ADVERTISEMENT

ಬಿಡಿಎಯಿಂದ ಹತ್ತು ಪಥಗಳ ರಸ್ತೆ

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ: 10.6 ಕಿ.ಮೀ ಉದ್ದ

ಬಿ.ಸತೀಶ್
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST
ಗ್ರಾಫಿಕ್ಸ್: ಹಳೇಮನಿ
ಗ್ರಾಫಿಕ್ಸ್: ಹಳೇಮನಿ   

ಬೆಂಗಳೂರು: ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಹತ್ತು ಪಥಗಳ ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಮುಂದಾಗಿದೆ.

10.6 ಕಿ.ಮೀ ಉದ್ದದ ರಸ್ತೆ ಇದಾಗಿದ್ದು, ಬಿಡಿಎ ನಿರ್ಮಾಣ ಮಾಡುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ ಮೂಲಕ ಈ ರಸ್ತೆ ಹಾದು ಹೋಗಲಿದೆ.
ಹತ್ತು ಪಥಗಳ ರಸ್ತೆ ನಿರ್ಮಾಣದ ಪ್ರಸ್ತಾವನೆಯನ್ನು ತಾಂತ್ರಿಕ ಸಮಿತಿಗೆ ಕಳುಹಿಸಲಾಗಿತ್ತು. ರಸ್ತೆ ನಿರ್ಮಾಣಕ್ಕೆ ಸಮಿತಿ ಒಪ್ಪಿಗೆ ನೀಡಿದ್ದು, ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಸೂಚಿಸಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.

‘ನೂತನ ರಸ್ತೆಯು ಮೈಸೂರು ರಸ್ತೆಯ ರಾಜರಾಜೇಶ್ವರಿ ಡೆಂಟಲ್ ಕಾಲೇಜಿನಿಂದ ಆರಂಭವಾಗಿ ಮಾಗಡಿ ರಸ್ತೆಯ ಕಡಬಗೆರೆ ಬಳಿ ಸೇರಲಿದೆ. ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಈಗಾಗಲೇ ಸರ್ವೆ ನಡೆಸಲಾಗಿದೆ’ ಎಂದು ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಸುಧಾ ತಿಳಿಸಿದರು.

‘ನೂತನವಾಗಿ ನಿರ್ಮಾಣಗೊಳ್ಳಲಿರುವ ರಸ್ತೆಯು 75 ಮೀಟರ್‌ ಅಗಲ ಇರಲಿದೆ. ಇದರಲ್ಲಿ ಹತ್ತು ಪಥಗಳು ಇರಲಿವೆ. ಎರಡು ಪಥಗಳನ್ನು ಬಸ್‌ಗ
ಳಿವೆ ಮೀಸಲಿಡಲಾಗುವುದು’ ಎಂದು ಸೂಪರಿಂಟೆಂಡಿಗ್ ಎಂಜಿನಿಯರ್ ವರದರಾಜು ಮಾಹಿತಿ ನೀಡಿದರು.

‘ರಸ್ತೆಯ ಎರಡೂ ಬದಿ 7.5 ಮೀಟರ್ ಅಗಲದ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುವುದು. ಪದೆ ಪದೆ  ರಸ್ತೆ ಅಗೆಯುವುದನ್ನು ತಪ್ಪಿಸಲು ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್‌ (ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ) ವ್ಯವಸ್ಥೆ ರೂಪಿಸಲಾಗುತ್ತದೆ. ಈ ರಸ್ತೆ ನಿರ್ಮಾಣವಾದರೆ ನಗರದಲ್ಲಿ ಶೇಕಡಾ 30ರಷ್ಟು ದಟ್ಟಣೆ ತಗ್ಗಲಿದೆ’ ಎಂದರು.  ‘ಈ ಯೋಜನೆ ಪೂರ್ಣ ಗೊಂಡ ನಂತರ ಮಾಗಡಿ ರಸ್ತೆಯಲ್ಲಿ ಕಡಬಗೆರೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

ಕೆಂಪೇಗೌಡ ಲೇಔಟ್‌ನಲ್ಲಿ ಟೆಂಡರ್‌ ಶ್ಯೂರ್ ರಸ್ತೆಗಳು: ‘ನಗರದಲ್ಲಿ ಈಗಾಗಲೇ ಟೆಂಡರ್ ಶ್ಯೂರ್ ರಸ್ತೆಗಳು ಯಶಸ್ವಿಯಾಗಿವೆ. ಹೀಗಾಗಿ ಪ್ರಾಧಿಕಾರದ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಕೆಂಪೇಗೌಡ ಲೇಔಟ್‌ನಲ್ಲಿ ಟೆಂಡರ್ ಶ್ಯೂರ್ ಮಾದರಿಯಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಲಾಗು
ವುದು’ ಎಂದು ಬಿಡಿಎ ಎಂಜಿನಿಯರ್ ಸದಸ್ಯ ಪಿ.ಎನ್.ನಾಯಕ್ ತಿಳಿಸಿದರು.

* ಹತ್ತು ಪಥಗಳ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಈ ಯೋಜನೆ ಜಾರಿಯಾದರೆ ವಾಹನ ದಟ್ಟಣೆ ತಗ್ಗಲಿದೆ
-ಟಿ.ಶ್ಯಾಮ್ ಭಟ್‌
ಬಿಡಿಎ ಆಯುಕ್ತ

* ಕೆಂಪೇಗೌಡ ಬಡಾವಣೆಯ ರಸ್ತೆಗಳನ್ನು ಟೆಂಡರ್ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಟೆಂಡರ್‌ ಶ್ಯೂರ್ ಮಾದರಿಯ ರಸ್ತೆಗಳನ್ನು ಹೊಂದಲಿರುವ ಪ್ರಥಮ ಬಡಾವಣೆ ಇದಾಗಲಿದೆ
-ಪಿ.ಎನ್.ನಾಯಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT