ADVERTISEMENT

ಬಿಟಿಎಂ ಪ್ರಥಮ ದರ್ಜೆ ಕಾಲೇಜಿನ ಮಾನ್ಯತೆ ರದ್ದು

​ಪ್ರಜಾವಾಣಿ ವಾರ್ತೆ
Published 24 ಮೇ 2017, 20:05 IST
Last Updated 24 ಮೇ 2017, 20:05 IST

ಬೆಂಗಳೂರು: ಬಿಟಿಎಂ ಪ್ರಥಮದರ್ಜೆ ಖಾಸಗಿ ಕಾಲೇಜಿನ ಮಾನ್ಯತೆ ರದ್ದುಪಡಿಸಲು ಬುಧವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಕಟ್ಟಡ ಬೀಳುವ ಹಂತ ತಲುಪಿದ್ದು, ತರಗತಿ ಕೋಣೆಗಳು ವ್ಯವಸ್ಥಿತವಾಗಿಲ್ಲ.  ವಾಚನಾಲಯ ಇಲ್ಲ, ಶೌಚಾಲಯ ವ್ಯವಸ್ಥೆ ಸರಿಯಿಲ್ಲ’ ಎಂದು  ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ) ನೀಡಿದ ವರದಿ ಅನ್ವಯ  ಕ್ರಮಕೈಗೊಳ್ಳಲಾಗಿದೆ. 

ಕಾಲೇಜಿನ ಮಾನ್ಯತೆ ನವೀಕರಿಸಲು ಕನಿಷ್ಠ 40 ಅಂಕಗಳು ಬರಬೇಕು. ಆದರೆ, ಈ ಬಿಟಿಎಂ ಕಾಲೇಜಿಗೆ ಕೇವಲ 27 ಅಂಕ ದೊರೆತಿದೆ.
2017–18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಾನ್ಯತೆ ನವೀಕರಣ ಮಾಡುವ ಸಂಬಂಧ ಅರ್ಜಿ ಸಲ್ಲಿಸಿದ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ಸಮಿತಿ ಪರಿಶೀಲನೆ ನಡೆಸಿದೆ. ಸಮಿತಿಯ ವರದಿ ಆಧಾರದಲ್ಲಿ ಮಾನ್ಯತೆ ನವೀಕರಿಸಲಾಗುತ್ತದೆ. ಎಲ್‌ಐಸಿ ಪರಿಶೀಲನೆ ವೇಳೆ ವಿಡಿಯೊ ದಾಖಲಿಕರಣವೂ ಆಗುತ್ತದೆ.

ADVERTISEMENT

ಅಂಕಪಟ್ಟಿ ಮುದ್ರಣದಲ್ಲಿ ಗೋಪ್ಯತೆ ಇಲ್ಲ: ಅಂಕಗಳನ್ನು ಅಂಕಪಟ್ಟಿಗೆ ಮುದ್ರಿಸಿಕೊಡುವ ಅಟ್ಟರಿಸ್‌ ಟೆಕ್ನಾಲಜಿಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ವಿರುದ್ಧ ಅನೇಕ ದೂರುಗಳು ಬಂದಿದ್ದರೂ ಒಪ್ಪಂದ ಮುಂದುವರಿಸಿರುವ ಬಗ್ಗೆಯೂ  ಸಭೆಯಲ್ಲಿ ಚರ್ಚಿಸಲಾಯಿತು. ‘ಅಟ್ಟರಿಸ್‌ ಸಂಸ್ಥೆ ಒಪ್ಪಂದ ಮೇ 17ಕ್ಕೆ ಮುಕ್ತಾಯವಾಗಿದೆ. ಅಂಕಗಳನ್ನು ತಿದ್ದುಪಡಿ ಮಾಡುತ್ತದೆ, ಗೋಪ್ಯತೆ ಕಾಪಾಡುವಲ್ಲಿ ಕಂಪೆನಿ ವಿಫಲವಾಗಿದೆ ಎಂಬ ಬಗ್ಗೆ ಅನೇಕ ದೂರುಗಳೂ ವಿಶ್ವವಿದ್ಯಾಲಯಕ್ಕೆ ಬಂದಿವೆ. ಆದರೂ ಸಂಸ್ಥೆಗೆ ಈ ಬಾರಿಯೂ ಅವಕಾಶ ನೀಡಲಾಗಿದೆ’ ಎಂದು ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು.

‘ಪರೀಕ್ಷೆ ಹತ್ತಿರ ಇರುವುದರಿಂದ ಈಗ ಟೆಂಡರ್‌ ಕರೆದು ಹೊಸ ಸಂಸ್ಥೆಗೆ ಅನುಮತಿ ನೀಡುವುದು ಕಷ್ಟ. ಹಾಗಾಗಿ ಒಪ್ಪಂದ ಮುಂದುವರಿಸಿದ್ದೇವೆ’ ಎಂದು ಮುನಿರಾಜು ವಿವರಿಸಿದರು. ‘ಆದರೆ, ಒಪ್ಪಂದ ಮುಗಿಯುವ ಎರಡು ತಿಂಗಳ ಮುಂಚೆಯೇ ಟೆಂಡರ್‌ ಕರೆಯಬೇಕಾಗಿತ್ತು. ಅಲ್ಲದೆ, ಅಂಕಗಳನ್ನು ಮುದ್ರಿಸುವಾಗಲೂ ಸಾಕಷ್ಟು ಗೋಪ್ಯತೆ ಕಾಪಾಡಿಕೊಳ್ಳಬೇಕಾಗಿದೆ.  ವಿಶ್ವವಿದ್ಯಾಲಯವೇ ಈ ಕೆಲಸ ನಿರ್ವಹಿಸಲು ಸಾಧ್ಯ. ಅಂಕಪಟ್ಟಿಗೆಂದು ವಿದ್ಯಾರ್ಥಿಗಳಿಂದ ಹಣ ಪಡೆಯಲಾಗುತ್ತದೆ. ಅವರಿಗೆ ಯಾವುದೇ ಅನ್ಯಾಯ ಆಗಬಾರದು’ ಎಂದು ಸಿಂಡಿಕೇಟ್‌ ಸದಸ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.