ADVERTISEMENT

ಬಸವನಗುಡಿ ಮೇಲ್ಸೇತುವೆ ಸಂಚಾರ ತಾತ್ಕಾಲಿಕ ಬಂದ್‌

ಬಿಬಿಂಎಪಿ ವತಿಯಿಂದ ಜ. 20ರಿಂದ ದುರಸ್ತಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:46 IST
Last Updated 18 ಜನವರಿ 2017, 19:46 IST

ಬೆಂಗಳೂರು: ಬಸವನಗುಡಿಯ ನ್ಯಾಷನಲ್‌ ಕಾಲೇಜು ಬಳಿಯ ಮೇಲ್ಸೇತುವೆಯ ದುರಸ್ತಿಗಾಗಿ ಜ. 20ರಿಂದ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಅದರಿಂದಾಗಿ ಮೇಲ್ಸೇತುವೆಯಲ್ಲಿ ತಿಂಗಳವರೆಗೆ ವಾಹನ ಸಂಚಾರ ಬಂದ್‌ ಆಗಲಿದೆ.

ನಗರದ ಹಲವು ಮೇಲ್ಸೇತುವೆಗಳ ದುರಸ್ತಿಗಾಗಿ ಕ್ರಮ ಕೈಗೊಂಡಿರುವ ಬಿಬಿಎಂಪಿ, ಈಗ ನ್ಯಾಷನಲ್‌ ಕಾಲೇಜು ಬಳಿಯ ಮೇಲ್ಸೇತುವೆ ದುರಸ್ತಿಗೆ ಕಾಮಗಾರಿ ಆರಂಭಿಸಲು ಸಿದ್ಧವಾಗಿದೆ.

ಈ ಬಗ್ಗೆ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಜ. 20ರಿಂದ ತಿಂಗಳವರೆಗೆ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಿ ಕಾಮಗಾರಿ ನಡೆಯಲು ಸಹಕಾರ ನೀಡುವಂತೆ ಕೋರಿದ್ದಾರೆ.

ಅದರನ್ವಯ ಕಾಮಗಾರಿ ಮುಕ್ತಾಯಗೊಳ್ಳುವರೆಗೂ ಮೇಲ್ಸೇತುವೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಜತೆಗೆ  ವಾಹನಗಳ  ಸಂಚಾರಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ.

‘750 ಮೀಟರ್‌ ಉದ್ದವಿರುವ ಈ ಮೇಲ್ಸೇತುವೆ ಮೂಲಕ ಜಯನಗರ, ಲಾಲ್‌ಬಾಗ್, ಮಿನರ್ವ ವೃತ್ತ ಸೇರಿದಂತೆ ಹಲವು ಪ್ರದೇಶಗಳ ಪ್ರಯಾಣಿಕರು ಸಂಚರಿಸುತ್ತಾರೆ.

 ಕಾಮಗಾರಿ ಆರಂಭವಾದ ಬಳಿಕ ಅವರೆಲ್ಲರೂ ಬದಲಿ ಮಾರ್ಗದ ಮೂಲಕ ಸಂಚರಿಸಬೇಕು’ ಎಂದು ಬಸವನಗುಡಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ತಿಳಿಸಿದರು.

‘ರಾಮಕೃಷ್ಣ ಆಶ್ರಮ ವೃತ್ತದಿಂದ ವಾಣಿವಿಲಾಸ್‌ ಮತ್ತು ಶಂಕರಮಠ ಜಂಕ್ಷನ್‌ನಿಂದ ಮೇಲ್ಸೇತುವೆ ಮೂಲಕ ಲಾಲ್‌ ಬಾಗ್‌ ಪಶ್ಚಿಮ ಗೇಟ್‌ ಕಡೆ ಹೋಗುತ್ತಿದ್ದ ವಾಹನಗಳ  ಸಂಚಾರವನ್ನು ಮೇಲ್ಸೇತುವೆ ಮೇಲೆ  ನಿಷೇಧಿಸಲಾಗಿದೆ.’ ‘ಈ ವಾಹನಗಳು, ಮೇಲ್ಸೇತುವೆಯ ಸರ್ವೀಸ್‌ ರಸ್ತೆಯಲ್ಲಿ ಸಂಚರಿಸಿ  ನ್ಯಾಷನಲ್‌ ಕಾಲೇಜು ವೃತ್ತದ ಮಾರ್ಗವಾಗಿ ಮುಂದೆ ಹೋಗಬಹುದು’ ಎಂದು ಹೇಳಿದರು.

‘ಶೇಷಮಹಲ್‌ ವೃತ್ತದಿಂದ ರಾಮಕೃಷ್ಣ ಆಶ್ರಮದ ಕಡೆಗೆ ಹೋಗುವ  ವಾಹನಗಳು ಮೇಲ್ಸೇತುವೆ ಮೇಲೆ ಹೋಗುವಂತಿಲ್ಲ. ಅವುಗಳು ಸರ್ವೀಸ್‌ ರಸ್ತೆಯಲ್ಲಿ ಸಂಚರಿಸಿ, ನ್ಯಾಷನಲ್‌ ಕಾಲೇಜು ವೃತ್ತದ ಮೂಲಕ ರಾಮಕೃಷ್ಣ ಆಶ್ರಮ ವೃತ್ತದ ಕಡೆಗೆ ಹೋಗಬಹುದು’ ಎಂದು ಇನ್‌ಸ್ಪೆಕ್ಟರ್‌ ವಿವರಿಸಿದರು.

‘ನಗರದ ಒಂದೊಂದೇ ಮೇಲ್ಸೇತುವೆಯನ್ನು ದುರಸ್ತಿ ಮಾಡಲಾಗುತ್ತಿದೆ. ಈಗಾಗಲೇ ರಿಚ್ಮಂಡ್‌ ಸೇರಿ ಹಲವು ಮೇಲ್ಸೇತುವೆಗಳು ದುರಸ್ತಿ ಮಾಡಲಾಗಿದೆ. ಈಗ ನ್ಯಾಷನಲ್‌ ಕಾಲೇಜು ಬಳಿಯ ಮೇಲ್ಸೇತುವೆ ದುರಸ್ತಿಗೆ ಚಾಲನೆ ನೀಡಲಾಗಿದೆ’ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.