ADVERTISEMENT

ಬಿಬಿಎಂಪಿ ಕಾಮಗಾರಿಗಳಲ್ಲಿ ಅಕ್ರಮ ಆರೋಪ: ಪಿಐಎಲ್‌ ವಜಾ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 20:16 IST
Last Updated 28 ಮಾರ್ಚ್ 2017, 20:16 IST

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕಾಮಗಾರಿಗಳಲ್ಲಿ ₹ 138 ಕೋಟಿಗೂ ಹೆಚ್ಚಿನ ಮೊತ್ತದ ಅಕ್ರಮ ನಡೆದಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ.

‘ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ವಿಚಾರಣೆ ನಡೆಸಬೇಕು ಎಂದು ವಿಭಾಗೀಯ ಪೀಠ  ಆದೇಶಿಸಿದೆ. ಆದ್ದರಿಂದ ಈ ಪಿಐಎಲ್ ಹಿಂದಕ್ಕೆ ಪಡೆಯಿರಿ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ ಅರ್ಜಿದಾರರಿಗೆ ಸಲಹೆ ನೀಡಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವಿ.ಶ್ರೀನಿಧಿ, ‘ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಏಪ್ರಿಲ್‌ 7ರಂದು ವಿಚಾರಣೆಗೆ ಹಾಜರಾಗಿ ಉತ್ತರಿಸುವಂತೆ ಅರ್ಜಿದಾರರಿಗೆ ನೋಟಿಸ್‌ ನೀಡಿದ್ದಾರೆ’ ಎಂದು ವಿವರಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ  ವಕೀಲ ವಿ.ಶ್ರೀನಿವಾಸ, ಅರ್ಜಿ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದರು.

ಅರ್ಜಿದಾರರ ಆಕ್ಷೇಪವೇನು?: ‘2012ರಿಂದ 2015ರ ನಡುವಿನ ಅವಧಿಯಲ್ಲಿ ಬಿಬಿಎಂಪಿ ಹಾಗೂ ವಿಶೇಷ ವಲಯಗಳ ವ್ಯಾಪ್ತಿಯಲ್ಲಿರುವ 198 ವಾರ್ಡುಗಳ ಪ್ರಮುಖ ರಸ್ತೆ ಕಾಮಗಾರಿಗಳಲ್ಲಿ ಸುಮಾರು ₹ 138 ಕೋಟಿಗೂ ಹೆಚ್ಚಿನ ಮೊತ್ತದ ಅಕ್ರಮ ನಡೆದಿದೆ’ ಎಂಬುದು ಅರ್ಜಿದಾರರ ಆರೋಪ.

ಕ್ವೀನ್ಸ್‌ ರಸ್ತೆ ರಾಜೀವ್‌ ಗಾಂಧಿ ಕಾಲೊನಿಯ ರಾಬರ್ಟ್‌ ಅರ್ಜಿದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.