ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳು ಇನ್ನು ಮುಂದೆ ಮೂರೇ ಬಣ್ಣ ಹೊಂದಲಿವೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ನಡೆದ 62ನೇ ಬಸ್ ದಿನಾಚರಣೆಯಲ್ಲಿ ನೂತನ ವಿನ್ಯಾಸದ ಬಸ್ಗಳನ್ನು ಉದ್ಘಾಟಿಸಲಾಯಿತು.
ಸಮಾರಂಭದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್ರೂಪ್ ಕೌರ್ ಮಾತನಾಡಿ, ‘ಈಗ ಬಿಎಂಟಿಸಿಯಲ್ಲಿ 6700ಕ್ಕೂ ಅಧಿಕ ಬಸ್ಗಳು ಇವೆ. ಸುಮಾರು 18 ಬಣ್ಣದ ಬಸ್ಗಳು ಇವೆ. ಗೊಂದಲ ಹೋಗಲಾಡಿಸಲು ವಿವಿಧ ಬಸ್ಗಳನ್ನು ಪ್ರತ್ಯೇಕವಾಗಿ ಗುರುತಿಸುವ ಸಲುವಾಗಿ ಒಂದು ವಿನ್ಯಾಸ ಅಗತ್ಯ ಇತ್ತು. ಹೀಗಾಗಿ ಬಸ್ಗಳ ಬಣ್ಣವನ್ನು ಮೂರಕ್ಕೆ ಇಳಿಸಲಾಗುತ್ತಿದೆ’ ಎಂದರು.
‘ಈ ಪ್ರಕ್ರಿಯೆಯಲ್ಲಿ ಸೇವೆಗಳ ಹೆಸರುಗಳನ್ನು ಕನ್ನಡ ಭಾಷೆಯಲ್ಲಿ ಹಾಗೂ ಸೇವೆಗಳನ್ನು ಆಯಾ ಮಾದರಿಗೆ ಸಂಬಂಧಿಸಿದಂತೆ ಹೆಸರನ್ನು ನೀಡಲಾಗುವುದು. ಎಲ್ಲ ಬಸ್ಗಳಿಗೆ ಬಣ್ಣ ಲೇಪನ ಕಾರ್ಯ ಒಂದೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕೆ ಹೆಚ್ಚುವರಿ ಖರ್ಚು ಆಗುವುದಿಲ್ಲ’ ಎಂದರು.
ವಿಪ್ರೊ ಸಮೀಕ್ಷೆ: ವಿಪ್ರೊ ಸಂಸ್ಥೆಯು ಬಿಎಂಟಿಸಿ ಮಾರ್ಗಗಳಲ್ಲಿ ಸಂಚರಿಸುವ ತನ್ನ ಉದ್ಯೋಗಿಗಳ ಸಮೀಕ್ಷೆ ನಡೆಸಿದೆ. ಬಿಎಂಟಿಸಿ ಬಸ್ಗಳ ಮೂಲಕ ನಿವಾಸದಿಂದ ಕಚೇರಿಗೆ ಬರಲು ಹಾಗೂ ಕಚೇರಿಯಿಂದ ನಿವಾಸಕ್ಕೆ ತೆರಳು ಎಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಕಂಡು ಹಿಡಿಯಲು ಸಂಸ್ಥೆ ಈ ಸಮೀಕ್ಷೆಗೆ ಮುಂದಾಗಿತ್ತು. ಶೇ 65.5 ರಷ್ಟು ಉದ್ಯೋಗಿಗಳು ತಮ್ಮ ನಿವಾಸದಿಂದ ಸಂಸ್ಥೆ ತಲುಪಲು 45 ನಿಮಿಷ ತೆಗೆದುಕೊಳ್ಳುತ್ತಾರೆ. ಶೇ 74.3ರಷ್ಟು ಮಂದಿ ಕೆಲಸ ಮುಗಿಸಿ ಮನೆಗೆ ಹೋಗಲು 45 ನಿಮಿಷ ತೆಗೆದುಕೊಳ್ಳುತ್ತಾರೆ. ಶೇ 70.8ರಷ್ಟು ಜನರು ಸಾರ್ವಜನಿಕ ಸಾರಿಗೆ ಬಳಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂಬ ಅಂಶ ಸಮೀಕ್ಷೆಯಿಂದ ತಿಳಿದು ಬಂದಿದೆ.
ಯಾವ ಯಾವ ಬಣ್ಣ
*ಹಸಿರು ಸರಣಿ: ಸಾಮಾನ್ಯ, ಬಿಗ್ ಟ್ರಂಕ್, ಬಿಗ್ ಸರ್ಕಲ್ ಸೇವೆಗಳಿಗೆ: ಸಾಮಾನ್ಯ ದರ.
*ಕಿತ್ತಳೆ ಸರಣಿ: ಫೀಡರ್ ಸೇವೆಗಳಿಗೆ‘ ಸಾಮಾನ್ಯ ದರ.
*ನೀಲಿ ಸರಣಿ: ವಜ್ರ, ವಾಯುವಜ್ರ ಸೇವೆಗಳಿಗೆ: ಹವಾನಿಯಂತ್ರಿತ ದರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.