ADVERTISEMENT

ಪ್ರವಾಸಕ್ಕೆ ಹೋಗಿದ್ದಾಗಿ ಹೇಳಿಕೆ

ಟರ್ಕಿಯಿಂದ ಗಡಿಪಾರಾದವರ ವಿಚಾರಣೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 19:55 IST
Last Updated 1 ಫೆಬ್ರುವರಿ 2015, 19:55 IST

ಬೆಂಗಳೂರು: ಟರ್ಕಿ ಮೂಲಕ ಸಿರಿಯಾಕ್ಕೆ ಅತಿಕ್ರಮ ಪ್ರವೇಶ ಮಾಡುವ ಯತ್ನದಲ್ಲಿ ಸಿಕ್ಕಿಬಿದ್ದು, ಗಡಿಪಾರಾಗಿದ್ದ ದೇಶದ ಒಂಬತ್ತು ಮಂದಿಯನ್ನು ನಗರದ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ.

ಟರ್ಕಿಯಿಂದ ಗಡಿಪಾರಾಗಿ ಶುಕ್ರವಾರ (ಜ.30) ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ್ದ ತಮಿಳುನಾಡು ಮೂಲದ ಮೊಹಮ್ಮದ್‌ ಅಬ್ದುಲ್‌ ಅಹದ್‌, ಅವರ ಪತ್ನಿ ಮತ್ತು ಐದು ಮಕ್ಕಳು, ತೆಲಂಗಾಣದ ಜಾವೇದ್‌ ಬಾಬಾ ಹಾಗೂ ರಾಜ್ಯದ ಹಾಸನ ಜಿಲ್ಲೆಯ ಇಬ್ರಾಹಿಂ ನೌಫಾಲ್‌ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

‘ಆ ಒಂಬತ್ತು ಮಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಅವರು ಪ್ರವಾಸಕ್ಕಾಗಿ ಟರ್ಕಿಗೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾರೆ. ಅವರ ಕುಟುಂಬ ಸದಸ್ಯರು ಸಹ ಅದೇ ರೀತಿ ಹೇಳಿಕೆ ಕೊಟ್ಟಿದ್ದಾರೆ’ ಎಂದು ಸಿಸಿಬಿ ಡಿಸಿಪಿ ಅಭಿಷೇಕ್‌ ಗೋಯಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅವರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದ ಬಗ್ಗೆ ಅಥವಾ ಭಯೋತ್ಪಾದನಾ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಸಂಬಂಧ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಅವರನ್ನು ವಿಚಾರಣೆ ಬಳಿಕ ಬಿಟ್ಟು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಆ ಒಂಬತ್ತು ಮಂದಿ ಪ್ರವಾಸಿ ವೀಸಾದಲ್ಲಿ 2014ರ ಡಿ.24ರಂದು ಕೆಐಎಎಲ್‌ನಿಂದ ಟರ್ಕಿಯ ಇಸ್ತಾನ್‌ಬುಲ್‌ಗೆ ಹೋಗಿದ್ದರು. ನಂತರ ಅಲ್ಲಿಂದ ಅಕ್ರಮವಾಗಿ ಸಿರಿಯಾಕ್ಕೆ ಹೊರಟಿದ್ದ ಅವರನ್ನು ಟರ್ಕಿ ಪೊಲೀಸರು ಗಡಿ ಭಾಗದಲ್ಲಿ ಬಂಧಿಸಿ, ಗಡಿಪಾರು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.