ADVERTISEMENT

ಬಣ್ಣದಾಟಕ್ಕೆ ನೀರು ಬಳಸಿದ್ದಕ್ಕೆ ಕಾರ್ಮಿಕನ ಕೊಲೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 20:01 IST
Last Updated 12 ಮಾರ್ಚ್ 2017, 20:01 IST

ಬೆಂಗಳೂರು: ಸುಬ್ರಹ್ಮಣ್ಯಪುರ ಬಳಿ ಭಾನುವಾರ ಪಶ್ಚಿಮ ಬಂಗಾಳದ ಕಾರ್ಮಿಕ ಬಿಶ್ವಜಿತ್‌ ದತ್ತಾ (27) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ 9 ಮಂದಿ ಸಹೋದ್ಯೋಗಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಬಿಶ್ವಜಿತ್‌, ಅದೇ ಕಟ್ಟಡ  ಬಳಿಯ ಶೆಡ್‌ನಲ್ಲಿ  ಬಿಹಾರ, ಅಸ್ಸಾಂ ರಾಜ್ಯದ ಸಹೋದ್ಯೋಗಿಗಳೊಂದಿಗೆ ನೆಲೆಸಿದ್ದರು.

‘ಹೋಳಿ ಹಬ್ಬದ ಪ್ರಯುಕ್ತ ಭಾನುವಾರ ಬೆಳಿಗ್ಗೆ ಬಿಶ್ವಜಿತ್‌ ಒಬ್ಬನೇ ಬಣ್ಣದಾಟ ಆಡಲು ಶುರುಮಾಡಿದ್ದರು. ಬಣ್ಣ ಮಿಶ್ರಣಕ್ಕಾಗಿ ಕಟ್ಟಡ ಬಳಿಯ ತೊಟ್ಟಿಯಿಂದ ನೀರು ತೆಗೆದುಕೊಳ್ಳಲು ಹೋಗಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಹೋದ್ಯೋಗಿಯೊಬ್ಬ ನೀರು ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದ. ಅದೇ ಕಾರಣಕ್ಕೆ ಅವರಿಬ್ಬರ ಮಧ್ಯೆ ಜಗಳ ಶುರುವಾಗಿತ್ತು’

ADVERTISEMENT

‘ಬಳಿಕ ಸಹೋದ್ಯೋಗಿಯು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಬಿಶ್ವಜಿತ್‌ನ ತಲೆಗೆ ಕಟ್ಟಿಗೆಯಿಂದ ಹೊಡೆದಿದ್ದ. ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಅವರು ಅಸುನೀಗಿದರು’ ಎಂದು ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ತಿಳಿಸಿದರು. 

‘ಕಟ್ಟಡದಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 9 ಮಂದಿ ಕಾರ್ಮಿಕರು ಈ ಕೃತ್ಯ ಎಸಗಿರುವ ಅನುಮಾನವಿದೆ.  ಅವರೆಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.