ADVERTISEMENT

ಬತ್ತಿದ ಕೃಷ್ಣರಾಜಪುರದ ದೇವಸಂದ್ರ ಕೆರೆ

ಕೆರೆ ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ, ರಾಜಕಾಲುವೆ ವಿಭಾಗದ ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಕೃಷ್ಣರಾಜಪುರ ಕ್ಷೇತ್ರದ ದೇವಸಂದ್ರ ಕೆರೆ ಸಂಪೂರ್ಣವಾಗಿ ಒಣಗಿದೆ.
ಕೃಷ್ಣರಾಜಪುರ ಕ್ಷೇತ್ರದ ದೇವಸಂದ್ರ ಕೆರೆ ಸಂಪೂರ್ಣವಾಗಿ ಒಣಗಿದೆ.   
ಬೆಂಗಳೂರು: ಕೃಷ್ಣರಾಜಪುರ ಕ್ಷೇತ್ರದ ದೇವಸಂದ್ರ ಕೆರೆ ನೀರಿಲ್ಲದೆ ಸಂಪೂರ್ಣ ಒಣಗಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ ಹಾಗೂ ರಾಜಕಾಲುವೆ ವಿಭಾಗದ ಅಧಿಕಾರಿಗಳು  ಬುಧವಾರ ಕೆರೆಯನ್ನು ಪರಿಶೀಲಿಸಿದರು.
 
‘ಕೆರೆಗೆ  ತಂತಿ ಬೇಲಿ ಅಳವಡಿಸಿದ್ದೇವೆ.  ಕೆರೆ ಸುತ್ತಮುತ್ತ ವಿಹಾರ ಪಥ ನಿರ್ಮಿಸಿದ್ದೇವೆ. ಕಲ್ಲು ಕಟ್ಟಿ ಕೆರೆ ಅಂಚನ್ನು ಬಲಪಡಿಸಲಾಗಿದೆ.  ಕೆಲವರು ಕೆರೆಗೆ ಹೊಂದಿಕೊಂಡಿರುವ ರಾಜಕಾಲುವೆಗಳಿಗೆ ಕಸ ಸುರಿಯುತ್ತಿದ್ದಾರೆ. ಇವರನ್ನು ಪತ್ತೆ ಹಚ್ಚಿ ದಂಡ ವಿಧಿಸಬೇಕು’ ಎಂದು ಪಾಲಿಕೆ ಸದಸ್ಯ ಜಯಪ್ರಕಾಶ ಒತ್ತಾಯಿಸಿದರು. 
 
‘ಕೆರೆ ಪಕ್ಕದಲ್ಲಿ ತ್ಯಾಜ್ಯನೀರು ಸಂಸ್ಕರಣ ಘಟಕ  ನಿರ್ಮಿಸಬೇಕು. ಕೆರೆಗೆ ರಾಜಕಾಲುವೆ ಮೂಲಕ ಹರಿದು ಬರುವ ಒಳಚರಂಡಿ ನೀರನ್ನು ಸಂಸ್ಕರಿಸಿದ ಬಳಿಕವೇ  ಕೆರೆಗೆ ಬಿಡಬೇಕು’ ಎಂದರು. 
 
‘ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಟ್ಟಡಗಳ  ತ್ಯಾಜ್ಯ ನೀರನ್ನು ಹಾಗೂ ಒಳಚರಂಡಿ ನೀರನ್ನು ಕೆರೆಗೆ ಬಿಡಬಾರದು’ ಎಂದು  ಅವರು ಸ್ಥಳೀಯರಲ್ಲಿ ವಿನಂತಿ ಮಾಡಿಕೊಂಡರು.
 
 ಮಳೆ ನೀರು ಮಾತ್ರ ಕೆರೆಯಲ್ಲಿ ಸಂಗ್ರಹಗೊಳ್ಳುವಂತಾಗಬೇಕು. ಮಳೆಗಾಲ ಆರಂಭಗೊಳ್ಳುವ ಮುನ್ನ ಕೆರೆಯನ್ನು ಸ್ಚಚ್ಛಗೊಳಿಸಲು ಕ್ರಮ          ಕೈಗೊಳ್ಳಬೇಕು ಎಂದು ಅವರು  ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
 
‘ಕೆರೆಯ ಪರಿಸರವನ್ನು ಶೀಘ್ರದಲ್ಲೇ ಸ್ವಚ್ಛಗೊಳಿಸುತ್ತೇವೆ. ಕೆರೆಗೆ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ  ಅಧಿಕಾರಿ ಜಗನ್ನಾಥ ರಾವ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.