ADVERTISEMENT

ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ಹಣ್ಣಿನ ಸಿಪ್ಪೆ!

ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳ ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 28 ಮೇ 2016, 19:30 IST
Last Updated 28 ಮೇ 2016, 19:30 IST

ಬೆಂಗಳೂರು: ಬೆಳ್ಳಂದೂರು ಕೆರೆಯ ಕಲುಷಿತ ನೀರನ್ನು ಶುದ್ಧೀಕರಣ ಮಾಡುವ ಯಂತ್ರವನ್ನು ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಯಂತ್ರವನ್ನು ಪ್ರದರ್ಶನ ಮಾಡಿ  ಮಾತನಾಡಿದ ಉಪನ್ಯಾಸಕ ಎಚ್‌.ಪಿ ಪ್ರಶಾಂತ್‌ ಕುಮಾರ್‌ ಅವರು,‘ಹಣ್ಣಿನ ಸಿಪ್ಪೆಗಳನ್ನು ಬಳಸಿ ನೀರನ್ನು ಶುದ್ಧೀಕರಿಸುವ ಯೋಜನೆ ಹಾಕಿಕೊಂಡೆವು. ಮೊದಲಿಗೆ  ಮೊಸಂಬಿ ಮತ್ತು ಅನಾನಸ್‌ ಹಣ್ಣಿನ ಸಿಪ್ಪೆಗಳನ್ನು ಒಣಗಿಸಿ ಅದನ್ನು ಪೌಡರ್‌ ಮಾಡಿ ಅದಕ್ಕೆ ಲಘು ಆಮ್ಲವನ್ನು ಸೇರಿಸಿದಾಗ, ಅದು ಆಕ್ಟಿವೇಟೆಡ್‌ ಕಾರ್ಬನ್ ಆಗಿ ಬದಲಾಗುತ್ತದೆ.

ಇದನ್ನು ಫಿಲ್ಟರ್‌ ರೂಪದಲ್ಲಿ ಬಳಸಿದಾಗ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು, ಪ್ಲೊರೈಡ್ ಲವಣ, ಮೆಗ್ನೀಷಿಯಂ ಲವಣ, ನೈಟ್ರೇಟ್   ಮಲಿನಕಾರಗಳನ್ನು ತೆಗೆದು ಹಾಕುತ್ತದೆ. ಈ ತಂತ್ರಜ್ಞಾನವನ್ನು ಬಳಸಿ ನಾವು ಬೆಳ್ಳಂದೂರು ಕೆರೆ ನೀರನ್ನು ಪರೀಕ್ಷೆ ಮಾಡಿದ್ದೇವೆ, ನಮಗೆ ಉತ್ತಮ ಫಲಿತಾಂಶ ಸಿಕ್ಕಿದೆ’ ಎಂದರು.

‘ಈ ತಂತ್ರಜ್ಞಾನಕ್ಕೆ ವಿದ್ಯುತ್‌ ಅವಶ್ಯಕತೆ ಬೇಕಿಲ್ಲ. ಪ್ರಾಯೋಗಿಕವಾಗಿ ಬೆಳ್ಳಂದೂರು  ಕೆರೆಯ ನೀರನ್ನು ಈ ತಂತ್ರಜ್ಞಾನದಲ್ಲಿ ಪರೀಕ್ಷೆಗೆ ಒಳಪಡಿಸಿದೆವು. ನೀರಿನಲ್ಲಿರುವ ಪ್ಲೊರೈಡ್ ಮಟ್ಟವನ್ನು ಶೇ 92.5 ರಷ್ಟು ತೆಗೆದು ಹಾಕಿರುವ ಫಲಿತಾಂಶ ಸಿಕ್ಕಿದೆ’ ಎಂದರು.

‘ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ನೀರಿನ ಪರೀಕ್ಷೆ ಹಾಗೂ ಕೆರೆಯಂಗಳದಲ್ಲಿ ತಪಾಸಣೆ ಮಾಡಲು ಅನುಮತಿ ನೀಡುವ ಮೂಲಕ ಬೆಂಬಲ ನೀಡಿದ್ದಾರೆ’ ಎಂದರು.

‘ಕೆರೆಗೆ ಸೇರುತ್ತಿರುವ ಚರಂಡಿ ನೀರು ಮತ್ತು ಕೈಗಾರಿಕೆಗಳ ತ್ಯಾಜ್ಯ  ಸೇರುವುದನ್ನು ತಡೆಗಟ್ಟಬೇಕು’ ಎಂದರು.

ಕಾಲೇಜಿನ ವಿದ್ಯಾರ್ಥಿಗಳಾದ ಮಹಮದ್ ಅತೀಕ್,  ಅಭಿಷೇಕ್ ಬಿ. ಅವರು ಉಪನ್ಯಾಸಕರಾದ ಎಚ್‌.ಪಿ ಪ್ರಶಾಂತ್‌ ಕುಮಾರ್‌ ಹಾಗೂ ಶರಣ್ಯ ಡಿ. ಅವರ ಮಾರ್ಗದರ್ಶನದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.