ADVERTISEMENT

ಬೆಂಗಳೂರಿಗೆ ಮರ್ಕೆಲ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:32 IST
Last Updated 5 ಅಕ್ಟೋಬರ್ 2015, 20:32 IST

ಬೆಂಗಳೂರು: ನಾಸ್ಕಾಂ ಆಯೋಜಿ ಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮತ್ತು ಬಾಷ್‌ ಕಂಪೆನಿಗೆ ಭೇಟಿ ನೀಡಲು ಜರ್ಮನಿಯ ಛಾನ್ಸಲರ್ ಏಂಜೆಲಾ ಮರ್ಕೆಲ್‌ ಅವರು ಸೋಮವಾರ ರಾತ್ರಿ ಬೆಂಗಳೂರಿಗೆ ಬಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಷ್ಟಾಚಾರದ ಅನ್ವಯ, ಮರ್ಕೆಲ್‌ ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಮರ್ಕೆಲ್‌ ಅವರು ಸೋಮವಾರ ರಾತ್ರಿ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದರು.

ಮರ್ಕೆಲ್ ಅವರು ಮಂಗಳವಾರ ಬೆಳಿಗ್ಗೆ ಬಾಷ್‌ ಕಂಪೆನಿಯ ಕೋರ ಮಂಗಲ ಮತ್ತು ಆಡುಗೋಡಿಯ ಘಟಕ ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಭೇಟಿ ನೀಡಲಿದ್ದಾರೆ. ನಂತರ ಹೋಟೆಲ್‌ ಲೀಲಾ ಪ್ಯಾಲೇಸ್‌ನಲ್ಲಿ ನಡೆಯುವ ನಾಸ್ಕಾಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಮಂಗಳವಾರ ಬೆಳಿಗ್ಗೆ ನಗರಕ್ಕೆ ಬರಲಿದ್ದಾರೆ.

ಮರ್ಕೆಲ್‌ ತಂಡದ ಓಡಾಟಕ್ಕೆ ಐಷಾರಾಮಿ ಕಾರುಗಳು
 ಜರ್ಮನಿ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಹಾಗೂ ಅವರ ನಿಯೋಗ ನಗರದಲ್ಲಿ ಓಡಾಡಲು ಬಳಸುತ್ತಿರುವ ಐಷಾರಾಮಿ ಕಾರುಗಳನ್ನು ಬಾಡಿಗೆ ಕೊಟ್ಟಿರುವುದು ಮೂಲತಃ ಕ್ಷೌರಿಕ ವೃತ್ತಿಯ ಕೋಟ್ಯಧೀಶ ಜಿ.ರಮೇಶ್‌ಬಾಬು ಅವರು!

‘ಜರ್ಮನಿ ಚಾನ್ಸಲರ್‌ ಅವರ ನಿಯೋಗದ ಓಡಾಟಕ್ಕಾಗಿ ಮರ್ಸಿಡಿಸ್‌ ಬೆಂಜ್‌, ಇನ್ನೋವಾ ಕೇಮಿಯೋನೇಟಾ, ಟೊಯೊಟಾ ಇಸುಜು ಸೇರಿದಂತೆ 15 ಕಾರುಗಳನ್ನು ಬಾಡಿಗೆಗೆ ನೀಡಲಾಗಿದೆ’ ಎಂದು ರಮೇಶ್‌ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು. ರೋಲ್ಸ್‌ ರಾಯ್ಸ್‌, ಬಿಎಂಡಬ್ಲ್ಯು, ಮರ್ಸಿಡಿಸ್‌, ಜಾಗ್ವಾರ್‌, ಆಡಿ ಸೇರಿದಂತೆ 200ಕ್ಕೂ ಅಧಿಕ ಐಷಾರಾಮಿ ಕಾರುಗಳು ರಮೇಶ್‌ಬಾಬು ಅವರಲ್ಲಿವೆ.

ಮೂಲತಃ ಅನಂತಪುರ ಜಿಲ್ಲೆಯ ರಮೇಶ್‌ಬಾಬು, ತಂದೆಯಿಂದ ಪಾರಂಪರಿಕವಾಗಿ ಕಲಿತ ಕ್ಷೌರಿಕ ವೃತ್ತಿಯಲ್ಲೇ ತೊಡಗಿದ್ದು, ವಿಕ್ಟೋರಿಯಾ ರಸ್ತೆಯಲ್ಲಿ ಅವರು ಈಗಲೂ ಸಲೂನ್‌ ಹೊಂದಿದ್ದಾರೆ. ಹಲವು ವರ್ಷಗಳ ಹಿಂದೆ ಮಾರುತಿ ಓಮ್ನಿಯೊಂದಿಗೆ ಕಾರು ಬಾಡಿಗೆ ವಹಿವಾಟನ್ನೂ ಅವರು ಆರಂಭಿಸಿದ್ದರು.  ಐಷಾರಾಮಿ ಕಾರುಗಳನ್ನು ಹೊಂದುವುದು ಅವರಿಗೆ ನೆಚ್ಚಿನ ಹವ್ಯಾಸವಂತೆ. ‘ಕಾರು ಬಾಡಿಗೆ ವಹಿವಾಟನ್ನು ಸಣ್ಣದಾಗಿ ಶುರುಮಾಡಿದ್ದೆ. ನನ್ನ ಬಳಿ ಐಷಾರಾಮಿ ಕಾರುಗಳ ಸಂಗ್ರಹ ಹೆಚ್ಚಿದಂತೆ ಗಣ್ಯ ವ್ಯಕ್ತಿಗಳೂ ಕಾರು ಬಾಡಿಗೆ ಪಡೆಯಲು ಆರಂಭಿಸಿದರು’ ಎಂದು ಹೇಳುತ್ತಾರೆ.

 ‘ರಾಜಕೀಯ ವ್ಯಕ್ತಿಗಳ ಹೊರತಾಗಿ ಅಮಿತಾಭ್‌ ಬಚ್ಚನ್‌, ಐಶ್ವರ್ಯ ರೈ, ಶಾರೂಕ್‌ ಖಾನ್‌ ಅವರಂತಹ ದಿಗ್ಗಜರೂ ನನ್ನ ಕಾರು ಬಳಕೆ ಮಾಡಿದ್ದಾರೆ’ ಎಂದು ಹೆಮ್ಮೆಯಿಂದ ತಿಳಿಸುತ್ತಾರೆ. ‘ನಾನು ಬಡಕುಟುಂಬದಲ್ಲಿ ಜನಿಸಿದ್ದೇನೆ. ನನ್ನ ತಂದೆ ಕ್ಷೌರಿಕರಾಗಿದ್ದರು. ಅವರು ಅಸುನೀಗಿದ ಬಳಿಕ ಒಂದು ಹೊತ್ತಿನ ಊಟ ಹೊಂಚುವುದೂ ಮನಗೆ ಆಗ ಕಷ್ಟವಾಗಿತ್ತು’ ಎಂದು ಫೇಸ್‌ಬುಕ್‌ನಲ್ಲಿ ಅವರು ಬರೆದು ಕೊಂಡಿದ್ದಾರೆ. ರಮೇಶ್‌ಬಾಬು ಅವರ ಸಾಧನೆ ಕುರಿತು ಫೇಸ್‌ಬುಕ್‌ನಲ್ಲಿ ಓದಿದ ಹಲವರು ‘ರಿಯಲ್‌ ಹೀರೋ’ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT