ADVERTISEMENT

ಮಲಿನಗೊಂಡ ಉದ್ಯಾನ ನಗರಿ

ದೇಶದ ಮಾಲಿನ್ಯ ನಗರಗಳಲ್ಲಿ ಬೆಂಗಳೂರಿಗೆ 5 ನೇ ಸ್ಥಾನ: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವರದಿ

ಅನುಪಮಾ ಫಾಸಿ
Published 29 ಮಾರ್ಚ್ 2015, 19:59 IST
Last Updated 29 ಮಾರ್ಚ್ 2015, 19:59 IST

ಬೆಂಗಳೂರು: ಬೆಂಗಳೂರು  ನಗರ ಮಾಲಿನ್ಯ­ದಲ್ಲಿ ದೇಶದ ಐದನೇ ಸ್ಥಾನದಲ್ಲಿದ್ದು, ಮಾಲಿನ್ಯ ನಗರಿ ಎಂಬ ಕುಖ್ಯಾತಿಯ ಪಟ್ಟಿಗೆ ಸೇರಿದೆ.

ಭಾರತೀಯ ವಿಜ್ಞಾನ ಸಂಸ್ಥೆಯು (ಐಐ­ಎಸ್‌ಸಿ) ನಡೆಸಿರುವ ಅಧ್ಯಯನ ವರದಿಯಲ್ಲಿ ಈ ಅಂಶವು ಬಹಿರಂಗ­ವಾಗಿದೆ. 10 ಮಾಲಿನ್ಯ ನಗರ­ಗಳಲ್ಲಿ ಬೆಂಗಳೂರು ನಗರ 5 ನೇ ರ್‌್ಯಾಂಕ್‌ನಲ್ಲಿದೆ.

‘ನವೀಕರಿಸಬಹುದಾದ ಮತ್ತು ಸುಸ್ಥಿರ ಇಂಧನ’- ಹೆಸರಿನ ವರದಿಯನ್ನು ಐಐಎಸ್‌ಸಿಯ ವಿದ್ಯಾರ್ಥಿಗಳ ತಂಡ ಸಿದ್ಧಪಡಿಸಿದೆ.
ಐಐ­ಎಸ್‌ಸಿ­ಯ ಪರಿಸರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಟಿ.ವಿ. ರಾಮಚಂದ್ರ ಅವರ ಮಾರ್ಗ ದರ್ಶ­ನದಲ್ಲಿ ಈ ಅಧ್ಯಯನ  ನಡೆಸ ಲಾಗಿದ್ದು, ದೇಶದ 10 ಮಹಾನಗರಗಳಲ್ಲಿ ವಿದ್ಯಾರ್ಥಿಗಳ ತಂಡವು ಅಧ್ಯಯನ ನಡೆಸಿದೆ.

ಈ ತಂಡವು ದೆಹಲಿ, ಮುಂಬೈ, ಕೋಲ್ಕತ್ತ, ಬೆಂಗಳೂರು, ಹೈದರಾಬಾದ್, ಅಹಮದಾ­ಬಾದ್, ಕೊಯಮತ್ತೂರು, ಭೋಪಾಲ್, ಪುಣೆ ಮತ್ತು ಕೊಚ್ಚಿ ನಗರಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿತ್ತು.

ಈ ಅಧ್ಯಯನ ವರದಿ ಪ್ರಕಾರ ದೆಹಲಿ ದೇಶದಲ್ಲೇ ಅತಿ ಹೆಚ್ಚು ಮಲಿನ ಗೊಂಡಿ­ರುವ ನಗರವಾಗಿದೆ. ಎರಡನೇ ಸ್ಥಾನದಲ್ಲಿ ಮುಂಬೈ ನಗರವಿದ್ದರೆ, ಕೋಲ್ಕತ್ತ ಮೂರನೇ ಸ್ಥಾನ ಮತ್ತು ಚೆನ್ನೈ ನಾಲ್ಕನೇ ಸ್ಥಾನ­ದಲ್ಲಿವೆ. ಬೆಂಗಳೂರು ಐದನೇ ಸ್ಥಾನದಲ್ಲಿದೆ.

ADVERTISEMENT

ಬೆಂಗಳೂರಿನಲ್ಲಿ ಸಾರಿಗೆ ವ್ಯವಸ್ಥೆಯಿಂದಲೇ ಹೆಚ್ಚು ಹಸಿರು ಮನೆ ಪರಿಣಾಮ ಉಂಟಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಶೀಘ್ರದಲ್ಲೇ ಈ ವರದಿಯನ್ನು ಪ್ರಕಟಿಸಿ, ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಅಧ್ಯಯನ  ತಂಡ ಸಿದ್ಧತೆ ನಡೆಸಿದೆ. ‘ಕಾರ್ಖಾನೆಗಳಿಂದ ಆಗುವ ಮಾಲಿನ್ಯ, ವಿದ್ಯುತ್ ಉಪಕರಣಗಳಿಂದ ಬಿಡುಗಡೆ­ಯಾಗುವ ಉಷ್ಣಾಂಶ, ವಾಹನ ಗಳಿಂದ ಉಂಟಾ­ಗುವ ಮಾಲಿನ್ಯ, ಗೃಹ ಬಳಕೆ, ಕೈಗಾರಿಕೆ, ನಗರೀಕರಣ­ವನ್ನು ಆಶ್ರಯಿಸಿ ವರದಿ ತಯಾರಿಸಲಾಗಿದೆ. 2009ರಿಂದ 2014ರ ಅವಧಿಯಲ್ಲಿ ದೇಶದ 10 ಮಹಾನಗರಗಳಲ್ಲಿ ಆಗಿರುವ ಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಲಾಗಿದೆ’ ಎಂದು ಪ್ರೊ.ಟಿ.ವಿ.ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಐದು ವರ್ಷಗಳಲ್ಲಿ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ, ಮಿಥೇನ್ ಪ್ರಮಾಣ ಹಾಗೂ ನೈಟ್ರಸ್‌ ಆಕ್ಸೈಡ್‌ ಪ್ರಮಾಣದಲ್ಲಿ ಏರಿಕೆ­ಯಾಗಿದ್ದು, ಯಾವ ಮೂಲಗಳಿಂದ ಇವು­ಗಳ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಕೂಡ ಅಧ್ಯಯನ ಮಾಡಲಾಗಿದೆ’ ಎಂದರು.

‘ಬೆಂಗಳೂರಿನಲ್ಲಿ ಘನ ಮತ್ತು ದ್ರವ ತ್ಯಾಜ್ಯದ ಸರಿಯಾದ ನಿರ್ವಹಣೆ ಆಗುತ್ತಿಲ್ಲ. ಇದರಿಂದ ಬೆಂಗಳೂರಿನಲ್ಲಿ ಮಿಥೇನ್ ಪ್ರಮಾಣ ಹೆಚ್ಚುತ್ತಿದೆ. ಒಳಚರಂಡಿಯ ತ್ಯಾಜ್ಯವೂ ಹೆಚ್ಚು ಸಮಯ ತೆರೆದ ಜಾಗಗಳಲ್ಲಿ ಶೇಖರಗೊಳ್ಳುವುದು ಕೂಡಾ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ. ಹೀಗಾಗಿ ಎಲ್ಲ ರೀತಿಯಿಂದಲೂ ಸ್ವಚ್ಛತೆ­ಯಾಗಬೇಕಿದೆ. ಈ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕು’ ಎನ್ನುತ್ತಾರೆ ಅವರು ‘ಉದ್ಯಾನ ನಗರಿಯಾಗಿದ್ದ ಬೆಂಗಳೂರು ನಗರ ಇಂದು ಮಾಲಿನ್ಯ ನಗರಿಯಾಗುತ್ತಿದೆ. ಈಗಲೇ ಎಚ್ಚೆತ್ತುಕೊಂಡು ಮಾಲಿನ್ಯವನ್ನು ಕಡಿಮೆಮಾಡಬೇಕಾಗಿದೆ. ಇಲ್ಲಿ ಸರ್ಕಾರದ ಜತೆಗೆ ಸಂಘ ಸಂಸ್ಥೆಗಳು, ಜನಸಾಮಾನ್ಯರೂ ಸಹ ಪ್ರಯತ್ನಿಸಬೇಕಾಗಿದೆ’ ಎಂದು ಸಲಹೆ ನೀಡಿದರು.

‘ಈಗಲೇ ಎಚ್ಚೆತ್ತು­ಕೊಳ್ಳುವುದು ಅಗತ್ಯ’
ವಿಶ್ವದಲ್ಲೇ ಅತಿ ಹೆಚ್ಚು ಮಲಿನಗೊಂಡಿರುವ ನಗರಿ ಬೀಜಿಂಗ್. ಅದೇ ಮಾದರಿಯಲ್ಲಿ ಬೆಂಗಳೂರು ಕೂಡ ಮಲಿನವಾಗುತ್ತಿದೆ. ಈ ಬಗ್ಗೆ ಈಗಲೇ ಎಚ್ಚೆತ್ತು, ಕ್ರಮ ಕೈಗೊಳ್ಳದೆ ಇದ್ದರೆ ಬೆಂಗಳೂರು ಮಲಿನಗೊಂಡ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುತ್ತದೆ. ಪ್ರೊ.ಟಿ.ವಿ. ರಾಮಚಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.