ADVERTISEMENT

ಬಿಬಿಎಂಪಿಯ ಐದು ಆಸ್ತಿ ಒತ್ತುವರಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 20:07 IST
Last Updated 24 ಜುಲೈ 2014, 20:07 IST
ವಿಧಾನ ಪರಿಷತ್ತಿನಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ವಿಚಾರವಾಗಿ ಮಾತನಾಡಿದರು
ವಿಧಾನ ಪರಿಷತ್ತಿನಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ವಿಚಾರವಾಗಿ ಮಾತನಾಡಿದರು   

ಬೆಂಗಳೂರು: ಬಿಬಿಎಂಪಿಯ ಐದು ಆಸ್ತಿ ಒತ್ತುವರಿ ಯಾಗಿದ್ದು, ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಉದ್ಯಾನಗಳು, ಖಾಲಿ ಜಾಗ ಗಳು, ಆಟದ ಮೈದಾನಗಳು, ಸ್ಮಶಾನಗಳು ಸೇರಿದಂತೆ ಬಿಬಿಎಂಪಿಯ 5,107 ಆಸ್ತಿಗಳಿವೆ. ಈ ಪೈಕಿ 4,604 ಆಸ್ತಿಗಳ ಅಳತೆ ಮಾಡಿ ಸಮೀಕ್ಷೆ ಮಾಡಲಾಗಿದೆ. 503 ಆಸ್ತಿಗಳ ಅಳತೆ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

ಚಾಮರಾಜಪೇಟೆಯ ಭಕ್ಷಿ ಗಾರ್ಡನ್‌ನ 5 ಎಕರೆ 3 ಗುಂಟೆ ಜಾಗ ಒತ್ತುವರಿಯಾಗಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದರು.
ಯಲಹಂಕ ವಲಯದ ಕೋತಿಹೊಸಹಳ್ಳಿ ಗ್ರಾಮದ 18 ಗುಂಟೆ ಉದ್ಯಾನದ ಜಾಗ (ಸರ್ವೆ ಸಂಖ್ಯೆ 18/2) ಒತ್ತುವರಿಯಾಗಿದೆ. ಬಿಬಿಎಂಪಿ ಪರ ನ್ಯಾಯಾಲಯ ತೀರ್ಪು ನೀಡಿದೆ. ವಾರದಲ್ಲಿ ಈ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. 

ಕೋತಿಹೊಸಹಳ್ಳಿ ಗ್ರಾಮದ ಉದ್ಯಾನದ (ಸರ್ವೆ ಸಂಖ್ಯೆ 15/2) 7 ಎಕರೆ 2 ಗುಂಟೆ ಜಾಗ ಒತ್ತುವರಿ ಯಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖ ಲಾಗಿದೆ. ಕೊಡಿಗೆಹಳ್ಳಿ ಗ್ರಾಮದ ಉದ್ಯಾನದ (ಸರ್ವೆ ಸಂಖ್ಯೆ 14/1) 1 ಎಕರೆ 10 ಗುಂಟೆ ಜಾಗ ಒತ್ತುವರಿಯಾಗಿದ್ದು, ಬಿಬಿಎಂಪಿ ಪರ ತೀರ್ಪು ಬಂದಿದೆ. ಈ ಒತ್ತುವರಿಯನ್ನು ವಾರದಲ್ಲಿ ತೆರವುಗೊಳಿಸಲಾಗುವುದು ಎಂದರು.

ವಸಂತನಗರ (ವಾರ್ಡ್‌ 93) ವ್ಯಾಪ್ತಿಯ ಮಿಲ್ಲರ್‌ ಟ್ಯಾಂಕ್‌ ಪ್ರದೇಶದಲ್ಲಿ 43 ಮಂದಿಗಳು 3 ಎಕರೆ 29 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಫರಾವುಲ್ಲಾ ಖಾನ್‌ ಹಾಗೂ ಲಕ್ಷ್ಮಿನಾರಾಯಣ ಚಾರಿಟಬಲ್‌ ಟ್ರಸ್ಟ್‌ನ ಆಡಳಿತ ವ್ಯವಸ್ಥಾಪಕ ಆರ್‌.ಎನ್‌.ರಾಮಯ್ಯ ವಿರುದ್ಧ ಹೈಗ್ರೌಂಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳ ಸಹಕಾರದಿಂದಲೇ ಈ ಒತ್ತುವರಿ ನಡೆದಿದ್ದು, ಆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.