ADVERTISEMENT

ಪೊಲೀಸ್ ಬಲೆಗೆ ಹೈದರಾಬಾದ್‌ ಟೆಕಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2016, 19:39 IST
Last Updated 24 ನವೆಂಬರ್ 2016, 19:39 IST
ಬೋರಂಚಿ ರಾಜು
ಬೋರಂಚಿ ರಾಜು   

ಬೆಂಗಳೂರು: ‘ನನ್ನನ್ನು ಮದುವೆ ಆಗದಿದ್ದರೆ ನೀನು ಬೆತ್ತಲೆಯಾಗಿರುವ ಫೋಟೊಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುತ್ತೇನೆ’ ಎಂದು ಗೆಳತಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಐ.ಬಿ (ಗುಪ್ತಚರ ದಳ) ಅಧಿಕಾರಿಯೊಬ್ಬ ಎಚ್‌ಎಎಲ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಹೈದರಾಬಾದ್‌ನ ಬೇಗಂಪೇಟ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಬೋರಂಚಿ ರಾಜು (26) ಎಂಬಾತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಮಾರತ್‌ಹಳ್ಳಿಯ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ನೆಲೆಸಿರುವ 25 ವರ್ಷದ ಯುವತಿ ದೂರು ಕೊಟ್ಟಿದ್ದರು. ಐ.ಪಿ ವಿಳಾಸ ಹಾಗೂ ಮೊಬೈಲ್ ಕರೆಗಳ ವಿವರ (ಸಿಡಿಆರ್) ಆಧರಿಸಿ ಬೇಗಂಪೇಟ್‌ನಲ್ಲಿ ಆತನನ್ನು ಬಂಧಿಸಲಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಫೋಟೊ ಕದ್ದು ಕಿರುಕುಳ: ‘ಫಿರ್ಯಾದಿ ಯುವತಿ ಕೂಡ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದು, ವೈಟ್‌ಫೀಲ್ಡ್‌ನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವರು ಹೈದರಾಬಾದ್‌ನಲ್ಲಿ ಬಿ–ಟೆಕ್ ಓದುತ್ತಿದ್ದಾಗ, ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜುವಿನ ಪರಿಚಯವಾಗಿತ್ತು. ಈ ವೇಳೆ ಆರೋಪಿಯು ಫಿರ್ಯಾದಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ, ಅವರು ಆತನ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಪದವಿ ಮುಗಿದ ನಂತರ ಇಬ್ಬರೂ ‘ನ್ಯೂಕ್ಲಿಯೋನಿಕ್ಸ್‌’ ಕಂಪೆನಿಯಲ್ಲಿ ಎರಡು ತಿಂಗಳು ತರಬೇತಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಯುವತಿಯ ಲ್ಯಾಪ್‌ಟಾಪ್ ಕೆಟ್ಟು ಹೋಗಿತ್ತು. ರಿಪೇರಿ ಮಾಡಿಸಿಕೊಂಡು ಬರುವುದಾಗಿ ಅದನ್ನು ಪಡೆದುಕೊಂಡ ರಾಜು, ಲ್ಯಾಪ್‌ಟಾಪ್‌ನಲ್ಲಿದ್ದ ಯುವತಿಯ ಅಷ್ಟೂ ಫೋಟೊಗಳನ್ನು ಪೆನ್‌ಡ್ರೈವ್‌ಗೆ ಹಾಕಿಕೊಂಡಿದ್ದ. ನಂತರ ರಿಪೇರಿ ಮಾಡಿಸಿ, ಅದನ್ನು ವಾಪಸ್ ಕೊಟ್ಟಿದ್ದ.’

‘ತರಬೇತಿ ಮುಗಿದ ಬಳಿಕ ಯುವತಿ ಬೆಂಗಳೂರಿಗೆ ಬಂದರು. ಆ ನಂತರ ಅವರಿಗೆ ನಿತ್ಯ ಕರೆ ಮಾಡುತ್ತಿದ್ದ ಆರೋಪಿ, ಮದುವೆ ಆಗುವಂತೆ ಪೀಡಿಸಲು ಆರಂಭಿಸಿದ್ದ. ಅವರು ಒಪ್ಪದಿದ್ದಾಗ, ‘ನೀನು ನಗ್ನಳಾಗಿ ನಿಂತಿರುವ ಫೋಟೊಗಳು ನನ್ನ ಬಳಿ ಇವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇನೆ’ ಎಂದು ಬೆದರಿಸುತ್ತಿದ್ದ. ಆರಂಭದಲ್ಲಿ ಯುವತಿ ಆತನ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.’

‘ಅಂತರ್ಜಾಲದಲ್ಲಿ ಯಾವುದೋ ಯುವತಿಯ ನಗ್ನ ಚಿತ್ರವನ್ನು ಡೌನ್‌ಲೋಡ್ ಮಾಡಿದ ಆರೋಪಿ, ಅದಕ್ಕೆ ಈ ಯುವತಿಯ ಮುಖವನ್ನು ಹೊಂದಿಸಿ ಫೇಸ್‌ಬುಕ್‌ಗೆ ಹಾಕಿದ್ದ. ಅದನ್ನು ನೋಡಿ ದಿಕ್ಕು ತೋಚದಂತಾದ ಫಿರ್ಯಾದಿ, ಕೂಡಲೇ ಆತನಿಗೆ ಕರೆ ಮಾಡಿ ಫೋಟೊ ತೆಗೆಯುವಂತೆ ಅಂಗಲಾಚಿದ್ದರು.
ಆಗ ಅದನ್ನು ಅಳಿಸಿ ಹಾಕಿದ್ದ ರಾಜು, ಏಳೆಂಟು ತಿಂಗಳು ಅವರ ಸಹವಾಸಕ್ಕೆ ಹೋಗಿರಲಿಲ್ಲ’ ಎಂದು ವಿವರಿಸಿದರು.

ಐ.ಬಿ ಅಧಿಕಾರಿ ಸೋಗು: ‘ಆರು ತಿಂಗಳ ಹಿಂದೆ ಬೇರೆ ಮೊಬೈಲ್ ಸಂಖ್ಯೆಯಿಂದ ಪುನಃ ಯುವತಿಗೆ ಕರೆ ಮಾಡಿದ ರಾಜು, ‘ನಾನು ಗುಪ್ತಚರ ದಳದ ಅಧಿಕಾರಿ. ನಿಮ್ಮ ಇ–ಮೇಲ್ ಹ್ಯಾಕ್ ಆಗಿದೆ. ಮೇಲ್‌ನ ಪಾಸ್‌ವರ್ಡ್‌ ಕೊಡಿ’ ಎಂದು ಕೇಳಿದ್ದ. ಅದನ್ನು ನಂಬಿದ ಯುವತಿ, ಪಾಸ್‌ವರ್ಡ್ ಕೊಟ್ಟಿದ್ದರು.’ ಎಂದರು.

‘ಆ ನಂತರ ಆರೋಪಿ ನಿತ್ಯ ಅವರ ಮೇಲ್‌ಗಳನ್ನು ಪರಿಶೀಲಿಸುತ್ತಿದ್ದ. ಅಲ್ಲದೆ, ಬೇರೊಬ್ಬರ ಹೆಸರಿನಲ್ಲಿ ಖಾತೆ ತೆರೆದು ಅವರಿಗೆ ಅಶ್ಲೀಲ ಸಂದೇಶಗಳನ್ನೂ ಕಳುಹಿಸುತ್ತಿದ್ದ.’

‘ಈ ನಡುವೆ ತಾನು ಕೆಲಸ ಮಾಡುತ್ತಿರುವ ಕಂಪೆನಿಯ ಉದ್ಯೋಗಿ ಜತೆಗೇ ಯುವತಿಗೆ ನಿಶ್ಚಿತಾರ್ಥ ನಿಗದಿಯಾಯಿತು. ಹೀಗಾಗಿ ಅವರು ನಿಶ್ಚಿತಾರ್ಥಕ್ಕೆ ಬರುವಂತೆ ಸ್ನೇಹಿತರಿಗೆ ಇ–ಮೇಲ್ ಮೂಲಕ ಆಹ್ವಾನ ಪತ್ರಿಕೆ ಕಳುಹಿಸಿದ್ದರು. ಸದಾ ಅವರ ಮೇಲ್‌ ಪರಿಶೀಲಿಸುತ್ತಿದ್ದ ಆರೋಪಿಗೆ, ಆ ಆಹ್ವಾನ ಪತ್ರಿಕೆ ನೋಡಿ ಆಘಾತ ಉಂಟಾಗಿತ್ತು.’

‘ಬಳಿಕ ಐ.ಬಿ ಅಧಿಕಾರಿಯಂತೆಯೇ ಪುನಃ ಕರೆ ಮಾಡಿದ ಆರೋಪಿ, ‘ನೀವು ಬೋರಂಚಿ ರಾಜುನನ್ನೇ ಮದುವೆ ಆಗಿ. ಆತ ಒಳ್ಳೆಯ ಹುಡುಗ. ಬೇರೊಬ್ಬರ ಜತೆ ವಿವಾಹವಾಗಲು ನಾನು ಬಿಡುವುದಿಲ್ಲ’ ಎಂದು ಬೆದರಿಸಿದ್ದ. ಅದಕ್ಕೆ ಯುವತಿ ಒಪ್ಪಿರಲಿಲ್ಲ’ ಎಂದು ಮಾಹಿತಿ ನೀಡಿದರು.

ಮದುವೆ ಹುಡುಗನಿಗೂ ಫೋಟೊ: ‘ಫಿರ್ಯಾದಿ ನಗ್ನವಾಗಿರುವಂತೆ ಪುನಃ ಫೋಟೊಗಳನ್ನು ಎಡಿಟ್ ಮಾಡಿದ ರಾಜು, ಅವುಗಳನ್ನು ಯುವತಿ ಮದುವೆ ಆಗುತ್ತಿರುವ ಹುಡುಗನಿಗೂ ಕಳುಹಿಸಿದ್ದ. ಈ ರೀತಿಯಾಗಿ ಆರೋಪಿಯ ಕಿರುಕುಳ ತೀವ್ರಗೊಂಡಿದ್ದರಿಂದ ಅವರು ಇದೇ ಸೆ.7ರಂದು ಎಚ್‌ಎಎಲ್‌ ಠಾಣೆಗೆ ದೂರು ಕೊಟ್ಟಿದ್ದರು’ ಎಂದು ಅಧಿಕಾರಿಗಳು ಹೇಳಿದರು.

‘ಆಕೆ ನನಗೆ ಬೇಕಿತ್ತು’: ‘ನಾನು ಆಕೆಯನ್ನು ತುಂಬ ಪ್ರೀತಿ ಮಾಡುತ್ತಿದ್ದೆ. ಹೇಗಾದರೂ ಸರಿ; ಆಕೆಯನ್ನು ಪಡೆಯಲೇಬೇಕು ಎಂದುಕೊಂಡಿದ್ದೆ. ಅವಳು ಬೇರೊಬ್ಬನ ಜತೆ ಹಸೆಮಣೆ ಏರುತ್ತಿರುವ ಸಂಗತಿ ತಿಳಿದು ಹುಚ್ಚನಂತಾದೆ. ಏನಾದರೂ ಮಾಡಿ ಅವರಿಬ್ಬರ ನಡುವೆ ಬಿರುಕು ತಂದು, ಮದುವೆ ಮುರಿಯಬೇಕೆಂದು ನಾನಾ ಕಸರತ್ತು ಮಾಡಿದ್ದೆ’ ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

ಎಂಟು ಸಿಮ್ ಕಾರ್ಡ್: ಆರೋಪಿ ರಾಜು, ಯುವತಿಗೆ ಬೆದರಿಸಲು 8 ಸಿಮ್‌ ಕಾರ್ಡ್‌ ಹಾಗೂ ಎರಡು ಮೊಬೈಲ್‌ಗಳನ್ನು ಬಳಸಿದ್ದ. ಅವುಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಧೀಶರ ಆದೇಶದಂತೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT