ADVERTISEMENT

ಭತ್ತಕ್ಕೆ ಸೂಕ್ತ ಬೆಲೆ ನಿಗದಿಗೆ ಶಿಫಾರಸು

ಬೆಂಬಲ ಬೆಲೆ ಹೆಚ್ಚಳ ಕುರಿತು ರೈತರ ಅಹವಾಲು ಆಲಿಸಿದ ಕೃಷಿ ಬೆಲೆ ಆಯೋಗ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 20:13 IST
Last Updated 1 ಆಗಸ್ಟ್ 2015, 20:13 IST

ಬೆಂಗಳೂರು: ‘ಭತ್ತಕ್ಕೆ ಸೂಕ್ತ ಬೆಲೆ ನಿಗದಿಪಡಿಸುವ ಬಗ್ಗೆ ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್‌ ಕಮ್ಮರಡಿ ಅವರು ತಿಳಿಸಿದರು. ಭತ್ತ ಬೆಳೆಯುವ ರೈತರ ಜತೆ ಶನಿವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಯ ರೈತ ಸಂಘಗಳ ಒಕ್ಕೂಟದ ಸಂಚಾಲಕ ಬಲ್ಲೂರು ರವಿ ಕುಮಾರ್‌ ಮತ್ತು ಇತರ ರೈತ ಮುಖಂಡರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ರೈತರ ಅಹವಾಲು ಆಲಿಸಿ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಒಂದು ತಿಂಗಳ ಒಳಗಾಗಿ ಆದೇಶ ಹೊರಡಿಸಬೇಕು ಎಂದು ಕೃಷಿ ಬೆಲೆ ಆಯೋಗಕ್ಕೆ ಆದೇಶ ನೀಡಿತ್ತು. ಈ ಸಲುವಾಗಿ ಕೃಷಿ ಬೆಲೆ ಆಯೋಗವು ರೈತರ ಅಹವಾಲು ಆಲಿಸಿತು.

ಬಲ್ಲೂರು ರವಿಕುಮಾರ್‌ ಮಾತನಾಡಿ, ‘2011ರಿಂದ 2103ರವರೆಗೆ ಪ್ರತಿ ಕ್ವಿಂಟಲ್‌ ಭತ್ತಕ್ಕೆ ₨ 2200ರಿಂದ ₨2600 ಬೆಲೆ ಇತ್ತು. ಆಗ ಕೇಂದ್ರ ಸರ್ಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲೆ ಬೆಲೆಯ ಮೇಲೆ ಪ್ರತಿ ಕ್ವಿಂಟಲ್‌ ಭತ್ತಕ್ಕೆ ₨ 290  ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. 2014–15ರಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡುವುದನ್ನು ಸ್ಥಗಿತಗೊಳಿಸಿದೆ. ಈಗ ಭತ್ತದ ಧಾರಣೆ ₨ 1250ಕ್ಕೆ ಕುಸಿದಿದೆ’ ಎಂದು ವಸ್ತುಸ್ಥಿತಿಯನ್ನು ಬಿಚ್ಚಿಟ್ಟರು.


ಭತ್ತ ಬೆಳೆಯಲು ತಗಲುವ ಖರ್ಚು ವೆಚ್ಚದ ವಿವರವನ್ನು ಸಭೆಯ ಗಮನಕ್ಕೆ ತಂದ ರೈತ ವೈ.ಎಸ್‌.ವರದರಾಜು ಕೆಂಗೇಹಳ್ಳಿ, ‘ಬೆಳೆ ಬೆಳೆಯಲು ತಗಲುವ ವೆಚ್ಚದ ಮೇಲೆ ಶೇ 50ರಷ್ಟು ಲಾಭವಾದರೂ ರೈತರಿಗೆ ಸಿಗಬೇಕು ಎಂದು ಸ್ವಾಮಿನಾಥನ್‌ ಆಯೋಗ ಶಿಫಾರಸ್ಸು ಮಾಡಿದೆ. ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಪ್ರಕಟಿಸುವಾಗ ಈ ಅಂಶವನ್ನು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು. ‘ರೈತರಿಗೆ ಬೆಂಬಲ ಬೆಲೆ ಬೇಕಾಗಿಲ್ಲ. ವಾಸ್ತವದ ಬೆಲೆ ನೀಡಬೇಕು’ ಎಂದು ತೇಜಸ್ವಿ ಪಾಟೀಲ್‌ ಒತ್ತಾಯಿಸಿದರು. ‘ಜನರಿಗೆ ಪುಗಸಟ್ಟೆ ಅಕ್ಕಿ ವಿತರಿಸಿರುವುದೂ ಭತ್ತದ ಧಾರಣೆ ಕುಸಿತಕ್ಕೆ ಪರೋಕ್ಷವಾಗಿ ಕಾರಣವಾಗಿದೆ. ಆನ್‌ಲೈನ್‌ ಮಾರಾಟ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರೆ ರೈತರಿಗೆ ಪ್ರಯೋಜನ ಆಗಬಹುದು’ ಎಂದು ರೈತ ಮುಖಂಡ ಷಣ್ಮುಖಪ್ಪ ಅಭಿಪ್ರಾಯಪಟ್ಟರು.

‘ಬೆಳೆ ಸಾಲ ಸುಲಭವಾಗಿ ಸಿಗುತ್ತದೆ. ಆದರೆ, ಬೆಳೆಯ ಅಡಮಾನ ಸಾಲಕ್ಕೆ ವಾರ್ಷಿಕ ಶೇ 12ರಿಂದ ಶೇ 15ರಷ್ಟು ಬಡ್ಡಿ ತೆರಬೇಕಾಗಿದೆ. ಅಡಮಾನ ಸಾಲವೂ ಕಡಿಮೆ ಬಡ್ಡಿಯಲ್ಲಿ ಸಿಕ್ಕರೆ ಹೆಚ್ಚು ಅನುಕೂಲ ಆಗುತ್ತದೆ’ ಎಂದು ಕೆಲವು ರೈತರು ಸಲಹೆ ನೀಡಿದರು. ಅನ್ನಭಾಗ್ಯ ಯೋಜನೆ ಅಡಿ ವಿತರಿಸುವ ಅಕ್ಕಿಯನ್ನು ರೈತರಿಂದ ನೇರವಾಗಿ ಖರೀದಿಸುವಂತೆ ಒತ್ತಾಯಿಸಿದರು.

ರೈತರ ಅಹವಾಲು ಆಲಿಸಿದ ಬಳಿಕ ಆಯೋಗವು ಮಧ್ಯಾಹ್ನ ಸಭೆ ಸೇರಿ ಭತ್ತಕ್ಕೆ ಸೂಕ್ತ ಬೆಲೆ ನಿಗದಿ ಪಡಿಸುವ ಚರ್ಚೆ ನಡೆಸಿತು. ‘ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಭತ್ತವನ್ನು ಖರೀದಿಸಿದರೆ ಸಬ್ಸಿಡಿಯನ್ನು ಸ್ಥಗಿತಗೊಳಿಸುವುದಾಗಿ 2014ರ ಜೂನ್‌ನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಹಾಗಾಗಿ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆಯ ಮೇಲೆ ನೀಡುವ ಪ್ರೋತ್ಸಾಹ ಧನವನ್ನು ನಿಲ್ಲಿಸಿದೆ.  ಏಕಾಏಕಿ ಧಾರಣೆ ಕುಸಿದಿದ್ದರಿಂದ ಭತ್ತದ ಬೆಳೆಗೆ ತಗಲಿದ ವೆಚ್ಚದಷ್ಟೂ  ಮೊತ್ತ ರೈತರಿಗೆ ಸಿಗುತ್ತಿಲ್ಲ. ಈ ಬಿಕ್ಕಟ್ಟನ್ನು ಪರಿಹರಿಸುವ ಬಗ್ಗೆ ಸಮಾಲೋಚನೆ ನಡೆಸಿ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದು ಪ್ರಕಾಶ್‌ ಕಮ್ಮರಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT