ADVERTISEMENT

‘ಬದಲಾವಣೆಗೆ ಧೈರ್ಯದಿಂದ ಮುನ್ನುಗ್ಗಿ’: 5ರಂದು ನಡಿಗೆ

ಮಹಿಳಾ ಉದ್ಯಮಿಗಳ ಒಕ್ಕೂಟದಿಂದ ವಾಕಥಾನ್‌

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:45 IST
Last Updated 2 ಮಾರ್ಚ್ 2017, 19:45 IST
ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಉದ್ಯಮಿಗಳ ಒಕ್ಕೂಟ ಬೆಂಗಳೂರಿನಲ್ಲಿ ವಾಕಥಾನ್‌ ಮತ್ತು ಮಹಿಳಾ ಸಮಸ್ಯೆಗಳ ಕುರಿತ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ.
 
‘ಬದಲಾವಣೆಗೆ ಧೈರ್ಯದಿಂದ ಮುನ್ನುಗ್ಗಿ’ ಎಂಬ ಘೋಷವಾಕ್ಯದಡಿ ಈ ಬಾರಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾರ್ಚ್‌ 5ರಂದು ‘ಪರ್ಪಲ್‌ ಆನ್‌ ಹೀಲ್‌’ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೆಳಿಗ್ಗೆ 6 ಗಂಟೆಗೆ ಕಬ್ಬನ್‌ ಪಾರ್ಕ್‌ನಿಂದ ಪ್ರಾರಂಭವಾಗುವ ಈ ನಡಿಗೆ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದವರೆಗೆ ಸಾಗಿ ವಾಪಸ್‌ ಕಬ್ಬನ್‌ ಪಾರ್ಕ್‌ ಬಂದು ಸೇರುತ್ತದೆ.
 
‘ಸುಮಾರು 2,500 ಮಹಿಳೆಯರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರೂ ನೇರಳೆ ಬಣ್ಣದ ಟೀಶರ್ಟ್‌ ಧರಿಸಿ ಈ ನಡಿಕೆಯಲ್ಲಿ ಭಾಗವಹಿಸುತ್ತಾರೆ’ ಎಂದು ಮಹಿಳಾ ಉದ್ಯಮಿಗಳ ಒಕ್ಕೂಟದ ಸಂಸ್ಥಾಪಕ ಮುಖ್ಯಸ್ಥೆ ರೂಪಾರಾಣಿ ತಿಳಿಸಿದರು.
 
‘ನಗು ಯೋಗ’, ಫಿಟ್ನೆಸ್‌ ತಜ್ಞೆ ವನಿತಾ ಅಶೋಕ್‌ ಅವರಿಂದ ಆಹಾರ ಶೈಲಿ, ಫಿಟ್ನೆಸ್‌ ಕುರಿತು ಜಾಗೃತಿ ಕಾರ್ಯಕ್ರಮ,  ಉಚಿತ ಮೂಳೆ ಸಾಂದ್ರತೆ ಪರೀಕ್ಷೆ, ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಯುತ್ತದೆ.  
 
ಲೈಂಗಿಕ ದೌರ್ಜನ್ಯ ಎಸಗುವವರು ಹಾಗೂ ಚುಡಾಯಿಸುವವರಿಂದ ಮಹಿಳೆ ಹೇಗೆ ಸ್ವರಕ್ಷಣೆ ಮಾಡಿಕೊಳ್ಳಬೇಕು ಎಂಬ ವಿಷಯದ ಕುರಿತು 10 ಮಹಿಳೆಯರು ಬೀದಿ ನಾಟಕ ಪ್ರದರ್ಶಿಸಲಿದ್ದಾರೆ.
 
ಮಾರ್ಚ್‌್ 8ರಂದು ನಡೆಯುವ ವಿಚಾರ ಸಂಕಿರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ಘಾಟಿಸಲಿದ್ದಾರೆ. ಸಚಿವರಾದ ಆರ್‌.ವಿ.ದೇಶಪಾಂಡೆ, ಪ್ರಿಯಾಂಕ್ ಖರ್ಗೆ ಭಾಗವಹಿಸಲಿದ್ದಾರೆ. ಮಹಿಳೆಯರಿಗಾಗಿ ಇರುವ ಯೋಜನೆಗಳ ಕುರಿತು ಅವರು ಮಾಹಿತಿ ನೀಡುತ್ತಾರೆ.
 
ಮಹಿಳಾ ಉದ್ಯಮಿಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಇರುವ ಅವಕಾಶಗಳ ಕುರಿತು ಸಂವಾದ, ಬ್ರಿಟನ್‌–ಭಾರತ ಮಹಿಳಾ ಆಯೋಗದ ಯೋಜನೆಯೊಂದು ಪ್ರಕಟಗೊಳ್ಳಲಿದೆ, ಬೆಂಗಳೂರಿನಲ್ಲಿರುವ ಹಾರ್ಲಿ ಡೇವಿಡ್ ಸನ್‌ ಮಹಿಳಾ ಬೈಕರ್ಸ್‌ ತಂಡದ ಮುಖ್ಯಸ್ಥೆ ಸಹ ಮಾತನಾಡಲಿದ್ದಾರೆ. ಮಹಿಳಾ ಉದ್ಯಮಿಗಳಿಗೆ ವಿಶ್ವದಾದ್ಯಂತ ಇರುವ ಅವಕಾಶಗಳ ಬಗ್ಗೆಯೂ ಈ ವಿಚಾರ ಸಂಕಿರಣದಲ್ಲಿ ಚರ್ಚಿಸಲಾಗುವುದು.
 
‘ಮಹಿಳಾ ಸ್ವ ಉದ್ಯೋಗಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಇರುತ್ತದೆ. ಆಭರಣ, ಉಡುಗೆ, ಶಿಕ್ಷಣದ ಕುರಿತಾದ ಒಟ್ಟು 10 ಮಳಿಗೆಗಳಿಗೆ ಅವಕಾಶ ನೀಡಿದ್ದೇವೆ’ ಎಂದು ರೂಪಾರಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.