ADVERTISEMENT

ಬಿಎಸ್‌ವೈ ಪಿ.ಎ ವಿರುದ್ಧದ ಪ್ರಕರಣಕ್ಕೆ ರೂಪದರ್ಶಿ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:55 IST
Last Updated 23 ನವೆಂಬರ್ 2017, 19:55 IST

ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್‌ ಮೇಲೆ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದ ಆರೋಪದಡಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌.ಆರ್‌.ಸಂತೋಷ್‌ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ರೂಪದರ್ಶಿಯೊಬ್ಬರು ಸಾಕ್ಷಿಯಾಗಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮೇ 11ರಂದು ವಿನಯ್‌ ಅವರ ಕಾರು ಅಡ್ಡಗಟ್ಟಿದ್ದ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಬಳಿಕ ಅಪಹರಣಕ್ಕೆ ಯತ್ನಿಸಿದ್ದರು. ಅವರಿಂದ ತಪ್ಪಿಸಿಕೊಂಡಿದ್ದ ವಿನಯ್‌, ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಮಲ್ಲೇಶ್ವರ ಉಪವಿಭಾಗದ ಎಸಿಪಿ ಎ.ಆರ್‌.ಬಡಿಗೇರ, ಸಂತೋಷ್‌ ಸೇರಿ 12 ಮಂದಿಯ ವಿರುದ್ಧ ಬುಧವಾರವಷ್ಟೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಉತ್ತರ ಕರ್ನಾಟಕದ ರೂಪದರ್ಶಿಯೊಬ್ಬರ ಹೇಳಿಕೆಯನ್ನು ಪಟ್ಟಿಯಲ್ಲಿ ಲಗತ್ತಿಸಲಾಗಿದ್ದು, ಅವರೇ ಪ್ರಮುಖ ಸಾಕ್ಷಿಯಾಗಿದ್ದಾರೆ. ಅವರೊಂದಿಗೆ ಸಂತೋಷ್‌ ನಡೆಸಿದ್ದ ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಾಗೂ ಕರೆಗಳ ವಿವರಗಳನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.

ADVERTISEMENT

‘ಕಾರ್ಯಕ್ರಮವೊಂದಕ್ಕೆ ಯಡಿಯೂರಪ್ಪ ಅವರನ್ನು ಆಹ್ವಾನಿಸಲು ರೂಪದರ್ಶಿಯು ಅವರ ಮನೆಗೆ ಹೋಗಿದ್ದರು. ಅದೇ ವೇಳೆ ಸಂತೋಷ್‌ ಪರಿಚಯವಾಗಿತ್ತು. ಪರಸ್ಪರ ಮೊಬೈಲ್‌ ನಂಬರ್‌ ವಿನಿಮಯ ಮಾಡಿಕೊಂಡು ಹಲವು ಬಾರಿ ಮಾತನಾಡಿದ್ದರು. ಸಂದೇಶಗಳನ್ನು ಕಳುಹಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಯಡಿಯೂರಪ್ಪ ಹಾಗೂ ಅವರ ಆಪ್ತ ವರ್ಗದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳ ಬಗ್ಗೆ ಸಂತೋಷ್‌, ರೂಪದರ್ಶಿಗೆ ತಿಳಿಸುತ್ತಿದ್ದರು. ವಿನಯ್‌ ಅಪಹರಣದ ಬಗ್ಗೆಯೂ ಮಾತನಾಡಿದ್ದು ಗೊತ್ತಾಗಿದೆ. ಹೀಗಾಗಿ ರೂಪದರ್ಶಿ ಅವರನ್ನು ಸಾಕ್ಷಿಯನ್ನಾಗಿ ಮಾಡಿಕೊಂಡಿದ್ದೇವೆ’ ಎಂದರು.

‘ರೂಪದರ್ಶಿಯು ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ರಾಜಕೀಯ ಮುಖಂಡರಿಂದ ಆ ಸಂಸ್ಥೆಗೆ ಆರ್ಥಿಕ ಸಹಾಯ ಮಾಡಿಸುವುದಾಗಿ ಸಂತೋಷ್‌ ಭರವಸೆ ನೀಡಿದ್ದರು. ಈ ಸಂಬಂಧ ಹಲವು ಬಾರಿ ಅವರು ಮೊಬೈಲ್‌ನಲ್ಲಿ ಮಾತನಾಡಿದ್ದರು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.