ADVERTISEMENT

ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ವಿಳಂಬ

ವಿಧಾನ ಮಂಡಲ ಸಮಿತಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:09 IST
Last Updated 1 ಸೆಪ್ಟೆಂಬರ್ 2014, 19:09 IST

ಬೆಂಗಳೂರು: ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ವಿಚಾರ­ದಲ್ಲಿ ಹಲವು ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿ­ರುವುದಕ್ಕೆ ವಿಧಾನಮಂಡಲದ ಎಸ್‌ಸಿ/ಎಸ್‌ಟಿ ಕಲ್ಯಾಣ ಸಮಿತಿ ಆಕ್ಷೇಪ ಎತ್ತಿದೆ.

ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ 2,411 ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ 991 ಹುದ್ದೆ­ಗಳನ್ನು ಭರ್ತಿ ಮಾಡಬೇಕಿದ್ದು, ಹಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿಲ್ಲ ಎಂದು ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸೋಮವಾರ ಪತ್ರಿಕಾಗೋಷ್ಠಿ­ಯಲ್ಲಿ ದೂರಿದರು.

ಈ ಪಟ್ಟಿಗೆ ಹೊಸದಾಗಿ  2,250 ಹುದ್ದೆಗಳು ಸೇರ್ಪಡೆಯಾಗಿವೆ. ಒಟ್ಟಾರೆ 5,653 ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದು ಅವರು ಹೇಳಿದರು. ‘ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಅನುಮತಿ ಪಡೆಯುವ ಅಗತ್ಯ ಇಲ್ಲ. ಇಷ್ಟಿದ್ದರೂ ಇಲಾಖೆಗಳ ಮುಖ್ಯಸ್ಥರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿಲ್ಲ’ ಎಂದು ಅವರು ಟೀಕಿಸಿದರು.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅತಿ ಹೆಚ್ಚು ಅಂದರೆ 1,037 ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಬ್ಯಾಕ್‌­ಲಾಗ್‌ ಹುದ್ದೆ ಭರ್ತಿ ಮಾಡದ ಶಿಕ್ಷಣ ಸಂಸ್ಥೆ­ಗಳಿಗೆ ಅನುದಾನ ನಿಲ್ಲಿಸುವಂತೆಯೂ ಸಭೆಯಲ್ಲಿ ಹಾಜ­ರಾಗಿದ್ದ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌ ಅವರಿಗೆ ನರೇಂದ್ರಸ್ವಾಮಿ ಸೂಚಿಸಿದರು.

ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಅನುದಾನಿತ ಕಾಲೇಜುಗಳಲ್ಲಿ 204, ಜಲಸಂಪನ್ಮೂಲ ಇಲಾಖೆ­ಯಲ್ಲಿ 206, ಲೋಕೋಪಯೋಗಿ ಇಲಾಖೆಯಲ್ಲಿ 134, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 76, ಬಿಬಿಎಂಪಿಯಲ್ಲಿ 71,  ಕೆಪಿಟಿಸಿಎಲ್‌ನಲ್ಲಿ 25, ಮಂಗಳೂರು ವಿಶ್ವವಿದ್ಯಾಲಯದಲ್ಲಿ 21, ಮೈಸೂರು ಕಾಗದ ಕಾರ್ಖಾನೆಯಲ್ಲಿ 35, ಮಂಡ್ಯದ ಮೈಷುಗರ್‌ ಸಕ್ಕರೆ ಕಾರ್ಖಾನೆಯಲ್ಲಿ 19... ಹೀಗೆ ಬ್ಯಾಕ್‌ಲಾಗ್‌ ಹುದ್ದೆಗಳ ದೊಡ್ಡ ಪಟ್ಟಿಯೇ ಇದೆ ಎಂದು ಅವರು ವಿವರಿಸಿದರು.

ಬಡ್ತಿ ಅವ್ಯವಸ್ಥೆ: ಎಸ್‌ಸಿ/ಎಸ್‌ಟಿ ನೌಕರರಿಗೆ ಬಡ್ತಿ­ಯಲ್ಲಿ ಸಮಾನ ಅವಕಾಶ ಕಲ್ಪಿಸಬೇಕೆನ್ನುವ ಉದ್ದೇಶದಿಂದ ಅರ್ಹತಾ ಸೇವಾವಧಿಯನ್ನು 5ರಿಂದ 3 ವರ್ಷಕ್ಕೆ ಇಳಿಸಿ, 1982ರಲ್ಲೇ ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. ಇವತ್ತಿಗೂ ಈ ಆದೇಶವನ್ನು ಹಲವು ಇಲಾಖೆಗಳು ಜಾರಿಗೊಳಿಸಿಲ್ಲ. ಈ ಸಂಬಂಧ ಹಿಂದೆ ಕೂಡ ಸಮಿತಿ ತಕರಾರು ತೆಗೆದು, ವ್ಯವಸ್ಥೆ ಸರಿಪಡಿಸಬೇಕು ಎನ್ನುವ ಶಿಫಾರಸು ಮಾಡಿತ್ತು. ಇಷ್ಟಾದರೂ ಅದು ಪ್ರಯೋಜನಕ್ಕೆ ಬಂದಿಲ್ಲ. ಹಲವು ಇಲಾಖೆಗಳು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದಿಲ್ಲ ಎಂದು ನರೇಂದ್ರಸ್ವಾಮಿ ಟೀಕಿಸಿದರು.

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮತ್ತೊಮ್ಮೆ ಎಲ್ಲ ಇಲಾಖೆಗಳಿಗೂ ಪತ್ರ ಬರೆದು, ಪರಿಷ್ಕೃತ ಆದೇಶ ಹೊರಡಿಸಲು ಸೂಚಿಸಬೇಕು ಎಂದು ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.

ಎಸ್‌ಸಿ/ಎಸ್‌ಟಿಗೆ 1500 ಮದ್ಯದಂಗಡಿ  ಪರವಾನಗಿ
ಬೆಂಗಳೂರು: ಜನಸಂಖ್ಯೆಯನ್ನೇ ಆಧಾರವಾಗಿ ಇಟ್ಟುಕೊಂಡರೆ ಪರಿಶಿಷ್ಟ ಜಾತಿ ಮತ್ತು ಪಂಗಡದ 1,500 ಮಂದಿಗೆ ಮದ್ಯದಂಗಡಿಯ ಪರವಾನಗಿ ನೀಡಬೇಕಾಗುತ್ತದೆ ಎಂದು ವಿಧಾನಮಂಡಲದ ಎಸ್‌ಸಿ/ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

1991ರಲ್ಲಿ 3,965 ಮದ್ಯದ ಅಂಗಡಿ ಪರವಾನಗಿಗಳು ಇದ್ದವು. ಆಗಿನ ಜನಸಂಖ್ಯೆ ಪ್ರಕಾರ 1000 ಪರವಾನಗಿಗಳನ್ನು ನೀಡಬೇಕಾಗುತ್ತದೆ. ಹಾಲಿ ಜನಸಂಖ್ಯೆ ತೆಗೆದುಕೊಂಡರೆ ಅದು ಇನ್ನೂ 500ರಷ್ಟು ಹೆಚ್ಚಾಗುತ್ತದೆ ಎಂದು ಅವರು ವಿವರಿಸಿದರು.
ಅಬಕಾರಿ ಸಚಿವರು ಕೂಡ ಜನಸಂಖ್ಯೆ ಆಧಾರದ ಮೇಲೆ ಪರವಾನಗಿ ನೀಡುವ ಭರವಸೆ ನೀಡಿದ್ದಾರೆ. ಇದು ಸಮಿತಿಯ ಶಿಫಾರಸು ಕೂಡ ಆಗಿದ್ದು ಅದನ್ನು ಆದಷ್ಟು ಬೇಗ ಜಾರಿ ಮಾಡಬೇಕು ಎಂದು ಹೇಳಿದರು.

ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ ಅವರು ಮಾತನಾಡಿ, ಅಕ್ಟೋಬರ್‌ನಲ್ಲಿ ಈ ಕುರಿತ ವಿಷಯ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರಲಿದೆ ಎಂದು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT