ADVERTISEMENT

ಬಿಬಿಎಂಪಿ ಚುನಾವಣೆ: ವೇಳಾಪಟ್ಟಿ ಪ್ರಕಟಣೆಗೆ ತಡೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 19:30 IST
Last Updated 20 ಏಪ್ರಿಲ್ 2015, 19:30 IST
ಬಿಬಿಎಂಪಿ ಚುನಾವಣೆ: ವೇಳಾಪಟ್ಟಿ ಪ್ರಕಟಣೆಗೆ ತಡೆ
ಬಿಬಿಎಂಪಿ ಚುನಾವಣೆ: ವೇಳಾಪಟ್ಟಿ ಪ್ರಕಟಣೆಗೆ ತಡೆ   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಇದೇ 22ರವರೆಗೆ ಯಾವುದೇ ಪ್ರಕ್ರಿಯೆಗೆ ಮುಂದಾಗಬಾರದು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ  ಹಾಗೂ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್‌, ‘ಈಗ ಪಾಲಿಕೆ ಅಸ್ತಿತ್ವದಲ್ಲಿಯೇ ಇಲ್ಲ ಮತ್ತು ಇಂದು (ಏ.20 ಸೋಮವಾರ) ಬಿಬಿಎಂಪಿ ವಿಭಜನೆ ಸಂಬಂಧ ಸರ್ಕಾರ ಜಂಟಿ ಅಧಿವೇಶನ ನಡೆಸುತ್ತಿದೆ’ ಎಂಬ ಅಂಶಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಘೇಲಾ ಅವರು, ‘ನೀವು ಅದನ್ನೆಲ್ಲಾ ಹೇಳಬೇಡಿ. ನಿಮಗೆ ತುರ್ತು ಆದೇಶ ಬೇಕೋ ಅಥವಾ ಈ ನ್ಯಾಯಪೀಠದ ಅಂತಿಮ ಆದೇಶ ಬೇಕೋ’ ಎಂದು ಪ್ರಶ್ನಿಸಿದರು.

ಆಯೋಗವೇ ಒಂದು ವಿಪತ್ತು: ‘ಚುನಾವಣೆಗೆ ಸಂಬಂಧಿಸಿದಂತೆ ಇವತ್ತಿನ ಸ್ಥಿತಿ ಏನು’ ಎಂದು ವಘೇಲಾ ಅವರು ಚುನಾವಣಾ ಆಯೋಗದ ಪರ ವಕೀಲ  ಕೆ.ಎನ್‌.ಫಣೀಂದ್ರ ಅವರನ್ನು ಪ್ರಶ್ನಿಸಿದರು. ಇದಕ್ಕೆ ಫಣೀಂದ್ರ ‘ನಾವು ಎಲ್ಲ ತಯಾರಿ ನಡೆಸಿದ್ದೇವೆ. ಇಂದು ಸಂಜೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದ್ದೇವೆ. ಬೇಕಿದ್ದರೆ ಮುಚ್ಚಿದ ಲಕೋಟೆಯಲ್ಲಿರುವ ವೇಳಾಪಟ್ಟಿ ವಿವರಗಳನ್ನು ಕೊಡುತ್ತೇನೆ’ ಎಂದು ತಿಳಿಸಿದರು.

ಈ ಉತ್ತರದಿಂದ ಸಮಾಧಾನಗೊಳ್ಳದ ವಘೇಲಾ,  ಆಯೋಗದ ಕಾರ್ಯವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ‘ಸ್ವತಃ ಆಯೋಗವೇ ಒಂದು ವಿಪತ್ತಿನಂತಾಗಿದೆ’ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು. 

ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ, ‘ಆಯೋಗಕ್ಕೆ ಬದ್ಧತೆ ಎಂಬುದೇ ಇಲ್ಲ. ಆಯೋಗ ಅವಧಿಗೆ ಸರಿಯಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದರೆ ಇದೆಲ್ಲಾ ರಗಸಳೆಯೇ ಇರುತ್ತಿರಲಿಲ್ಲ. ನೀವು ಮಾಡುತ್ತಿರುವುದು ನ್ಯಾಯಾಂಗ ನಿಂದನೆ’ ಎಂದು ಎಚ್ಚರಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ನಂಜುಂಡ ರೆಡ್ಡಿ ಅವರು, ‘ಈಗಾಗಲೇ ರಾಜ್ಯ ಸರ್ಕಾರ ಮೀಸಲು ಪಟ್ಟಿ ನೀಡಿದೆ.  ಚುನಾವಣೆ ನಡೆಸುವ ಜವಾಬ್ದಾರಿ ಆಯೋಗದ್ದು’ ಎಂದು ವಿವರಿಸಿದರು.

ಬಿಬಿಎಂಪಿಗೆ ಮೇ 30ರೊಳಗೆ ಚುನಾವಣೆ ನಡೆಸಬೇಕೆಂಬ ಏಕಸದಸ್ಯ ಪೀಠದ ಆದೇಶವಿದ್ದರೂ ಆಯೋಗವು ಈತನಕ ವೇಳಾಪಟ್ಟಿ ಪ್ರಕಟಿಸಿಲ್ಲ ಎಂದು  ನಮ್ಮ ಬೆಂಗಳೂರು ಫೌಂಡೇಶನ್‌ ಪರ ರಾಜೀವ್‌ ಚಂದ್ರಶೇಖರ್‌ ಸಲ್ಲಿಸಿದ ಅರ್ಜಿಯನ್ನೂ ಪೀಠವು ಇದೇ ವೇಳೆ ಆಲಿಸಿತು. ನಂತರ ಎಲ್ಲ ಅರ್ಜಿಗಳನ್ನೂ  22ರಂದು ಆಲಿಸಿ ಅಂತಿಮ ಆದೇಶ ನೀಡುವುದಾಗಿ ತಿಳಿಸಿತು.

ಆಡಳಿತಾಧಿಕಾರಿ ನಿರ್ಧಾರಗಳಿಗೆ ತಡೆ
ವಿಸರ್ಜನೆಗೊಂಡಿರುವ ಬಿಬಿಎಂಪಿಗೆ ನೇಮಕವಾಗಿರುವ ಆಡಳಿತಾಧಿಕಾರಿಯು  ಇದೇ 22ರ ವರೆಗೆ ಯಾವುದೇ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ಮಧ್ಯಂತರ ಆದೇಶ ನೀಡಿದೆ.

ಬಿಬಿಎಂಪಿ ಆಡಳಿತಾಧಿಕಾರಿಯು ಯಾವುದೇ ಆಡಳಿಿತಾತ್ಮಕ ನಿರ್ಧಾರ   ಕೈಗೊಳ್ಳುವುದಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿ ವಿಸರ್ಜಿತ ಬಿಬಿಎಂಪಿಯ 104ನೇ ಸಂಖ್ಯೆಯ ಪಾಲಿಕೆ ಸದಸ್ಯರಾಗಿದ್ದ ಮೋಹನ್‌ ಕುಮಾರ್‌ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್‌  ಸೋಮವಾರ ವಿಚಾರಣೆ ನಡೆಸಿದರು.

ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಎ.ಎಸ್‌.ಪೊನ್ನಣ್ಣ, ‘ಅರ್ಜಿದಾರರ ಕೋರಿಕೆಯನ್ನು ಮನ್ನಿಸಬಾರದು’ ಎಂದು ವಿನಂತಿಸಿದರಾದರೂ ನ್ಯಾಯಪೀಠವು ಮಧ್ಯಂತರ ಆದೇಶ ನೀಡಿತು. ಅರ್ಜಿದಾರರ ಪರ ಶಿಲ್ಪಾರಾಣಿ ಮತ್ತು ಕೆ.ಎಸ್‌.ಸುರೇಶ್‌ ವಕಾಲತ್ತು ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT