ADVERTISEMENT

ಪ್ರಾಸ ಬಿಟ್ಟ ಪದ್ಯ, ನೆಟ್‌ ಇಲ್ಲದ ಟೆನಿಸ್‌ನಂತೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2016, 19:55 IST
Last Updated 18 ಸೆಪ್ಟೆಂಬರ್ 2016, 19:55 IST
ಬಿ.ಆರ್‌. ಲಕ್ಷ್ಮಣರಾವ್‌ ಹಾಗೂ ಗಿರಿಜಾ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡರು. (ಎಡದಿಂದ) ನರಹಳ್ಳಿ ಬಾಲಸುಬ್ರಹ್ಮಣ್ಯ, ಕೆ.ಎಸ್‌. ನಿಸಾರ್‌ ಅಹಮದ್‌ ಹಾಗೂ  ಎಚ್‌.ಎಸ್‌. ವೆಂಕಟೇಶಮೂರ್ತಿ ಇದ್ದರು –ಪ್ರಜಾವಾಣಿ ಚಿತ್ರ
ಬಿ.ಆರ್‌. ಲಕ್ಷ್ಮಣರಾವ್‌ ಹಾಗೂ ಗಿರಿಜಾ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡರು. (ಎಡದಿಂದ) ನರಹಳ್ಳಿ ಬಾಲಸುಬ್ರಹ್ಮಣ್ಯ, ಕೆ.ಎಸ್‌. ನಿಸಾರ್‌ ಅಹಮದ್‌ ಹಾಗೂ ಎಚ್‌.ಎಸ್‌. ವೆಂಕಟೇಶಮೂರ್ತಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು:  ‘ನಮ್ಮ ಕಾಲದಲ್ಲಿ ಇಂದಿನ ಹಾಗೆ ಪರಸ್ಪರ ಪ್ರಶಂಸಾ ಪರಿಷತ್ತುಗಳು ಇರಲಿಲ್ಲ. ಇಂದು ಜಾತಿ, ಮತ, ಪಂಥಗಳ ಹೆಸರಿನಲ್ಲಿ ಪರಿಷತ್ತುಗಳನ್ನು ಮಾಡಿಕೊಂಡು ಬೆನ್ನು ತಟ್ಟಿಸಿಕೊಳ್ಳುತ್ತಿದ್ದಾರೆ’ ಎಂದು ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕ ಪ್ರಕಾಶನ ಭಾನುವಾರ ಆಯೋಜಿಸಿದ್ದ ಸಾಹಿತಿಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಸಂಪಾದಿ
ಸಿದ ಬಿ.ಆರ್‌. ಲಕ್ಷ್ಮಣರಾವ್‌ ಅವರ  ‘ಹಿನ್ನೋಟದ ಕನ್ನಡಿ’ ಪ್ರವೇಶಿಕೆಗಳೊಂದಿಗೆ 70 ಕವಿತೆಗಳ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
‘ಪ್ರಜಾವಾಣಿ’ಯಲ್ಲಿದ್ದ  ವೈಎನ್ಕೆ ನನ್ನ ಸ್ನೇಹಿತರಾಗಿದ್ದರು. ದಾಕ್ಷಿಣ್ಯಕ್ಕೂ ಕೂಡ ಸುಮ್ಮನೇ ನನ್ನನ್ನು ಹೊಗಳುತ್ತಿರಲಿಲ್ಲ. ನಾನೂ ಅಷ್ಟೇ ಒಂದು ಪದ್ಯ ಪ್ರಕಟಿಸು ಎಂದು ಕೇಳುತ್ತಿರಲಿಲ್ಲ. ಅಂಥ ವಾತಾವರಣದಲ್ಲಿ ಬೆಳೆದವರು ನಾವು’ ಎಂದರು.

‘ಲಕ್ಷ್ಮಣರಾವ್‌ ನನ್ನ ಶಿಷ್ಯ. ಆದರೆ ನನ್ನ ತರಗತಿಗಳಿಗೇ ಹಾಜರಾಗುತ್ತಿರಲಿಲ್ಲ. ಆದರೆ ಪಿಯುಸಿಯಲ್ಲಿ ಸಂಸ್ಕೃತ ವಿಷಯದಲ್ಲಿ ರ್‌್್ಯಾಂಕ್‌ ಬಂದಿದ್ದ. ಈತನ ಪದ್ಯದಲ್ಲೂ ಸಂಸ್ಕೃತ ಬಳಸಿದ್ದಾನೆ’ ಎಂದು ತಮಾಷೆಯಾಗಿ ಹೇಳಿದರು.

‘1962ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿತ್ತು. ಆ ವರದಿಗಳನ್ನು ರೇಡಿಯೊದಲ್ಲಿ ಕೇಳುತ್ತಿದ್ದೆವು. ಮಣಿಪುರ ಸಮೀಪದ ಹಳ್ಳಿ ಜನ ವಲಸೆ ಹೋಗಿದ್ದರು. ಅಂದಿನ ರಾಜಕೀಯ  ದೊಂಬಾರಾಟ ನೋಡಿ ನೊಂದು ‘ಕುರಿಗಳು ಸಾರ್‌ ಕುರಿಗಳು’ ಪದ್ಯಬರೆದೆ. ವಾಡಿಯಾ ರಸ್ತೆಯಲ್ಲಿ ಕುರಿಗಾಹಿಯೊಬ್ಬ ಕುರಿಮಂದೆ ಹೊಡೆದುಕೊಂಡು ಹೋಗುತ್ತಿದ್ದ ದೃಶ್ಯ ನೋಡಿ ಪದ್ಯ ಬರೆದೆ’ ಎಂದು ನೆನಪಿಸಿಕೊಂಡರು.

‘ಲಕ್ಷ್ಮಣರಾವ್‌ ಕಾವ್ಯಗಳನ್ನು ಪ್ರಾಸ ಬಿಟ್ಟು ಬರೆಯೋದಿಲ್ಲ. ಪ್ರಾಸ ಬಿಟ್ಟು ಪದ್ಯ ಬರೆದರೆ ನೆಟ್‌ ಇಲ್ಲದೇ ಟೆನಿಸ್‌ ಆಡಿದಂತೆ’ ಎಂದರು.
ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಮಾತನಾಡಿ, ‘ಲಕ್ಷ್ಮಣರಾವ್‌ ಅವರಿಗೆ 70 ತುಂಬಿದ ಈ ವೇಳೆ 70 ಕವಿತೆಗಳನ್ನು ಆಯ್ಕೆ ಮಾಡಿ ಅವರಿಗೇ ಓದಿಸಲು ಹೊರಟಿದ್ದೇವೆ. ಇದು ಕವಿಗೆ ಒಂದು ಭಾಗ್ಯ. ಕವಿತೆಯನ್ನು ಒಬ್ಬರು ಓದುವುದಿಲ್ಲ, ಅನೇಕರು ಅನೇಕ ಕಡೆ ಅನೇಕ ಕಾಲದಲ್ಲಿ ಓದುತ್ತಾರೆ. ಅದು ಕವಿತೆ ಭಾಗ್ಯ. ಅಂತಾ ಭಾಗ್ಯ ದೊರೆತರೆ ಅದನ್ನು ಬರೆದ ಕವಿ ಕೃತಜ್ಞನಾದಂತೆ’ ಎಂದರು.

‘ಬಹಳಷ್ಟು ಕವಿಗಳ ಆದರ್ಶ ಸಮುದಾಯದ ಪರವಾಗಿ ಮಾತನಾಡಬೇಕು ಎಂಬುದಾಗಿರುತ್ತದೆ. ಆದರೆ ಲಕ್ಷ್ಮಣರಾವ್‌  ಯಾವ ಸಮುದಾಯದ ಪರವಾಗಿ ನಿಂತವರಲ್ಲ’ ಎಂದರು.

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಲಕ್ಷ್ಮಣರಾವ್‌ ಅವರನ್ನು ಪೋಲಿ, ಉಲ್ಲಾಸದ ಕವಿ ಎಂದು ಕರೆಯುತ್ತಾರೆ. ಅದು ಒಂದು ಭಾಗವಷ್ಟೇ. ಅದಕ್ಕಿಂತ ಗಂಭೀರವಾದ, ಅಧ್ಯಯನ ಮಾಡಬಹುದಾದ, ಕನ್ನಡ ಪರಂಪರೆಗೆ ಸೇರಬೇಕಾದ ಅನೇಕ ಅಂಶಗಳು ಅವರ ಕಾವ್ಯಗಳಲ್ಲಿವೆ’ ಎಂದು ಹೊಗಳಿದರು.

ಬಿ.ಆರ್‌. ಲಕ್ಷ್ಮಣರಾವ್‌ ಮಾತನಾಡಿ, ‘55 ವರ್ಷಗಳ ಹಿಂದೆ ನಾನು ಬರೆಯಲು ಆರಂಭಿಸಿದೆ. 1966ರಲ್ಲಿ ನನ್ನ ಮೊದಲ ಕವಿತೆ ಪ್ರಕಟವಾಯಿತು. ಈ ಸಾಹಿತ್ಯಯಾನದಲ್ಲಿ ಇಂದು ಧನ್ಯತೆಯ ದಿನ. ನಿಸಾರ್‌ ಅಹಮದ್‌ ಅವರ ‘ಮದುವೆ’ ಪದ್ಯವನ್ನು ನಿಯತಕಾಲಿಕೆಯಲ್ಲಿ ಓದಿದೆ, ತುಂಬಾ ಇಷ್ಟವಾಗಿ ಹಾಳೆಯಲ್ಲಿ ಬರೆದು ಕೊಂಡೆ. ಅವರ ಪದ್ಯ ನನಗೆ ಕಾವ್ಯ ಬರೆಯಲು ಪ್ರಭಾವ ಬೀರಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.