ADVERTISEMENT

ಬೆಳ್ಳಂದೂರು ಕೆರೆಯಲ್ಲಿ ದಟ್ಟ ಹೊಗೆ

ಅಪಾರ್ಟ್‌ಮೆಂಟ್‌ ಹಾಗೂ ಮನೆಗಳಿಗೆ ಆವರಿಸಿದ ದುರ್ನಾತ; ಸ್ಥಳೀಯರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:53 IST
Last Updated 16 ಫೆಬ್ರುವರಿ 2017, 19:53 IST
ಇಬ್ಬಲೂರು ಗ್ರಾಮದ ಬಳಿಯಲ್ಲಿನ ಬೆಳ್ಳಂದೂರು ಕೆರೆಯಲ್ಲಿ ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡಿತ್ತು -–ಪ್ರಜಾವಾಣಿ ಚಿತ್ರ
ಇಬ್ಬಲೂರು ಗ್ರಾಮದ ಬಳಿಯಲ್ಲಿನ ಬೆಳ್ಳಂದೂರು ಕೆರೆಯಲ್ಲಿ ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡಿತ್ತು -–ಪ್ರಜಾವಾಣಿ ಚಿತ್ರ   
ಬೆಂಗಳೂರು: ಮಹದೇವಪುರ ಸಮೀಪದ ಬೆಳ್ಳಂದೂರು ಕೆರೆಯ ಇಬ್ಬಲೂರು ಗ್ರಾಮದ ಭಾಗದಲ್ಲಿ ಗುರುವಾರ ಸಂಜೆ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿತು. ಇದರಿಂದಾಗಿ ಸ್ಥಳೀಯರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.
 
ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದುರ್ನಾತ ಹೊರಬರುತ್ತಿತ್ತು. ಅಲ್ಲದೆ ದಟ್ಟ ಹೊಗೆ ಕೆರೆ ಬಳಿಯ ಅಪಾರ್ಟ್‌ಮೆಂಟ್‌ ಹಾಗೂ ಮನೆಗಳನ್ನು ಆವರಿಸಿಕೊಂಡಿತ್ತು.
 
‘ಕೆರೆ ದಂಡೆಯಿಂದ ಸ್ವಲ್ಪ ಒಳಗಿನ ಪ್ರದೇಶದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿತ್ತು. ಆದರೆ, ಬೆಂಕಿ ಜ್ವಾಲೆ ಮಾತ್ರ ಮೇಲಕ್ಕೆ ಕಾಣಿಸಿಲಿಲ್ಲ’ ಎಂದು ಸ್ಥಳೀಯರು ತಿಳಿಸಿದರು. 
 
‘ಕೆರೆಯಲ್ಲಿ ರಾಸಾಯನಿಕ ತ್ಯಾಜ್ಯ ಹೆಚ್ಚಾಗಿ ಪರಸ್ಪರ ರಾಸಾಯನಿಕ ಕ್ರಿಯೆ ಉಂಟಾದ ಕಾರಣ ಬೆಂಕಿ, ಹೊಗೆ ಕಾಣಿಸಿಕೊಂಡಿದೆ. ಶೀಘ್ರ ಸ್ಥಳಕ್ಕೆ ಬಂದ ಕೋರಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾದರು’ ಎಂದು ಹೇಳಿದರು. 
 
‘ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಿಡಗಳು ಬೆಳೆದು ಒಣಗಿ ನಿಂತಿವೆ. ಆ ಒಣಗಿದ ಸೊಪ್ಪಿನ ಕೆಳಗಿನ ನೀರಿನಲ್ಲಿ ಉಂಟಾದ ರಾಸಾಯನಿಕ ಕ್ರಿಯೆಯಿಂದ ಬೆಂಕಿ ಹೊತ್ತಿಕೊಂಡಿರಬಹುದು. ಪದೇ ಪದೇ ಈ ರೀತಿ ಆಗುತ್ತಿದೆ. ಹೊಗೆಯಿಂದ ಸುತ್ತಮುತ್ತಲಿನ ವಾತಾವರಣ ಹದಗೆಡುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಕೆರೆಗೆ ಭೇಟಿ ನೀಡಬೇಕು’ ಎಂದು ಸ್ಥಳೀಯ ವೆಂಕಟೇಶ ಆಗ್ರಹಿಸಿದರು.
 
ಕಳೆದ ವರ್ಷ ಬೆಳ್ಳಂದೂರು ಕೆರೆಯ ಯಮಲೂರು ಕೋಡಿಯಲ್ಲಿ ನೊರೆಯ ನಡುವೆ ಬೆಂಕಿ ಕಾಣಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.