ADVERTISEMENT

ಫಾರ್ಮ್‌ಹೌಸ್‌ನಲ್ಲಿ ಹೂತಿಟ್ಟಿದ್ದ ಆನೆ ದಂತ ಜಪ್ತಿ: ಇಬ್ಬರ ಬಂಧನ

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಶೂಟೌಟ್ ಪ್ರಕರಣದ ಆರೋಪಿ ಬಾಯ್ಬಿಟ್ಟ ಮಾಹಿತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:31 IST
Last Updated 17 ಫೆಬ್ರುವರಿ 2017, 19:31 IST
ಆನೆ ದಂತ ಮಾರಾಟ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ಆರೋಪಿಗಳು
ಆನೆ ದಂತ ಮಾರಾಟ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ಆರೋಪಿಗಳು   
ಬೆಂಗಳೂರು: ಆನೆ ದಂತಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಹರ್ಷ (29) ಹಾಗೂ ರಂಜು ಅಲಿಯಾಸ್ ಕಾಂತ (31) ಎಂಬುವರನ್ನು ಬಂಧಿಸಿರುವ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು, ಎಂಟು ಕೆ.ಜಿ ತೂಕದ ಎರಡು ದಂತಗಳನ್ನು ಜಪ್ತಿ ಮಾಡಿದ್ದಾರೆ.
 
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನಲ್ಲಿ ಇದೇ ಜ.23ರಂದು ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿ ಆಶ್ರಯ್, ಈ ಆರೋಪಿಗಳಿಗೆ ಆನೆ ದಂತಗಳನ್ನು ಇಟ್ಟುಕೊಳ್ಳಲು ಕೊಟ್ಟಿದ್ದ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
 
ಬಿ.ಎ ಪದವೀಧರನಾದ ಹರ್ಷ, ಹಾಸನದ ಅನಗಟ್ಟ ಗ್ರಾಮದವನು. ಕಾಂತ ಪಕ್ಕದ ಮೋಗಳ್ಳಿಯವನು. ಇಬ್ಬರೂ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಾರೆ.
 
‘ನಮ್ಮ ಬಳಿ ಎರಡು ಆನೆ ದಂತಗಳಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ’ ಎಂದು ಅವರು ಆಪ್ತರ ಬಳಿ ಹೇಳಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಬಾತ್ಮೀದಾರರೊಬ್ಬರು, ಅರಣ್ಯ ಘಟಕದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು.
 
‘ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ಬಲರಾಮೇಗೌಡ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದೆವು. ಆನೆ ದಂತ ಖರೀದಿಸುವವರ ಸೋಗಿನಲ್ಲಿ ಹರ್ಷನಿಗೆ ಕರೆ ಮಾಡಿದ ಸಿಬ್ಬಂದಿ, ಈ ಬಗ್ಗೆ ಮಾತುಕತೆ ನಡೆಸಲು ಧರ್ಮಸ್ಥಳದ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನ ಬಳಿ ಬರುವಂತೆ ಸೂಚಿಸಿದ್ದರು. ಅಂತೆಯೇ, ಫೆ.16ರ ಮಧ್ಯಾಹ್ನ ಅವರು ಕಾರಿನಲ್ಲಿ ಎರಡು ದಂತಗಳನ್ನು ಇಟ್ಟುಕೊಂಡು ಕಾಲೇಜಿನ ಬಳಿ ಬಂದಿದ್ದರು. ಆಗ ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
 
ಹರ್ಷನನ್ನು ವಿಚಾರಣೆಗೆ ಒಳಪಡಿಸಿದಾಗ, ‘ಶೂಟೌಟ್ ಪ್ರಕರಣದಲ್ಲಿ ಜೈಲು ಸೇರಿರುವ ಸೋದರ ಸಂಬಂಧಿ ಆಶ್ರಯ್‌, ನಮಗೆ ಆನೆ ದಂತಗಳನ್ನು ಕೊಟ್ಟಿದ್ದ. ಮನೆಯಲ್ಲಿ ಇಡುವುದು ಸೂಕ್ತವಲ್ಲವೆಂದು ಮಲ್ಲಾಪುರ ಗ್ರಾಮದಲ್ಲಿರುವ ಆಶ್ರಯ್‌ನ ಫಾರ್ಮ್‌ಹೌಸ್‌ನಲ್ಲೇ ಅವುಗಳನ್ನು ಹೂತಿಟ್ಟಿದ್ದೆವು. ಮಾರುವ ಉದ್ದೇಶದಿಂದ ಫೆ.15ರ ಸಂಜೆ ಹೊರತೆಗೆದಿದ್ದೆವು’ ಎಂದು ಆತ ಹೇಳಿಕೆ ಕೊಟ್ಟಿದ್ದಾಗಿ ತನಿಖಾಧಿಕಾರಿಗಳು ಮಾಹಿತಿ ನೀಡಿದರು.
 
‘ಆರೋಪಿ ಆಶ್ರಯ್, ₹ 4 ಸಾವಿರದ ವಿಚಾರಕ್ಕೆ ತನ್ನೂರಿನ ಕುಮಾರ್ ಎಂಬುವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಈ ಸಂಬಂಧ ಹಲಸೂರು ಗ್ರಾಮದ ಪೊಲೀಸರು ಆತನನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ಆಶ್ರಯ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ಅಧಿಕಾರಿಗಳು ಹೇಳಿದರು. 
 
‘ಕಲಾಕೃತಿಗಳ ತಯಾರಿಕೆಗೆ, ಕುಸುರಿ ಕೆಲಸಗಳಿಗೆ, ವಿನ್ಯಾಸದ ಆಭರಣ ತಯಾರಿಕೆಗೆ ಆನೆ ದಂತಗಳನ್ನು ಬಳಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ ದಂತಕ್ಕೆ ₹ 1 ಲಕ್ಷ ಬೆಲೆ ಇದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.