ADVERTISEMENT

ಬುದ್ಧಿಯೋಗಾನಂದ ಸ್ವಾಮೀಜಿಗೆ ಪಟ್ಟಾಭಿಷೇಕ

ಮೂರು ದಿನಗಳಿಂದ ಧಾರ್ಮಿಕ ವಿಧಿ ವಿಧಾನ ಆಚರಣೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 20:31 IST
Last Updated 29 ಮಾರ್ಚ್ 2015, 20:31 IST

ಬೆಂಗಳೂರು: ಗೋಸಾಯಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಬುದ್ಧಿ ಯೋಗಾನಂದ ಸ್ವಾಮೀಜಿ ಅವರ ‘ಪೀಠಾರೋಹಣ ಪಟ್ಟಾಭಿಷೇಕ’ ಮಹೋತ್ಸವ ಭಾನುವಾರ ಅದ್ಧೂರಿಯಾಗಿ ಜರುಗಿತು.

ಗವಿಪುರದ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಸಂಸ್ಥಾನ ಮಠದ ಆವರಣದಲ್ಲಿ ಮೂರು ದಿನಗಳಿಂದ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜೆ ವಿಧಿ ವಿಧಾನಗಳು ಜರುಗಿದವು.   ಭಾನುವಾರ ಬೆಳಿಗ್ಗೆ ಸ್ವಾಮೀಜಿಯವರ ಪೀಠಾರೋಹಣ ಪಟ್ಟಾಭಿಷೇಕ ನಡೆಯಿತು.

ಮಠದ ಭಕ್ತರು ತಂದಿದ್ದ ವಿವಿಧ ನದಿಗಳ ತೀರ್ಥ ಹಾಗೂ 108 ಕಳಸಗಳ ತೀರ್ಥವನ್ನು ಸ್ವಾಮೀಜಿಗೆ ಅಭಿಷೇಕ ಮಾಡಲಾಯಿತು.  ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್‌.ಸೋಮಸುಂದರ್‌ ದೀಕ್ಷಿತ್‌ ಬೆಳಿಗ್ಗೆ 11.30ಕ್ಕೆ ಅಭಿಜನ್‌ ಮುಹೂರ್ತದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿಸಿದರು. ಹಿಂದಿನ ಪೀಠಾಧಿಪತಿ ಸುರೇಶ್ವರಾನಂದ ಭಾರತಿ ಸ್ವಾಮೀಜಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಪೀಠಾಧ್ಯಕ್ಷರಾಗಿ ಬುದ್ಧಿಯೋಗಾನಂದ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿತ್ತು.

ಪೀಠಾರೋಹಣ ಕಾರ್ಯಕ್ರಮಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು, ನಾಡಿನ ಪ್ರಮುಖ ಮಠಗಳ ಪೀಠಾ
ಧ್ಯಕ್ಷರು, ರಾಜ್ಯದ ವಿವಿಧ ಭಾಗಗಳು ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಪಟ್ಟಾಭಿಷೇಕ ಮಹೋತ್ಸವ ಉದ್ಘಾಟಿಸಿದರು.

ರಾಷ್ಟ್ರೀಯ ಉತ್ಸವ: ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, ‘ಶಿವಾಜಿ ಜಯಂತಿಯನ್ನು ರಾಷ್ಟ್ರೀಯ ಉತ್ಸವವ
ನ್ನಾಗಿ ಆಚರಿಸುವ ಪ್ರಸ್ತಾವನೆಯಿದೆ. ಈ ಸಂಬಂಧ ಪ್ರಧಾನಿ ಹಾಗೂ ಗೃಹ ಸಚಿವರ ಜೊತೆ ಸಮಾಲೋಚನೆ ನಡೆಸುತ್ತೇನೆ’ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ‘ವಿಜಯಪುರದಲ್ಲಿ ಛತ್ರಪತಿ ಶಿವಾಜಿ ಹೆಸರಿನಲ್ಲಿ ಸರ್ಕಾರದ ವತಿಯಿಂದ ಶಿವಾಜಿ ಮಂಟಪ ಹಾಗೂ ಭವನ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ಪಟ್ಟಾಭಿಷೇಕದ ಬಳಿಕ ಮಾತನಾಡಿದ ಬುದ್ಧಿಯೋಗಾನಂದ ಸ್ವಾಮೀಜಿ, ‘ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಮರಾಠ ಸಮಾಜದ ಉನ್ನತಿಗಾಗಿ ಶ್ರಮಿಸುತ್ತೇನೆ. ಸಮಾಜದ ಬಡ ಮಕ್ಕಳಿಗಾಗಿ ಹಾಸ್ಟೆಲ್‌ ತೆರೆಯಲಾಗುವುದು. ಅಲ್ಲದೆ, ಸಮಾಜ ಸಂಘಟನೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡಲಾಗುವುದು’ ಎಂದು ತಿಳಿಸಿದರು.
ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯ, ಉಪಾಧ್ಯಕ್ಷ ವಿ.ಎ. ರಾಣೋಜಿ ರಾವ್‌ ಸಾಠೆ, ಪ್ರಧಾನ ಕಾರ್ಯದರ್ಶಿ ಸಿ.ವಿ.ಹನುಮಂತರಾವ್‌ ಇದ್ದರು.

ನೂತನ ಪೀಠಾಧ್ಯಕ್ಷರ ಬಗ್ಗೆ:  ಬುದ್ಧಿಯೋಗಾನಂದ ಸ್ವಾಮೀಜಿ ಅವರು ಮಠದ ಆರನೇ ಪೀಠಾಧ್ಯಕ್ಷ. ಇವರು ವಿಜಯಪುರ ಜಿಲ್ಲೆಯ ಮನಗೋಳಿ ಗ್ರಾಮದಲ್ಲಿ ಮರಾಠಿ ಸಮುದಾಯದಲ್ಲಿ ಜನಿಸಿದವರು. ಅವರಿಗೀಗ 46 ವರ್ಷ ವಯಸ್ಸು. ಚಿಕ್ಕ ವಯಸ್ಸಿನಲ್ಲೇ ಅಧ್ಯಾತ್ಮ ಒಲವು ಮೂಡಿಸಿಕೊಂಡಿದ್ದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದಾರೆ.

ಬಳಿಕ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ರಾಮಕೃಷ್ಣಾಶ್ರಮ ಸೇರಿದರು. 2003ರಲ್ಲಿ ರಾಮಕೃಷ್ಣ ಮಿಷನ್‌ನ ರಂಗನಾಥನಂದಾ ಮಹಾರಾಜ್‌ ಅವರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರು. 2014ರ ಮೇನಲ್ಲಿ ಗೋಸಾಯಿ ಮಹಾ ಸಂಸ್ಥಾನ ಪ್ರವೇಶಿಸಿದರು.

ಗೋಸಾಯಿ ಮಠ ಕೇವಲ ಮರಾಠ ಸಮಾಜಕ್ಕೆ ಸೀಮಿತವಾಗಬಾರದು. ಇಡೀ ಹಿಂದೂ ಧರ್ಮ ಹಾಗೂ ಮಾನವ ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು.
ವಿಶ್ವೇಶತೀರ್ಥ ಸ್ವಾಮೀಜಿ,ಪೇಜಾವರ ಮಠ

ಸಾಹಸ, ಬಲಿದಾನಕ್ಕೆ ಮರಾಠ ಸಮಾಜದ ಕೊಡುಗೆ ಅನನ್ಯ. ಗಡಿಯಲ್ಲಿರುವ ಮರಾಠಿಗರಿಗೂ ತಾವು ಕನ್ನಡಿಗರು ಎಂಬ ಭಾವನೆ ಬರಬೇಕು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.