ADVERTISEMENT

ಮತಾಂತರ ಸಮಾಜಕ್ಕೆ ಅಂಟಿರುವ ಪಿಡುಗು

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2015, 19:55 IST
Last Updated 4 ಮಾರ್ಚ್ 2015, 19:55 IST

ಬೆಂಗಳೂರು: ‘ಮತಾಂತರ ಸಮಾಜಕ್ಕೆ ಅಂಟಿರುವ  ಒಂದು ಪಿಡುಗು. ಇದು ಮೌಢ್ಯದ ಸಂಕೇತ. ಮತಾಂತರವನ್ನು ಯಾರೂ ಒಪ್ಪಬಾರದು’ ಎಂದು ಸ್ವಾತಂತ್ರ್ಯ ಹೋರಾಟ­ಗಾರ ಎಚ್‌.ಎಸ್.ದೊರೆಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾ­ಗೋಷ್ಠಿಯಲ್ಲಿ ಮಾತ­ನಾ­ಡಿದ ಅವರು, ‘ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಂಘ ಪರಿವಾರ ಸೇರಿದಂತೆ ವಿವಿಧ ಸಂಘಟನೆಗಳು ರಾಮಮಂದಿರ ನಿರ್ಮಾಣವಾಗ­ಬೇಕು, ಭಗ­ವದ್ಗೀತೆ­ಯನ್ನು ರಾಷ್ಟ್ರ ಗ್ರಂಥವನ್ನಾಗಿ ಘೋಷಣೆ ಮಾಡ­ಬೇಕು, ಮತಾಂತರ ಮಾಡುವುದು ನಮ್ಮ ಹಕ್ಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲ’ ಎಂದರು.

‘ಮತಾಂತರಕ್ಕೆ ಒಂದು ನಿಯಮ ಇದೆ. ತಮ್ಮ ಮಗ ಹೀರಾ­ಲಾಲ್‌ ಗಾಂಧಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಾಗ ಗಾಂಧೀಜಿ ಅವರು, ‘ಆತ ಇಸ್ಲಾಂ ಧರ್ಮವನ್ನು ಅಭ್ಯಾಸ ಮಾಡಿ ಅದು ಹಿಂದೂ ಧರ್ಮಕ್ಕಿಂತ ಉತ್ತಮವಾದದ್ದು ಎಂದು ತಿಳಿದು ಅದಕ್ಕೆ ಮತಾಂತರಗೊಂಡಿದ್ದರೆ ನಾನು ಖುಷಿ ಪಡುತ್ತಿದ್ದೆ. ಸಾಲ ಮನ್ನಾ ಆಗುತ್ತದೆ ಎನ್ನುವ ಕಾರಣಕ್ಕೆ ಆತ ಮತಾಂತರಗೊಂಡಿರುವುದರಿಂದ ಇಸ್ಲಾಂಗೆ ಯಾವುದೇ ಗೌರವ ಬರುವುದಿಲ್ಲ. ಬಟ್ಟೆ ಕಳಚಿ ಬೇರೆ ಬಟ್ಟೆ ಹಾಕಿದಷ್ಟು ಮತಾಂತರ ಸುಲಭವಲ್ಲ ಎಂದು ಹೇಳಿದ್ದರು’ ಎಂದರು.

ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ‘ಅಧಿಕಾರ­ದ­ಲ್ಲಿ­­ರು­ವವರು, ಬಹು ಸಂಖ್ಯಾತರು ಅಲ್ಪಸಂಖ್ಯಾತರ ಹಿತ ಕಾಪಾ­ಡ­ಬೇಕು. ಆದರೆ, ಇತ್ತೀಚೆಗೆ ಸುಳ್ಯ ಮತ್ತು ಉಪ್ಪಿ­ನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಅರ್‌ಎಸ್ಎಸ್‌ ಮುಖಂಡರೊಬ್ಬರು ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಸರ್ಕಾರ ಇಂತಹ ಕಾರ್ಯ­ಕ್ರಮಗಳನ್ನು ನಿಯಂತ್ರಿಸಬೇಕು’ ಎಂದರು.

ಸಾಹಿತಿ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯಿ, ‘ಕೇಂದ್ರ ಸರ್ಕಾರವು ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುವ ಕೆಲಸ ಮಾಡುತ್ತಿದೆ. ಸಂಘ ಪರಿವಾರ ಉದ್ರೇಕಕಾರಿ ಹೇಳಿಕೆ ನೀಡಿದರೆ, ಪ್ರಧಾನಿ ಮೋದಿ ಅವರು ಸಂಸತ್‌ನಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ’ ಎಂದು ಟೀಕಿಸಿದರು.

ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಮಾತನಾಡಿ, ‘ಮದರ್‌ ತೆರೆಸಾ ಆವರ ಕುರಿತ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ನೀಡಿರುವ ಹೇಳಿಕೆ ಖಂಡ­ನೀಯ. ಮದರ್‌ ತೆರೆಸಾ ಅವರಿಗೆ ಮತಾಂತರದ ಉದ್ದೇಶ­ವಿದ್ದಿದ್ದರೆ ಜೀವನವನ್ನು ಮುಡಿಪಾಗಿಟ್ಟು ಬಡವರ ಸೇವೆ ಮಾಡುತ್ತಿರ­ಲಿಲ್ಲ. ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸ ಸಂಘ ಪರಿವಾರ, ವಿಶ್ವ ಹಿಂದೂ ಪರಿಷತ್‌ ಸೇರಿ­ದಂತೆ ವಿವಿಧ ಸಂಘಟ­ನೆ­­ಗಳಿಂದ ಆಗುತ್ತಿದೆ. ಇದು ನಿಲ್ಲದಿದ್ದರೆ ಸಮಾನ ಮನಸ್ಕರು ಸೇರಿ ಚಳವಳಿ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.

ವಿಶ್ವ ಹಿಂದೂ ಪರಿಷತ್‌ನವರು ಸಮಾಜೋತ್ಸ­ವದ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿ­ದ್ದಾರೆ. ಇದು ಹೀಗೆ ಮುಂದುವರೆದರೆ ಸಮಾನ ಮನಸ್ಕರು ಸೇರಿ ‘ಸೌಹಾರ್ದ ಸಮಾಜೋತ್ಸವ’ ನಡೆಸುವ ಮೂಲಕ ಅದನ್ನು ವಿರೋಧಿಸಲಾಗುವುದು
– ಡಾ.ಕೆ.ಮರುಳಸಿದ್ದಪ್ಪ

ಭಗವದ್ಗೀತೆಗೆ ರಾಷ್ಟ್ರೀಯ ಧರ್ಮದ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿಕೆ ನೀಡಿದ್ದಾರೆ. ಗೀತೆಯಲ್ಲಿರುವ ಉತ್ತಮ ಅಂಶಗಳನ್ನು ಒಪ್ಪಿಕೊಳ್ಳುವ ಬಗ್ಗೆ ಯಾವುದೇ ವಿರೋಧ ಇಲ್ಲ. ಆದರೆ, ಅದನ್ನು ಉನ್ನತ ಸ್ಥಾನದಲ್ಲಿ ಕೂರಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ಗೀತೆಯ ಪಾವಿತ್ರ್ಯವನ್ನು ಹಾಳು ಮಾಡುತ್ತಿದೆ
– ಎಚ್‌.ಎಸ್.ದೊರೆಸ್ವಾಮಿ

ಸಂಘ ಪರಿವಾರ ಮತ್ತು ಅದರ ಅಂಗ ಸಂಸ್ಥೆಗಳ ಮುಖಂಡರು ಬಾಯಿ ಬಿಟ್ಟರೆ ವಿಷ ಕಾರುತ್ತಾರೆ. ರಾಜ್ಯ ಸರ್ಕಾರವು ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಹಿಂದೂ ಸಮಾಜೋತ್ಸವ ನಡೆಸಲು ಅನುಮತಿ ನೀಡಬಾರದಿತ್ತು.  ನಗರದಲ್ಲಿ ನಡೆದ ವಿರಾಟ್‌ ಹಿಂದೂ ಸಮಾಜೋತ್ಸವದಲ್ಲಿ ಪ್ರವೀಣ್ ತೊಗಾಡಿಯಾ ಅವರ ಭಾಷಣ ಪ್ರಸಾರ ಮಾಡದಂತೆ ನಿರ್ಬಂಧ ಹೇರಿದ್ದರೂ ಭಾಷಣ ಪ್ರಸಾರ ಮಾಡಲಾಯಿತು. ಆಗ ಪೊಲೀಸರು ಏನು ಮಾಡುತ್ತಿದ್ದರು
– ಪ್ರೊ.ಬಿ.ಕೆ. ಚಂದ್ರಶೇಖರ್‌, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT