ADVERTISEMENT

ಬೈಕ್ ಡಿಕ್ಕಿ: ಚಿಕಿತ್ಸೆ ಫಲಿಸದೇ ಪಾದಚಾರಿ ಸಾವು

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:36 IST
Last Updated 24 ಮೇ 2017, 19:36 IST
ಬೆಂಗಳೂರು: ಬೈಕ್ ಡಿಕ್ಕಿ ಹೊಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾದಚಾರಿ ಪೊಸ ಮಣಿ (49) ಮಂಗಳವಾರ ಬೆಳಿಗ್ಗೆ  ಮೃತಪಟ್ಟಿದ್ದಾರೆ. 
‘ಘಟನೆಗೆ ಕಾರಣವಾದ ಬೈಕ್ ಸವಾರ ಜಂಶೀರ್ (30) ಎಂಬಾತನನ್ನು ಉಪ್ಪಾರಪೇಟೆ ಸಂಚಾರ ಪೊಲೀಸರು ಬಂಧಿಸಲಾಗಿದೆ.
 
ಆರೋಪಿ ಕೇರಳದವನಾಗಿದ್ದು, ಗಾಂಧಿನಗರದ ನ್ಯಾಷನಲ್ ಮಾರುಕಟ್ಟೆಯಲ್ಲಿ ಉಡುಗೊರೆ ಅಂಗಡಿ ಇಟ್ಟುಕೊಂಡಿದ್ದಾರೆ’ ಎಂದು ಉಪ್ಪಾರಪೇಟೆ ಸಂಚಾರ ಪೊಲೀಸರು ತಿಳಿಸಿದರು. 
 
‘ಮಣಿ ತಮಿಳುನಾಡಿನ ತಿರುವಣ್ಣಮಲೈನವರಾಗಿದ್ದು, ಕೆಲ ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಯಡಿಯೂರಿನ ತಂಗಿಯ ಮನೆಯಲ್ಲಿ ವಾಸವಾಗಿದ್ದ ಅವರು ಕಲಾಸಿಪಾಳ್ಯ ಹಾಗೂ ಗಾಂಧಿನಗರದ ಬಾರ್‌ಗಳಲ್ಲಿ ಖಾಲಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು.
 
ಮೇ 22ರ ಬೆಳಿಗ್ಗೆ ಗಾಂಧಿನಗರದ 5ನೇ ಮುಖ್ಯರಸ್ತೆಯಲ್ಲಿ ಎಂದಿನಂತೆ ಬಾರ್‌ವೊಂದರಲ್ಲಿ ಖಾಲಿ ಬಾಟಲಿಗಳ ಸಂಗ್ರಹಕ್ಕೆ ಹೋಗಿದ್ದರು.’
 
‘ಈ ವೇಳೆ ಬುಲೆಟ್‌ನಲ್ಲಿ ವೇಗವಾಗಿ ಬಂದ ಜಂಶೀರ್, ಆಟೋ ಹಿಂದಿಕ್ಕಲು ಹೋಗಿ ರಸ್ತೆ ದಾಟುತ್ತಿದ್ದ ಮಣಿ ಅವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿತ್ತು. ರಕ್ತದ ಮಡುವಿನಲ್ಲಿದ್ದ ಅವರನ್ನು ದಿಗ್ವಿಜಯ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.