ADVERTISEMENT

ಬಸ್‌ ಸಂಚಾರ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 19:56 IST
Last Updated 31 ಜುಲೈ 2014, 19:56 IST

ಬೆಂಗಳೂರು: ಬೆಂಗಳೂರು ಬಂದ್‌ ಪರಿಣಾಮ ಬಿಎಂಟಿಸಿ ಬಸ್‌ಗಳಿಗೆ ತಟ್ಟಲಿಲ್ಲ. ಬಸ್‌ ಸಂಚಾರ ಎಂದಿನಂತೆ ಇತ್ತು. ಬಹುತೇಕ ಬಸ್‌ಗಳಲ್ಲಿ ಪ್ರಯಾ ಣಿಕರ ಕೊರತೆ ಎದ್ದು ಕಾಣುತ್ತಿತು.

ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗ ಬಹುದು ಎಂಬ ಭಯದಿಂದ ಜನರು ಮನೆಯಲ್ಲೇ ಉಳಿದ ಕಾರಣ ಬೆಳಿಗ್ಗೆ ಯಿಂದಲೇ ಬಸ್‌ಗಳು ಖಾಲಿ ಓಡಿದವು. ಕೆಲವು ಬಸ್‌ಗಳಲ್ಲಿ 4–5 ಪ್ರಯಾಣಿ ಕರಷ್ಟೇ ಇದ್ದರು. ಪ್ರಯಾಣಿಕರ ಕೊರತೆ ಕಾರಣದಿಂದ ಬಸ್‌ಗಳ ಸಂಖ್ಯೆಯನ್ನು ಶೇ 10ರಷ್ಟು ಕಡಿಮೆ ಮಾಡಲಾಗಿತ್ತು.

ಸದಾ ಜನದಟ್ಟಣೆ ಕಂಡು ಬರುತ್ತಿದ್ದ ಮೆಜೆಸ್ಟಿಕ್‌, ಶಿವಾಜಿನಗರ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ಆಟೊ ರಿಕ್ಷಾಗಳ ಸಂಚಾರವೂ ವಿರಳ ಆಗಿತ್ತು. ಮೆಟ್ರೊ ಸಂಚಾರಕ್ಕೂ ತೊಂದರೆ ಆಗಲಿಲ್ಲ.

ಪುರಭವನದ ಮುಂಭಾಗದಲ್ಲಿ ಕನ್ನಡ ಸಂಘಟನೆಗಳು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ನಂತರ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದರ ಪರಿಣಾಮವಾಗಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.  ಇದರಿಂದ ವಾಹನ ಚಾಲಕರು ಪರದಾಡಿದರು.

ಮೌನವಾದ ಮಾರುಕಟ್ಟೆಗಳು
ಬಂದ್‌ನಿಂದಾಗಿ ನಗರದ ವಾಣಿಜ್ಯ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿದ್ದವು. ಸದಾ ಜನರಿಂದ ತುಂಬಿ ತುಳುಕುವ ಮೆಜೆಸ್ಟಿಕ್, ಅವೆನ್ಯೂ ರಸ್ತೆ, ಗಾಂಧಿ ಬಜಾರ್‌, ಮಲ್ಲೇಶ್ವರ, ಜಯನಗರ, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ರಸೆಲ್‌ ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಬಂದಾಗದ ಬಾರುಗಳು
ಬಂದ್ ನಗರದ ಬ್ಯಾಂಕಿಂಗ್ ಸೇವೆಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿತ್ತು. ಜತೆಗೆ, ಚಿನ್ನಾಭರಣ ಮಳಿಗೆಗಳು ಮುಚ್ಚಿದ್ದವು. ಆದರೆ, ಕೆಲ ಬಾರುಗಳು ಹಾಗೂ ವೈನ್‌ ಶಾಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಮುಚ್ಚಿದ ಮಾಲ್‌ಗಳು
ಜೆ.ಪಿ.ನಗರದ ಗೋಪಾಲನ್‌ ಮಾಲ್‌, ಜಯನಗರದ ಸೆಂಟ್ರಲ್‌ ಮಾಲ್‌ ಹಾಗೂ ಮಲ್ಲೇಶ್ವರದ ಮಂತ್ರಿ ಮಾಲ್‌ ಸೇರಿದಂತೆ ಬಹುತೇಕ ಮಾಲ್‌ಗಳು ಮುಚ್ಚಿದ್ದವು.

ಪ್ರಯಾಣಿಕರೇ ಇಲ್ಲ
ಬಂದ್‌ನಿಂದ  ಶೇ 70 ರಷ್ಟು ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಪ್ರಯಾಣಿಕರಿಗಾಗಿ ನಾವೇ ಕಾಯುವ ಪರಿಸ್ಥಿತಿ ಎದುರಾಗಿತ್ತು.
– ಪದ್ಮಾವತಿ, ಬಸ್‌ ನಿರ್ವಾಹಕಿ

ಆಶ್ಚರ್ಯ ಮತ್ತು ಸಂತೋಷ
ಇದೇ ಮೊದಲ ಬಾರಿಗೆ ಶಾಂತಿಯುತವಾಗಿ ಬಂದ್‌ ಆಗಿರುವುದರಿಂದ ಸಂತೋಷ ಹಾಗೂ ಆಶ್ಚರ್ಯವಾಗುತ್ತಿದೆ.  ಬಸ್‌ಗಳ ಕೊರತೆ ನನಗೆ ಕಾಡಿಲ್ಲ.
– ನಾಗರಾಜು, ಕಟ್ಟಡ ಕಾರ್ಮಿಕ

ADVERTISEMENT

ಬಿಸಿ ತಟ್ಟಿಲ್ಲ
ಬಿಎಂಟಿಸಿ  ಬಸ್ ಸಂಚಾರ ಎಂದಿನಂತೆ ಇದೆ. ನನಗೆ ಯಾವುದೇ ಸಮಸ್ಯೆಯಾಗಿಲ್ಲ.
– ಈಶ್ವರ್, ಬೀದಿ ವ್ಯಾಪಾರಿ

ಬಂದ್‌ನಿಂದ ತೊಂದರೆ
ಮೆಜೆಸ್ಟಿಕ್‌ನಿಂದ ಫ್ರೇಜರ್‌ ಟೌನ್‌ಗೆ ಹೋಗಲು ಒಂದು ಗಂಟೆ ಕಾದೆ. ಬಸ್‌ ಸಿಗಲಿಲ್ಲ. ಬಂದ್‌ ನಿಂದಾಗಿ ತುಂಬಾ ತೊಂದರೆಯಾಗಿದೆ.
– ಅಶ್ವಿನಿ, ಗೃಹಿಣಿ

ಆತಂಕಗೊಂಡಿದ್ದೆ
ಮೈಸೂರಿನಿಂದ ರೈಲಿನಲ್ಲಿ ಬಂದಿದ್ದೇನೆ. ಬೆಂಗಳೂರು ಬಂದ್ ಎಂದು ತಿಳಿದು ಆತಂಕಗೊಂಡಿದ್ದೆ. ಆದರೆ , ಆಟೋ ಹಾಗೂ ಕ್ಯಾಬ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರಿಂದ ಯಾವುದೇ ತೊಂದರೆ ಆಗಲಿಲ್ಲ.
–ಕಿರಣ್, ಸಾಫ್ಟ್‌ವೇರ್ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.