ADVERTISEMENT

ಬಿಬಿಎಂಪಿ ಚುನಾವಣೆ: ಹೈಕೋರ್ಟ್ ತಾಕೀತು

ಮೇ 30ರ ಗಡುವು ನೀಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 10:09 IST
Last Updated 30 ಮಾರ್ಚ್ 2015, 10:09 IST

ಬೆಂಗಳೂರು: ಮೇ 30ರ ಒಳಗಾಗಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಹಾಗೂ ಏ. 13ರ ಒಳಗೆ ಮೀಸಲಾತಿ ಪಟ್ಟಿ ಸಿದ್ಧಪಡಿಸುವಂತೆ ಹೈ ಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತವಾವನ್ನು ಹೈಕೋರ್ಟ್ ತಳ್ಳಿ ಹಾಕಿದ್ದು, ಮೊದಲು ಚುನಾವಣೆ ನಡೆಸುವಂತೆ ಸ್ಪಷ್ಟ ಸೂಚನೆ ನೀಡಿದೆ. ಜತೆಗೆ, ಬಿಬಿಎಂಪಿಯ ಚುನಾವಣೆ ನಡೆಸುವಂತೆ ಕೋರಿ ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಪ್ರಸ್ತಾವ ಬಂದಿಲ್ಲ ಎಂಬ ರಾಜ್ಯ ಚುನಾವಣಾ ಆಯೋಗದ ವಾದವನ್ನೂ ಕೋರ್ಟ್ ತಳ್ಳಿಹಾಕಿದೆ.

ವಿವರ: ಬಿಬಿಎಂಪಿ ಸದಸ್ಯ­ರಾದ ಸಿ.ಕೆ.ರಾಮಮೂರ್ತಿ ಮತ್ತು ಬಿ.ಸೋಮಶೇಖರ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿ, ಬಿಬಿಎಂಪಿ ಚುನಾ­ವಣೆಗೆ ಏನೇನು  ತಯಾರಿ ಮಾಡಿ­ಕೊಳ್ಳಲಾಗಿದೆ ಎಂಬುದನ್ನು ತಿಳಿಸು­ವಂತೆ ಹೈಕೋರ್ಟ್‌ ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಚುನಾ­ವಣಾ ಆಯೋಗಕ್ಕೆ ಈಚೆಗೆ ತುರ್ತು ನೋಟಿಸ್‌ ಜಾರಿ ಮಾಡಲು ಆದೇಶಿಸಿತ್ತು.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಎ.ವಿ.ನಿಶಾಂತ್‌ ಅವರು, ‘ಮುಂದಿನ ತಿಂಗಳು ಏಪ್ರಿಲ್‌ 22ಕ್ಕೆ ಈಗ ಅಸ್ತಿತ್ವದ­ಲ್ಲಿ­ರುವ ಸದಸ್ಯರ ಆಡಳಿತ ಅವಧಿ ಪೂರ್ಣಗೊಳ್ಳುತ್ತಿದೆ. ಆದರೆ, ರಾಜ್ಯ ಸರ್ಕಾರ ಹೊಸ ಚುನಾವಣೆಯ ಬಗ್ಗೆ ಯಾವುದೇ ಗಂಭೀರ ಆಲೋಚನೆ ಮಾಡಿಲ್ಲ. ಬದಲಿಗೆ ಬಿಬಿಎಂಪಿ ವಿಭಜನೆ ವಿಚಾರದಲ್ಲಿ ಮಗ್ನವಾಗಿದೆ. ಸರ್ಕಾರದ ಈ ಧೋರಣೆ ಸುಪ್ರೀಂ ಕೋರ್ಟ್‌ ಮಾರ್ಗದರ್ಶನದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.