ADVERTISEMENT

ಭೂಅಕ್ರಮ: ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ದೂರು

ಇವರಲ್ಲಿ ಒಬ್ಬರು ಉಪಲೋಕಾಯುಕ್ತ ಅಡಿ ಅವರ ಅಳಿಯ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 20:27 IST
Last Updated 3 ಆಗಸ್ಟ್ 2015, 20:27 IST

ಬೆಂಗಳೂರು: ವಿನಾಯಕ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ಸೇರಿದ ಜಮೀನನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಮೇಲೆ ಉಪ ವಿಭಾಗಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಕೆ. ಅಯ್ಯಪ್ಪ, ಬೆಂಗಳೂರು ನಗರದ ಹಿಂದಿನ ವಿಶೇಷ ಜಿಲ್ಲಾಧಿಕಾರಿ ಜಿ.ಎಸ್. ನಾಯಕ್ ಅವರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ಸೋಮವಾರ ದೂರು ಸಲ್ಲಿಸಲಾಗಿದೆ. ಇವರಲ್ಲಿ ಗಂಗಾಧರಸ್ವಾಮಿ ಅವರು ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರ ಅಳಿಯ. 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕಂಡೇಯ ಎಸ್‌. ಗೊಂಬೆ ಎಂಬುವವರು ಸಲ್ಲಿಸಿದ ಖಾಸಗಿ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು 2013ರಲ್ಲಿ ತನಿಖೆ  ಪೂರ್ಣಗೊಳಿಸಿದ್ದರು. ಸರ್ಕಾರಿ ಅಧಿಕಾರಿಗಳ ವಿರುದ್ಧ ಖಾಸಗಿ ದೂರು ಸಲ್ಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿತ್ತು. ಈ ಬಾರಿ ದೂರನ್ನು ಮಾಜಿ ಕಾರ್ಪೊರೇಟರ್‌ ಲಕ್ಷ್ಮೀನಾರಾಯಣ ಅವರು ಸಲ್ಲಿಸಿದ್ದಾರೆ.

ದೂರಿನಲ್ಲಿ ಏನಿದೆ?:  ಲಕ್ಷ್ಮೀನಾರಾಯಣ ಸಲ್ಲಿಸಿರುವ ದೂರಿನ ವಿವರ. ‘ಸಂಘಕ್ಕೆ ನಿಯಮಾನುಸಾರ ಜಮೀನು ನೀಡಲಾಗಿತ್ತು. ಕಾರ್ಯಾದೇಶ ಮತ್ತು ಖಾತೆ ಕೂಡ ಸಿಕ್ಕಿತ್ತು. ಸದಸ್ಯರ ಹೆಸರಿನಲ್ಲಿ ನಿವೇಶನಗಳ ನೋಂದಣಿ ಕೂಡ ಆಯಿತು’. ‘ಈ ಹಂತದಲ್ಲಿ ಗಾಳಿಹನುಮಮ್ಮ ಎಂಬವರು ಕರ್ನಾಟಕ ಎಸ್‌ಸಿ, ಎಸ್‌ಟಿ (ಜಮೀನು ವರ್ಗಾವಣೆ ತಡೆ) ಕಾಯ್ದೆಯ ಅನ್ವಯ ಆ ಜಮೀನಿನ ಮೂಲ ಮಾಲೀಕ ಮಲ್ಲಿಯಪ್ಪ ವಿರುದ್ಧ ಆಗಿನ ಉಪ ವಿಭಾಗಾಧಿಕಾರಿ ಗಂಗಾಧರಸ್ವಾಮಿ ಅವರಿಗೆ ದೂರು ಸಲ್ಲಿಸಿದರು’.

‘ಜಮೀನನ್ನು ಗಾಳಿಹನುಮಮ್ಮ ಅವರಿಗೆ ಮರಳಿಸಬೇಕು ಎಂದು ಉಪ ವಿಭಾಗಾಧಿಕಾರಿ ಆದೇಶಿಸಿದರು. ಜಮೀನು ಪಡೆದ ಗಾಳಿಹನುಮಮ್ಮ, ಅದರಲ್ಲಿ ಒಂದು ಎಕರೆಯನ್ನು ಮಿರ್ಲೆ ವರದರಾಜು ಎಂಬುವವರಿಗೆ ₹ 3 ಕೋಟಿಗೆ ಮಾರಾಟ ಮಾಡಿದರು. ನಂತರ ಗಾಳಿಹನುಮಮ್ಮ ಅವರು ತಾವು ಮಾರಾಟ ಮಾಡಿದ ಜಮೀನನ್ನೂ ಸೇರಿಸಿ, ಒಟ್ಟು ಎರಡು ಎಕರೆ ಜಮೀನನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸಲು ಅರ್ಜಿ ಸಲ್ಲಿಸಿದರು’.

‘ಜಮೀನಿನ ಸ್ಥಿತಿ ಏನು ಎಂಬುದು ಎಲ್ಲ ಅಧಿಕಾರಿಗಳಿಗೆ ತಿಳಿದಿತ್ತು. ಆದರೆ ಅವರು ಜಮೀನು ಪರಿವರ್ತನೆ, ಮಾರಾಟ ಮತ್ತು ಖಾತೆ ಬದಲಾವಣೆಗೆ ಅನುಮತಿ ನೀಡಿದರು. ಸಂಘದ ಸದಸ್ಯರಿಗೆ ನೀಡಿದ್ದ ಖಾತೆಯನ್ನು ರದ್ದು ಮಾಡಲು ಪ್ರಯತ್ನಿಸಿದರು’. ‘ಉಪ ವಿಭಾಗಾಧಿಕಾರಿಯವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಸ್ಪಷ್ಟನೆ ಕೋರಿದ್ದರು. ಆದರೆ ಸ್ಪಷ್ಟನೆ ಬರುವ ಮೊದಲೇ ಅವರು ಜಮೀನು ಪರಿವರ್ತನೆಗೆ ಅನುಮೋದನೆ ನೀಡಿದರು’.

‘ಆದ್ದರಿಂದ ಜಿ.ಎಸ್. ನಾಯಕ್‌, ಅಯ್ಯಪ್ಪ, ಗಂಗಾಧರಸ್ವಾಮಿ, ಅಂದಿನ ವಿಶೇಷ ತಹಶೀಲ್ದಾರ್‌ ಆರ್‌. ಕೃಷ್ಣಯ್ಯ, ತಹಶೀಲ್ದಾರ್‌ಗಳಾದ ಬಿ. ಶಿವಸ್ವಾಮಿ, ಆರ್. ಸುಮಾ, ಗಾಳಿಹನುಮಮ್ಮ, ಮಿರ್ಲೆ ವರದರಾಜ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು’ ಎಂದು ಲಕ್ಷ್ಮೀನಾರಾಯಣ  ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.