ADVERTISEMENT

ಬೆಳಿಗ್ಗೆ ಮನೆ ಬಳಿ ಬಂದು ಹೋಗಿದ್ದವನೇ ಹಂತಕ?

ಈಜೀಪುರದಲ್ಲಿ ನಡೆದಿದ್ದ ಮಹಿಳೆಯ ನಿಗೂಢ ಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಬೆಂಗಳೂರು: ಈಜೀಪುರದ ಮನೆಯೊಂದರಲ್ಲಿ ನಡೆದ ಹೊನ್ನಮ್ಮ ಅಲಿಯಾಸ್ ಪ್ರಿಯಾ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಭಾನುವಾರ (ಮೇ 21) ಬೆಳಿಗ್ಗೆ ಮನೆ ಬಳಿ ಬಂದು ಹೋಗಿದ್ದ ಮೃತರ ಸಂಬಂಧಿಯೇ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.
 
ಹೊಸೂರಿನ ಹೊನ್ನಮ್ಮ, ಪತಿ–ಮಕ್ಕಳ ಜತೆ ಮೊದಲು ಕೆ.ಆರ್.ಪುರದಲ್ಲಿ ನೆಲೆಸಿದ್ದರು. ಇತ್ತೀಚೆಗೆ ಅವರನ್ನು ತೊರೆದು ಗೆಳತಿ ದಿವ್ಯಾ ಜತೆ ವಾರದ ಹಿಂದಷ್ಟೇ ಈಜೀಪುರ 20ನೇ ಅಡ್ಡರಸ್ತೆಯಲ್ಲಿ ಬಾಡಿಗೆ ಮನೆ ಮಾಡಿದ್ದರು.
 
ಭಾನುವಾರ ರಾತ್ರಿಯಿಂದ ಹೊನ್ನಮ್ಮ ಹಾಗೂ ದಿವ್ಯಾ ಮನೆಯಿಂದ ಹೊರ ಬಂದಿರಲಿಲ್ಲ. ಇದರ ಬೆನ್ನಲ್ಲೇ ಬುಧವಾರ ಬೆಳಿಗ್ಗೆ ಮನೆಯಿಂದ 
ಕೆಟ್ಟ ವಾಸನೆ ಬರಲಾರಂಭಿಸಿತ್ತು. ಅನುಮಾನಗೊಂಡ ಮನೆ ಮಾಲೀಕ ಮರಿಯಪ್ಪ, ಒಳಗೆ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲದೆ, ಮೃತರ ಜತೆಗಿದ್ದ ಯುವತಿ ಪರಾರಿಯಾಗಿದ್ದರು.
 
ಮನೆಯಲ್ಲಿ ಸಿಕ್ಕ ಮೊಬೈಲ್ ಹಾಗೂ ಡೈರಿಯಿಂದ ಪೊಲೀಸರು ಮೃತರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದರು. ರಾತ್ರಿ 11 ಗಂಟೆಗೆ ನಗರಕ್ಕೆ ಬಂದ ಮೃತರ ಪೋಷಕರು, ‘ಈಕೆ ಹೊನ್ನಮ್ಮ. ನಮ್ಮ ಎರಡನೇ ಮಗಳು. ಬೆಂಗಳೂರಿಗೆ ಬಂದ ಬಳಿಕ ಪ್ರಿಯಾ ಎಂದು ಹೆಸರು ಬದಲಿಸಿಕೊಂಡಿದ್ದಳು’ ಎಂದು ಹೇಳಿದ್ದರು.
 
ಬೆಳಿಗ್ಗೆ 6.38ಕ್ಕೆ: ‘ಮೃತರ ಕೆಲ ಸಂಬಂಧಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ‘ಹೊನ್ನಮ್ಮ  ಸಂಬಂಧಿಯೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಆಕೆಯ ಪತಿ, ಗಲಾಟೆ ಮಾಡಿ ಮನೆಯಿಂದ ಹೊರ ಹಾಕಿದ್ದರು’ ಎಂದು ಹೇಳಿಕೆ ಕೊಟ್ಟರು.
 
ಆ ಸಂಬಂಧಿ ಮೊಬೈಲ್ ಸಂಖ್ಯೆ ಪಡೆದು ‘ಟವರ್ ಡಂಪ್’ ತನಿಖೆ ನಡೆಸಿದಾಗ, ಆತ ಭಾನುವಾರ ಬೆಳಿಗ್ಗೆ 6.38ಕ್ಕೆ ಹೊನ್ನಮ್ಮ ಅವರ ಮನೆ ಬಳಿ ಬಂದು ಹೋಗಿರುವುದು ಗೊತ್ತಾಗಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಈಗ ಆ ಸಂಬಂಧಿಯ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದೆ. ಹತ್ಯೆ ನಂತರ ದಿವ್ಯಾ ಪರಾರಿಯಾಗಿರುವುದನ್ನು ಗಮನಿಸಿದರೆ, ಕೃತ್ಯದಲ್ಲಿ ಅವರ ಪಾತ್ರವೂ ಇರಬಹುದು. ಅಲ್ಲದೆ, ಕೊಲೆ ನಡೆಯುವುದಕ್ಕೂ 2 ದಿನಗಳ ಹಿಂದೆಯಷ್ಟೇ ದಿವ್ಯಾ ಹೊಸ ಮೊಬೈಲ್ ಹಾಗೂ ಸಿಮ್‌ ಕಾರ್ಡ್ ಖರೀದಿಸಿರುವುದು ಅವರ ಮೇಲಿರುವ ಅನುಮಾನವನ್ನು ಗಟ್ಟಿಗೊಳಿಸಿದೆ’ ಎಂದು ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.