ADVERTISEMENT

ಬಡವರಿಗೆ ನೆರವಾಗುವ ಹೋಮಿಯೋಪತಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2013, 19:46 IST
Last Updated 29 ಏಪ್ರಿಲ್ 2013, 19:46 IST

ಬೆಂಗಳೂರು: ಅಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತ್ತು. ಕಪ್ಪು ಗೌನ್ ತೊಟ್ಟಿದ್ದ ಯುವ ವೈದ್ಯರು  ಉತ್ಸಾಹದಿಂದ ಅಲ್ಲಿ ಸೇರಿದ್ದರು. ತಮ್ಮ ಕೋರ್ಸ್‌ನಲ್ಲಿ ಕಲಿತ ವಿದ್ಯೆಯನ್ನು ಸಮಾಜದ ಒಳಿತಿಗೆ ಧಾರೆ ಎರೆಯುವ ಕಾತರತೆ ಅವರಲ್ಲಿತ್ತು. ಭಗವಾನ್ ಬುದ್ಧ ಹೋಮಿಯೋಪತಿಕ್ ವೈದ್ಯಕೀಯ ವಿದ್ಯಾಲಯ ಮತ್ತು ಆಸ್ಪತ್ರೆಯು ಸೋಮವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಕಂಡು ಬಂದ ದೃಶ್ಯ ಇದು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್.ಶ್ರೀಪ್ರಕಾಶ್ ಅವರು ಪದವಿ ಪಡೆದ ವೈದ್ಯರನ್ನು ಹಾರೈಸಿ ಮಾತನಾಡಿ, ಹೋಮಿಯೋಪತಿ ಜನಪ್ರಿಯ ವೈದ್ಯ ಪದ್ಧತಿಯಾಗಿದ್ದು, ಎರಡು ಶತಮಾನಗಳಿಗೂ ಅಧಿಕ ಇತಿಹಾಸವನ್ನು ಹೊಂದಿದೆ. ಹಲವು ಗುಣವಾಗದ ಕಾಯಿಲೆಗಳಿಗೆ ಹೋಮಿಯೋಪತಿಯಲ್ಲಿ ಚಿಕಿತ್ಸೆ ಲಭ್ಯವಿದೆ ಎಂದರು.

ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುತ್ತಿರುವವರ ಸಂಖ್ಯೆ ಶೇ 20ರಷ್ಟು ಮಾತ್ರ. ಅದರಲ್ಲಿ ಹೋಮಿಯೋಪತಿ ವೈದ್ಯ ಪದ್ದತಿಯಲ್ಲಿ ಶೇ 8 ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ  ಹೋಗುತ್ತಿದ್ದಾರೆ. ಹೋಮಿಯೋಪತಿಯಲ್ಲಿ ಹೊಸ ಹೊಸ ಸಂಶೋಧನೆಗಾಗಿ ಹೆಚ್ಚು ಜನರು ಉನ್ನತ ಅಧ್ಯಯನವನ್ನು ಕೈಗೊಳ್ಳಬೇಕು' ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಜನರು ಆರೋಗ್ಯದ ಕುರಿತು ಕಾಳಜಿ ವಹಿಸುವುದಿಲ್ಲ. ನೂತನ ವೈದ್ಯರು ತಮ್ಮ ಸೇವೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸುವ ಮೂಲಕ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು  ಮುಂದಾಗಬೇಕು ಎಂದು  ಹೇಳಿದರು.

ಭಗವಾನ್ ಬುದ್ಧ ಹೋಮೊಯೋಪತಿ ವೈದ್ಯಕೀಯ ವಿದ್ಯಾಲಯದ ಸಂಸ್ಥಾಪಕ ಕಾರ್ಯದರ್ಶಿ ಕೆ.ಚಂದ್ರಶೇಖರ್ ಮಾತನಾಡಿ, ಹೋಮಿಯೋಪತಿ ವೈದ್ಯ ಪದ್ಧತಿಯು ಅತ್ಯಂತ ಸರಳ ಚಿಕಿತ್ಸಾ ವಿಧಾನವಾಗಿದೆ. ಈ ಪದ್ಧತಿಯಿಂದ ಬಡ ರೋಗಿಗಳಿಗೆ ಹೆಚ್ಚಿನ ಸಹಾಯವಾಗಲಿದೆ ಎಂದರು.

ಪದವಿ ಪಡೆದ ವೈದ್ಯರು ಹೋಮಿಯೋಪಥಿಯಲ್ಲಿ ಉನ್ನತ ಸಂಶೋಧನೆ ಕೈಗೊಳ್ಳುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಗುರಿ ಹೊಂದಬೇಕು ಎಂದು ಹೇಳಿದರು.

ವಿದ್ಯಾಲಯದ ಪ್ರಾಂಶುಪಾಲ ಡಾ.ಗಿ.ಸತೀಶ್ ಕುಮಾರ್, ಡೀನ್ ಡಾ.ಡಿ.ಎಸ್.ಪ್ರಭಾಕರ್, ವ್ಯವಸ್ಥಾಪಕ ಟ್ರಸ್ಟಿ ಎಚ್.ಸಿ.ಕಮಲಮ್ಮ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಡಾ. ಎಚ್.ಶಿಂಧೆ ಭೀಮಸೇನ್‌ರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

`ಹೋಮಿಯೋಪತಿಯಲ್ಲಿ ಪದವಿ ಪಡೆಯುವುದು ನನ್ನ ಕನಸಾಗಿತ್ತು. ಇದರಲ್ಲಿಯೇ ಉನ್ನತ ಅಧ್ಯಯನ ಕೈಗೊಳ್ಳುವ ಆಸೆ ಇದೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸುವುದು ನನ್ನ ಗುರಿ'
-ಡಾ.ಪ್ರೇಮಜ್ಯೋತಿ ಫ್ರೇಸರ್,
ನೂತನ ಪದವೀಧರೆ.

`ಗ್ರಾಮೀಣ ಪ್ರದೇಶದಲ್ಲಿ ಹೋಮಿಯೋಪತಿ ವೈದ್ಯ ಪದ್ದತಿ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ನೆರವಾಗುತ್ತೇನೆ'
- ಡಾ.ಪ್ರದೀಪ್,
ನೂತನ ಪದವೀಧರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT