ADVERTISEMENT

ಬಿಡಿಎ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಮಹಿಳೆ ಯತ್ನ

ಪರಿಹಾರದ ಹಣ ಪಾವತಿಸದೆ ಸತಾಯಿಸುತ್ತಿರುವ ಬೆಂಗಳೂರ ಅಭಿವೃದ್ಧಿ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ರಾಜಕುಮಾರ್‌ ಖತ್ರಿ,  ಆಯುಕ್ತರು, ಬಿಡಿಎ
ರಾಜಕುಮಾರ್‌ ಖತ್ರಿ, ಆಯುಕ್ತರು, ಬಿಡಿಎ   

ಬೆಂಗಳೂರು: ರಸ್ತೆ ಅಭಿವೃದ್ಧಿಗೆ ಬಿಟ್ಟುಕೊಟ್ಟ ಜಾಗಕ್ಕೆ ಪರಿಹಾರ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಿಳಂಬ ಧೋರಣೆಯಿಂದ ಬೇಸತ್ತ ಮಹಿಳೆಯೊಬ್ಬರು ಸೋಮವಾರ ಬಿಡಿಎ ಕೇಂದ್ರ ಕಚೇರಿ ಪ್ರಾಂಗಣದಲ್ಲೇ  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಮಂಗಳಾ (38) ಆತ್ಮಹತ್ಯೆಗೆ  ಯತ್ನಿಸಿದ ಮಹಿಳೆ.

ಕಂಠೀರವ ಸ್ಟುಡಿಯೊ ಬಳಿ ಗ್ರೇಡ್‌ ಸೆಪರೇಟರ್‌ ಕಾಮಗಾರಿಗೆ ಮಂಗಳಾ ಅವರ ಕುಟುಂಬ 6,750 ಚದರ ಅಡಿ ಬಿಟ್ಟುಕೊಟ್ಟಿದೆ. ಅವರು ಮನೆ ಹಾಗೂ ಅಂಗಡಿಗಳನ್ನು ಕಳೆದುಕೊಂಡಿದ್ದರು. ಅಂಗಡಿ ಬಾಡಿಗೆಯಿಂದ ಬರುತ್ತಿದ್ದ ಆದಾಯಕ್ಕೂ ಕತ್ತರಿ ಬಿದ್ದಿತ್ತು. ಅವರಿಗೆ ಬಿಡಿಎ ₹ 3.76 ಕೋಟಿ ಪರಿಹಾರ ಬಾಕಿ ಇರಿಸಿಕೊಂಡಿತ್ತು. ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.  ಬಿಡಿಎ ಎರಡು ವರ್ಷಗಳಿಂದ ಪರಿಹಾರ ನೀಡದೇ ಸತಾಯಿಸುತ್ತಿದ್ದುದರಿಂದ ಬೇಸತ್ತು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ನಡೆದದ್ದೇನು: ‘ಬಿಡಿಎ ಕಚೇರಿ ಪ್ರಾಂಗಣದಲ್ಲಿ  ಮಂಗಳಾ ಅವರು ಮಧ್ಯಾಹ್ನ 3.15 ಸುಮಾರಿಗೆ ನನ್ನನ್ನು ಎದುರುಗೊಂಡರು. ಕೈಯಲ್ಲಿ ಪತ್ರವೊಂದನ್ನು ಹಿಡಿದುಕೊಂಡಿದ್ದ ಅವರು, ಬಿಡಿಎ ನಮ್ಮಿಂದ ವಶಪಡಿಸಿಕೊಂಡ ಜಾಗಕ್ಕೆ ಇನ್ನೂ ಪರಿಹಾರ ಕೊಟ್ಟಿಲ್ಲ.

ಜಾಗ ಕಳೆದುಕೊಂಡ ಬಳಿಕ ನಾನು ಆರ್ಥಿಕವಾಗಿ ತೀರಾ ಸಂಕಷ್ಟ ಸ್ಥಿತಿಯಲ್ಲಿದ್ದೇನೆ. ಜೀವ ತೆಗೆದುಕೊಳ್ಳುವುದನ್ನು ಬಿಟ್ಟು ನನಗೆ ಬೇರೆ ದಾರಿ ಇಲ್ಲ ಎಂದು ಬಾಟಲಿಯಲ್ಲಿದ್ದ ವಿಷವನ್ನು ಕುಡಿಯಲು ಯತ್ನಿಸಿದರು. ನಾವು ಬಾಟಲಿಯನ್ನು ಕೆಳಕ್ಕೆ ಉರುಳಿಸಿ ತಡೆಯಲು ಯತ್ನಿಸಿದೆವು. ಆದರೆ, ಅಷ್ಟರಲ್ಲೇ ಅವರು  ಒಂದು ಗುಟುಕು ವಿಷ ಕುಡಿದಾಗಿತ್ತು’ ಎಂದು  ಬಿಡಿಎ ಭೂಸ್ವಾಧೀನ ಅಧಿಕಾರಿ ನೂರ್‌ ಜಾನ್‌ ಖಾನಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಸ್ವಸ್ಥಗೊಂಡಿದ್ದ ಅವರನ್ನು   ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದೆವು’ ಎಂದರು. ‘ಮಂಗಳಾ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ  ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಸಾವಿಗೆ ಅಧಿಕಾರಿಗಳೇ ಕಾರಣ: ‘ಘಟನಾ ಸ್ಥಳದಲ್ಲಿ ಮಂಗಳಾ ಅವರ ಹಸ್ತಾಕ್ಷರವುಳ್ಳ ಮರಣಪತ್ರ ಸಿಕ್ಕಿದೆ. ಅದರಲ್ಲಿ ತಮ್ಮ ಸಾವಿಗೆ ಅಧಿಕಾರಿಗಳೇ ಕಾರಣವೆಂದು ಮಂಗಳಾ ಅವರು ಬರೆದಿದ್ದಾರೆ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಮನೆಯನ್ನು ಕಳೆದುಕೊಂಡಿದ್ದೇವೆ. ಬಾಡಿಗೆಯೇ ಜೀವನಕ್ಕೆ ಆಧಾರವಾಗಿತ್ತು. ಈಗ ಅದು ಬರುವುದೂ ನಿಂತಿದೆ. ನನಗೆ ಬರಬೇಕಾದ ಹಣ ನೀಡುವಂತೆ ಕಚೇರಿಗೆ ಅಲೆದಾಡಿ ಸಾಕಾಗಿದೆ. ಈ ಹಿಂದೆ ಬಿಡಿಎ ಉಪಾಯುಕ್ತರಾಗಿದ್ದ  ವಸಂತಕುಮಾರ್‌ ಸೇರಿದಂತೆ ಹಲವರು ಮಾನಸಿಕ ಕಿರುಕುಳ ನೀಡಿದ್ದಾರೆ. ಹೀಗಾಗಿ ಆತ್ಮಹತ್ಯೆಯೊಂದೇ ಪರಿಹಾರ ವೆಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಮಂಗಳಾ ಅವರು ಮರಣ ಪತ್ರದಲ್ಲಿ ಹೇಳಿದ್ದಾರೆ’ ಎಂದು ತಿಳಿಸಿದರು.

₹131 ಕೋಟಿ ಪರಿಹಾರ ಬಾಕಿ
‘ವರ್ತುಲ ರಸ್ತೆಯ ಮಾಗಡಿ ರಸ್ತೆ ಜಂಕ್ಷನ್‌ ಹಾಗೂ ತುಮಕೂರು ರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌‌ ಕಾಮಗಾರಿಗಾಗಿ ಬಿಡಿಎ 80ಕ್ಕೂ ಹೆಚ್ಚು  ಕುಟುಂಬಗಳಿಂದ 10 ಸಾವಿರ ಚದರ ಮೀಟರ್‌ಗೂ ಹೆಚ್ಚು ಜಮೀನ ನನ್ನು ಸ್ವಾಧೀನ ಪಡಿಸಿಕೊಂಡಿದೆ. ಸಂತ್ರಸ್ತರಿಗೆ ಒಟ್ಟು ₹ 131.10 ಕೋಟಿ  ಪರಿಹಾರ ನೀಡುವುದನ್ನು ಬಾಕಿ ಉಳಿಸಿಕೊಂಡಿದೆ’ ಎಂದು ಬಿಡಿಎ ಮೂಲಗಳು ತಿಳಿಸಿವೆ.

‘ಈ ಎರಡೂ ಜಂಕ್ಷನ್‌ಗಳ ಗ್ರೇಡ್‌ ಸೆಪರೇಟರ್‌ ಕಾಮಗಾರಿಗಳು 2012ರಲ್ಲೇ ಆರಂಭವಾಗಿದ್ದವು. ಕಾಮಗಾರಿಗಳು ಅರ್ಧದಷ್ಟು ಪೂರ್ಣ ಗೊಂಡಿದ್ದವು. ಇನ್ನುಳಿದ ಕಾಮಗಾ ರಿಯ ಭೂಸ್ವಾಧೀನಕ್ಕಾಗಿ   2013ರಲ್ಲಿ ಜುಲೈ 26ರಂದು ಪ್ರಾಥಮಿಕ ಅಧಿ ಸೂಚನೆ   ಹಾಗೂ 2015 ಜನವರಿ 20ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಯೋಜನೆಗೆ ಜಾಗ ಬಿಟ್ಟು ಕೊಟ್ಟವರಿಗೆ ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡುವ ಬಗ್ಗೆ 2015ರ ಸೆಪ್ಟೆಂಬರ್‌ನಲ್ಲಿ ನಡೆದ ಬಿಡಿಎ ಸಭೆಯಲ್ಲಿ  ತೀರ್ಮಾನಿಸ ಲಾಗಿತ್ತು. ಈ ಯೋಜನೆಗೆ ಸ್ವಾಧೀನ ಪಡಿಸಿಕೊಂಡ ಕಟ್ಟಡಗಳ ಪೈಕಿ ಹೆಚ್ಚಿನವು ವಾಣಿಜ್ಯ ಕಟ್ಟಡಗಳು. ಹಾಗಾಗಿ ವಾಣಿಜ್ಯ ದರವನ್ನು ಆಧರಿಸಿ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬಂತು. 2016ರ ಫೆಬ್ರುವರಿಯಲ್ಲಿ ನಡೆದ  ಬಿಡಿಎ ಸಭೆ ಇದಕ್ಕೂ ಸಮ್ಮತಿ ನೀಡಿದೆ’ ಎಂದರು.

‘ನಂತರ ಅಧಿಕಾರ ವಹಿಸಿಕೊಂಡ ಬಿಡಿಎ ಅಧ್ಯಕ್ಷರು, ಇಷ್ಟೊಂದು ದೊಡ್ಡ ಮೊತ್ತದ ಪರಿಹಾರ ನೀಡುವ ಬದಲು ಶೇ 50 ರಷ್ಟು ಮೊತ್ತವನ್ನು ಟಿಡಿಆರ್‌ ರೂಪದಲ್ಲಿ ನೀಡುವಂತೆ ಸೂಚಿಸಿದರು. ಈ ಸೂತ್ರ ಸಂತ್ರಸ್ತರಿಗೆ ಒಪ್ಪಿಗೆ ಆಗಲಿಲ್ಲ. ಈ ತಿಂಗಳು ನಡೆದ ಬಿಡಿಎ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಿತ್ತು. ಸಭೆಯ ಕಾರ್ಯಸೂಚಿಯಲ್ಲಿ ಈ ವಿಚಾರವೂ ಇತ್ತು. ಆದರೆ, ಸಭೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದರಿಂದ ಸಂತ್ರಸ್ತರು ಬೇಸರಗೊಂಡಿ ದ್ದರು’ ಎಂದು ಅವರು ತಿಳಿಸಿದರು.

‘ಬಿಡಿಎ ಅಧ್ಯಕ್ಷ ಮಹೇಂದ್ರ ಜೈನ್‌, ಆಯುಕ್ತ ರಾಜಕುಮಾರ್‌ ಖತ್ರಿ ಅವರು ಇದೇ 18ರಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರಿಹಾರ ವಿತರಣೆಗೆ ಸಿದ್ಧತೆಯೂ ನಡೆದಿದೆ. ಅಷ್ಟರಲ್ಲೇ ಸಂತ್ರಸ್ತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ಅವರು ವಿವರಿಸಿದರು.

ಉಪವಾಸ ಕೂರುತ್ತೇನೆ’
ಕೆಲ ದಿನದ ಹಿಂದೆ ಕಾಮಗಾರಿ ಪರಿ­ಶೀಲಿಸಿ ಪರಿಹಾರ ಪಾವತಿಗೆ ಸಿದ್ಧತೆ ನಡೆಸಿ­ದ್ದೆವು. ಅಷ್ಟರಲ್ಲೇ ಈ ಘಟನೆ ನಡೆದಿದೆ. ಮಂಗಳಾ ಅವರ ಚಿಕಿತ್ಸೆಗೆ ಬಿಡಿಎಯಿಂದ ₹ 25 ಸಾವಿರ ನೀಡಿದ್ದೇವೆ.
-ರಾಜಕುಮಾರ್‌ ಖತ್ರಿ,ಆಯುಕ್ತರು, ಬಿಡಿಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT