಸಿಬಿ ಡಿಸಿಪಿ ಅಭಿಷೇಕ್‌ ಗೋಯಲ್‌ (ಕುಳಿತಿರುವವರು), ಇನ್‌ಸ್ಪೆಕ್ಟರ್‌ಗಳಾದ ಶ್ರೀಧರ್ ಪೂಜಾರ್‌, ಬಾಲರಾಜು, ಪ್ರಕಾಶ್‌, ಎಸ್‌ಐಗಳಾದ ದಯಾನಂದ್‌, ಅಶೋಕ್‌ (ನಿಂತಿರುವವರು) ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪೊಲೀಸರ ಸೋಗಿನಲ್ಲಿ ವೃದ್ಧೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಕುಖ್ಯಾತ ‘ಇರಾನಿ ಗ್ಯಾಂಗ್‌’ನ ಮುಖ್ಯಸ್ಥ ಮತ್ತು ಸದಸ್ಯರನ್ನು ಬಂಧಿಸಿರುವ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ₨ 60 ಲಕ್ಷ ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.

‘ಇರಾನಿ ಗ್ಯಾಂಗ್‌ನ ಮುಖ್ಯಸ್ಥ ಲಾಲಾ ಸಮೀರ್‌ ಜಾಫರ್‌ ಹುಸೇನ್‌ ಅಲಿಯಾಸ್‌ ಲಾಲಾ (35) ಸೇರಿ ದಂತೆ ಐದು ಮಂದಿಯನ್ನು ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿ ಗಳಿಂದ ಸುಮಾರು ಎರಡು ಕೆ.ಜಿ ಚಿನ್ನಾಭ­ರಣ ವಶಪಡಿಸಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಹಾರಾಷ್ಟ್ರದ ಜಾಫರ್‌ ಆಲಿ ಸೈಯದ್‌ (31), ಗುಲಾಂ ಆಲಿ ಫರುವಲಿ ಸೈಯದ್‌ (26), ಗುಲ್ಬರ್ಗದ ಉಸ್ಮಾನ್‌ (32) ಮತ್ತು ಅಬ್ಬಾಸ್‌ ಆಲಿ (28) ಇತರೆ ಬಂಧಿತ ಆರೋಪಿಗಳು.

ಬಂಧಿತರು 15 ವರ್ಷಗಳಿಂದ ಆಂಧ್ರಪ್ರದೇಶ, ತಮಿಳುನಾಡು, ಮಹಾ­ರಾಷ್ಟ್ರ, ಗುಜರಾತ್‌, ಗೋವಾ, ರಾಜಸ್ತಾನ, ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗಿದ್ದರು. ರಾಜ್ಯದ ಬೆಂಗಳೂರು, ಮಂಗಳೂರು, ಉಡುಪಿ, ಕುಂದಾ ಪುರ ಮತ್ತು ಮೈಸೂರಿನಲ್ಲೂ ಚಿನ್ನಾ ಭರಣ ದೋಚಿದ್ದರು. ಅವರ ಬಂಧನ­ದಿಂದ ನಗರದಲ್ಲಿ ನಡೆದಿದ್ದ 60ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು ರೆಡ್ಡಿ ಹೇಳಿದರು. ಅಪರಾಧ ಚಟುವಟಿಕೆ ಗಳಿಂದ ಗಳಿಸಿದ ಹಣದಿಂದಲೇ ಅವರು ಜೀವನ ನಿರ್ವಹಣೆ ಮಾಡುತ್ತಿದ್ದರು. ಅವರ ಬಂಧನಕ್ಕಾಗಿ ಸಿಬ್ಬಂದಿ ಎರಡು ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದರು.

ಆರೋಪಿಗಳು ಇತ್ತೀಚೆಗೆ ವಿಜಯನಗರದಲ್ಲಿ ಅಪರಾಧ ಕೃತ್ಯ ಎಸಗಲು ಬಂದಿದ್ದಾಗ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಮಾಹಿತಿ ನೀಡಿದರು.

ಪೂರ್ವಜರು ಇರಾನ್‌ ಮೂಲದವರು: ದೇಶದಲ್ಲಿ ಮೊಘಲರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಆರೋಪಿಗಳ ಪೂರ್ವಜರು ಕುದುರೆ ವ್ಯಾಪಾರಕ್ಕಾಗಿ ಇರಾನ್‌ನಿಂದ ದೇಶಕ್ಕೆ ಬಂದಿದ್ದರು. ಆ ನಂತರ ಇರಾನ್‌ಗೆ ಹಿಂದಿರುಗದ ಅವರು ಮಹಾರಾಷ್ಟ್ರದ ರೈಲು ನಿಲ್ದಾಣಗಳ ಅಕ್ಕಪಕ್ಕ ತಾತ್ಕಾಲಿಕ ಶೆಡ್‌ ಹಾಕಿಕೊಂಡು ಅಲೆಮಾರಿ ಜೀವನ ನಡೆಸುತ್ತಿದ್ದರು. ಬಳಿಕ ಆ ಸ್ಥಳಗಳಲ್ಲೇ ಮನೆ ನಿರ್ಮಿಸಿಕೊಂಡಿದ್ದರು. ಅದೇ ರೀತಿ ಬಂಧಿತರು ಸಹ ಮುಂಬೈ ಸಮೀಪದ ಅಂಬಿವಲಿ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನಿಂದ ಕಾರು ಮತ್ತು ಬೈಕ್‌ಗಳಲ್ಲಿ ನಗರಕ್ಕೆ ಬರುತ್ತಿದ್ದ ಅವರು  ವರ್ತುಲ ರಸ್ತೆ ಮತ್ತು ಅಕ್ಕಪಕ್ಕದ ಬಡಾವಣೆಗಳಲ್ಲಿ ವೃದ್ಧೆಯರನ್ನು ಗುರಿಯಾಗಿಸಿಕೊಂಡು ಅಪರಾಧ ಕೃತ್ಯ ಎಸಗುತ್ತಿದ್ದರು. ವೃದ್ಧೆಯರಿಗೆ ನಕಲಿ ಗುರುತಿನ ಚೀಟಿ ತೋರಿಸಿ ಪೊಲೀಸರೆಂದು ಹೇಳುತ್ತಿದ್ದ ಆರೋಪಿಗಳು, ಮುಂದಿನ ರಸ್ತೆಯಲ್ಲಿ ದುಷ್ಕರ್ಮಿಗಳು ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದಾರೆ. ಆದ್ದರಿಂದ ಆಭರಣಗಳನ್ನು ಬಿಚ್ಚಿ ಕವರ್‌ನಲ್ಲಿ ಇಟ್ಟುಕೊಳ್ಳಿ. ಇಲ್ಲದಿದ್ದರೆ ದಂಡ ವಿಧಿಸುತ್ತೇವೆ ಎಂದು ಬೆದರಿಸುತ್ತಿದ್ದರು.

ನಂತರ ಅವರಿಗೆ ನೆರವಾಗುವ ಸೋಗಿನಲ್ಲಿ ಆಭರಣಗಳನ್ನು ಪಡೆದು ಪ್ಲಾಸ್ಟಿಕ್‌ ಕವರ್‌ಗೆ ಹಾಕುತ್ತಿದ್ದರು. ಬಳಿಕ ಅವರ ಗಮನ ಬೇರೆಡೆ ಸೆಳೆದು ಕಲ್ಲು ತುಂಬಿದ ಕವರನ್ನು ಕೈಚೀಲದಲ್ಲಿಟ್ಟು, ಆಭರಣಗಳಿರುವ ಕವರ್‌ ತೆಗೆದುಕೊಂಡು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT