ADVERTISEMENT

ಬೆಳ್ಳಂದೂರು ಅಮಾನಿ ಕೆರೆ ಮೇಲೆ ಭೂಗಳ್ಳರ ಕಣ್ಣು

10.52 ಎಕರೆ ಒತ್ತುವರಿ, ರೈತರ ಹೆಸರಿನಲ್ಲಿ ಬೇನಾಮಿ ದಾಖಲೆ ಪತ್ರಗಳ ಸೃಷ್ಟಿ: ಜಿಲ್ಲಾಡಳಿತದ ಸಮೀಕ್ಷೆಯಿಂದ ಪತ್ತೆ

ಮಂಜುನಾಥ್ ಹೆಬ್ಬಾರ್‌
Published 6 ಮೇ 2016, 19:30 IST
Last Updated 6 ಮೇ 2016, 19:30 IST
ಬೆಳ್ಳಂದೂರು ಅಮಾನಿ ಕೆರೆ ಮೇಲೆ ಭೂಗಳ್ಳರ ಕಣ್ಣು
ಬೆಳ್ಳಂದೂರು ಅಮಾನಿ ಕೆರೆ ಮೇಲೆ ಭೂಗಳ್ಳರ ಕಣ್ಣು   

ಬೆಂಗಳೂರು:  ಕೆರೆ ನೊರೆ ಸಮಸ್ಯೆಯಿಂದ ಕುಖ್ಯಾತಿ ಗಳಿಸಿರುವ ಬೆಳ್ಳಂದೂರು ಕೆರೆಯ ಮೇಲೆ  ಭೂಗಳ್ಳರ ಕಣ್ಣು ಬಿದ್ದಿದೆ. ಕೆರೆಯ 10.52 ಎಕರೆ ಒತ್ತುವರಿಯಾಗಿರುವುದು ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಬೆಳ್ಳಂದೂರಿನ ಅತೀ ದೊಡ್ಡ ಕೆರೆಯಾಗಿರುವ ಬೆಳ್ಳಂದೂರು ಕೆರೆ ಮಲಿನಗೊಂಡು, ನೊರೆ ಕಾರುತ್ತಿರುವ ಕೆಟ್ಟ ಕೆರೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. 890 ಎಕರೆ ವಿಸ್ತೀರ್ಣದ ಕೆರೆ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಪೂರ್ವ ತಾಲ್ಲೂಕಿನ ನಡುವೆ ಹಂಚಿಹೋಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ 6 ಗ್ರಾಮಗಳಲ್ಲಿ 550 ಎಕರೆ ಹಾಗೂ ಪೂರ್ವ ತಾಲ್ಲೂಕಿನ 4 ಗ್ರಾಮಗಳಲ್ಲಿ 440 ಎಕರೆ ಕೆರೆ ಇದೆ. ಪೂರ್ವ ತಾಲ್ಲೂಕಿನಲ್ಲಿ ಬೆಳ್ಳಂದೂರು ಅಮಾನಿ ಖಾನೆ, ಕೆಂಪಾಪುರ, ಬೇಲೂರು, ಯಮಲೂರುಗಳಲ್ಲಿ ಕೆರೆ ವ್ಯಾಪಿಸಿದೆ.

ಕೆರೆ ಆಸುಪಾಸಿನಲ್ಲಿ ಬಹುಮಹಡಿ ಕಟ್ಟಡಗಳು ನಿರ್ಮಾಣವಾಗಿವೆ. ಕೆರೆಯ ನಡುವಿನಲ್ಲೇ ರಸ್ತೆಗಳು ಆಗಿವೆ. ಕೆರೆ ನೀರು ಶೇ 99ರಷ್ಟು ಕಲುಷಿತಗೊಂಡಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡದ ವರದಿ ತಿಳಿಸಿದೆ. ಕೆರೆ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಾ ಬಂದಿದೆ.

ಈಗ 760 ಎಕರೆ ಜಾಗದಲ್ಲಿ ಮಾತ್ರ ನೀರು ಇದೆ ಎಂಬುದು ಕಂದಾಯ ಇಲಾಖೆಯ ಅಧಿಕಾರಿಗಳ ಹೇಳಿಕೆ. ಈವರೆಗೆ ಕೆರೆಯ ಸಮೀಕ್ಷೆಯೇ ನಡೆದಿರಲಿಲ್ಲ. ಇತ್ತೀಚೆಗೆ ಭೂಮಾಪನಾ ಇಲಾಖೆಯ ಸಹಕಾರದಲ್ಲಿ ಜಿಲ್ಲಾಡಳಿತ ಸಮೀಕ್ಷೆ ಕೈಗೆತ್ತಿಕೊಂಡಿತ್ತು.  

ಬೆಳ್ಳಂದೂರು ಅಮಾನೆ ಖಾನೆ ಕೆರೆಯ ಸಮೀಕ್ಷೆ ನಡೆಸಲಾಗಿತ್ತು. ಸರ್ವೆ ಸಂಖ್ಯೆ 2, ಸರ್ವೆ ಸಂಖ್ಯೆ 3, 17 ಹಾಗೂ 24ರಲ್ಲಿ ಒಟ್ಟು 10.52 ಎಕರೆ ಒತ್ತುವರಿ ಯಾಗಿರುವುದು ಬಹಿರಂಗಗೊಂಡಿತ್ತು. 4.18 ಎಕರೆ ಸರ್ಕಾರಿ ಒತ್ತುವರಿಯಾಗಿದ್ದು, ಅಲ್ಲಿ ರಸ್ತೆ ನಿರ್ಮಾಣವಾಗಿದೆ. ಕೆರೆ ನೊರೆಯಿಂದ ಬೆಂಕಿ ಕಾಣಿಸಿಕೊಂಡ ಪ್ರದೇಶದ ಸುತ್ತಮುತ್ತಲಿನಲ್ಲೇ ಈ ಒತ್ತುವರಿ ನಡೆದಿದೆ.

‘ದಶಕಗಳ ಹಿಂದೆ ಕೆರೆಯ ಸುತ್ತಮುತ್ತ ಕೃಷಿ ಭೂಮಿ ಇತ್ತು. ಕೃಷಿಗೆ ಕೆರೆಯ ನೀರನ್ನು ಬಳಸಲಾಗುತ್ತಿತ್ತು. ಈಗ ಗದ್ದೆಗಳಿಗೆ ಮಣ್ಣು ತುಂಬಲಾಗಿದೆ. ಅಲ್ಲಿ ರಿಯಲ್‌ ಎಸ್ಟೇಟ್‌ ಚಟುವಟಿಕೆಗೆ ಸಿದ್ಧತೆ ನಡೆದಿದೆ. ಕೃಷಿಕರ ಹೆಸರಿನಲ್ಲಿ ಬೇನಾಮಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.

ಇದರ ಹಿಂದೆ ಬಿಲ್ಡರ್‌ಗಳು ಇದ್ದಾರೆ. ಈ ಭಾಗದಲ್ಲಿ ಜಾಗಕ್ಕೆ ಚಿನ್ನದ ಬೆಲೆ ಇದೆ’ ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಹತ್ತೊಂಬತ್ತು ಕೆರೆಗಳು ಕೋಡಿ ಬಿದ್ದರೆ ಆ ನೀರು ಬೆಳ್ಳಂದೂರು ಕೆರೆ ಸೇರುತ್ತದೆ. ಕೆರೆ ಮಲಿನಗೊಳ್ಳತೊಡಗಿದ್ದು 1970ರ ದಶಕದಿಂದ. ಕೆರೆ ದಂಡೆಗೆ ಹೊಂದಿಕೊಂಡ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ಕಾಲಘಟ್ಟ ಅದು.

ADVERTISEMENT

ಕ್ರಮೇಣ ಆ ಪ್ರದೇಶದ ಸುತ್ತಮುತ್ತ ವರ್ತುಲ ರಸ್ತೆ ನಿರ್ಮಾಣವಾಗಿ, ನಗರೀಕರಣ ವ್ಯಾಪಕವಾಗಿ ಆಯಿತು. ಒಂದಾನೊಂದು ಕಾಲದಲ್ಲಿ ಕೃಷಿ, ದನಗಳಿಗೆ ನೀರು ಸೇರಿದಂತೆ ದಿನನಿತ್ಯದ ಅಗತ್ಯಗಳಿಗೆ ಈ ಕೆರೆಯನ್ನೇ ಅವಲಂಬಿಸಿದ್ದವರು, ಕೆರೆಯಲ್ಲಿ ಮೀನು ಹಿಡಿಯುತ್ತಿದ್ದವರು ಅನೇಕರು.

ವಲಸೆ ಬರುವವರ ಸಂಖ್ಯೆ ಹೆಚ್ಚಾದದ್ದೇ ತೊಂದರೆ ಶುರುವಾಯಿತು. ಒತ್ತುವರಿಯೂ ಆರಂಭವಾಯಿತು’ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.

ಇಂದು ತೆರವು
ನಗರ ಜಿಲ್ಲಾಡಳಿತವು ಶನಿವಾರ ಕೆರೆ  ಒತ್ತುವರಿ ತೆರವಿನ ಕಾರ್ಯಾಚರಣೆ ನಡೆಸಲಿದೆ. ‘ಖಾಸಗಿ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿ ತಂತಿ ಬೇಲಿ ಹಾಕುತ್ತೇವೆ. ಇಲ್ಲಿ ಎಕರೆಗೆ ₹5 ಕೋಟಿ ಬೆಲೆ ಇದೆ. ಒಟ್ಟು ₹50 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯುತ್ತೇವೆ’ ಎಂದು ಜಿಲ್ಲಾಧಿಕಾರಿ ವಿ.ಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.