ADVERTISEMENT

‘ಮಸೀದಿ ಒಡೆದರೆ ರಾಮ ಸಂತುಷ್ಟನಾಗುತ್ತಾನಾ?’

ಬಹುಜನರ ನಡಿಗೆ ಭೀಮಾವಾದದ ಕಡೆಗೆ ಕಾರ್ಯಕ್ರಮದಲ್ಲಿ ಸಾಹಿತಿ ಶರೀಫಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 20:27 IST
Last Updated 6 ಡಿಸೆಂಬರ್ 2017, 20:27 IST

ಬೆಂಗಳೂರು: ‘ಅಂಬೇಡ್ಕರ್‌ ಅವರ ಪುಣ್ಯತಿಥಿಯ ದಿನವೇ, ಬಾಬ್ರಿ ಮಸೀದಿ ದ್ವಂಸವಾದ ದಿನವಾಗಿ ಆಚರಿಸಲಾಗುತ್ತಿದೆ. ಮಸೀದಿ ಒಡೆದರೆ ರಾಮ ಸಂತುಷ್ಟನಾಗುತ್ತಾನಾ? ಅದು ಸಂವಿಧಾನ ವಿರೋಧಿ ಕಾರ್ಯ. ಮಾನವೀಯತೆ ಎಲ್ಲಕ್ಕಿಂತ ದೊಡ್ಡದು’ ಎಂದು ಸಾಹಿತಿ ಕೆ. ಶರೀಫಾ ಹೇಳಿದರು.

ಡಾ. ಅಂಬೇಡ್ಕರ್‌ ಅವರ ಪುಣ್ಯತಿಥಿ ಪ್ರಯುಕ್ತ, ದಲಿತ ಸಂಘರ್ಷ ಸಮಿತಿ (ದಸಂಸ) ಸ್ವಾತಂತ್ರ್ಯಉದ್ಯಾನದಲ್ಲಿ ಆಯೋಜಿಸಿದ್ದ  ‘ಬಹುಜನರ ನಡಿಗೆ ಭೀಮಾವಾದದ ಕಡೆಗೆ,  ಸ್ವತಂತ್ರ್ಯ ರಾಜ್ಯಾಧಿಕಾರಕ್ಕಾಗಿ ನಮ್ಮೆಲ್ಲರ ನಡಿಗೆ’ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.

‘ಬಹುತ್ವವನ್ನು ಅಳಿಸುವುದು ಒಳ್ಳೆಯದಲ್ಲ. ಜನರನ್ನು ಧರ್ಮದ ಆಧಾರದ ಮೇಲೆ ಒಡೆಯುತ್ತಿದ್ದಾರೆ. ಅಂದು ಗಾಂಧಿಯನ್ನು ಕೊಂದವರೇ ಇಂದು ಸ್ವಚ್ಛ ಭಾರತಕ್ಕೆ ಗಾಂಧಿ ಹೆಸರು ಬಳಸುತ್ತಿದ್ದಾರೆ’  ಎಂದರು

ADVERTISEMENT

‘ಜಿಎಸ್‌ಟಿ, ನೋಟು ರದ್ಧತಿ ಕಾರ್ಯಗಳು ವಿಫಲವಾದಾಗ, ಮಂದಿರ– ಮಸೀದಿ ವಿಚಾರ ತಲೆ ಎತ್ತುತ್ತವೆ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ ಎಂಬುದಕ್ಕೆ ಪುರಾವೆ ಏನಿದೆ?’ ಎಂದು ಶರೀಫಾ ಪ್ರಶ್ನಿಸಿದರು.

‘ಒಂದು ಮಸೀದಿ, ಒಂದು ದೇವಾಲಯ ಕೆಡುವುದರಿಂದ ಯಾರಿ‌ಗೂ ನಷ್ಟವಿಲ್ಲ. ನೂರಾರು ಮಂದಿರ–ಮಸೀದಿಗಳು ಇವೆ. ಆದರೆ ಅವುಗಳ ಜತೆ ಜನರಿಗೆ ಭಾವನಾತ್ಮಕ ನಂಟಿದೆ. ಹೀಗಾಗಿ, ಧರ್ಮ ರಾಜಕಾರಣ ನಮ್ಮನ್ನು ಲೂಟಿ ಮಾಡಿದಷ್ಟು ಬೇರಾವುದೂ ಲೂಟಿ ಮಾಡಲಿಲ್ಲ. ಮುಸ್ಲೀಮರು ಇಲ್ಲದ ಕಡೆಯಲ್ಲಿ ಹಿಂದೂಗಳು ಮೊಹರಂ ಆಚರಿಸುತ್ತಿದ್ದಾರೆ. ಇಂಥ ಸಾಮರಸ್ಯವನ್ನು ಹಾಳುಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಭಾರತ ಒಂದು ವೇಳೆ ಹಿಂದೂ ರಾಷ್ಟ್ರವಾದರೆ, ಅದು ನಾಶವಾಗುತ್ತದೆ. ನಾನು ನನ್ನ ಜನರನ್ನು ಎಚ್ಚರಿಸಿದ್ದೇನೆ. ಅವರೊಂದು ದಿನ ಬಿರುಗಾಳಿಯಾಗಿ ಬೀಸುತ್ತಾರೆ ಎಂದು ಅಂಬೇಡ್ಕರ್‌ ಹೇಳುತ್ತಿದ್ದರು. ಆದರೆ ದಲಿತ ಸಮುದಾಯದ ಶಿಕ್ಷಿತರು ಮೇಲ್ವರ್ಗದವರೊಂದಿಗೆ ಸೇರಿ ಉಳಿದ ದಲಿತರನ್ನು ಕಡೆಗಣಿಸುತ್ತಿದ್ದಾರೆ ಎಂಬ ನೋವು ಅವರನ್ನು ಕಾಡುತ್ತಿತ್ತು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಆರ್. ಮೋಹನ್‌ರಾಜ್‌, ದಲಿತ ಕ್ರೈಸ್ತ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಡಾ. ಮನೋಹರ್‌ ಚಂದ್ರ ಪ್ರಸಾದ್‌, ಬೆಂಗಳೂರು ವಿಶ್ವವಿದ್ಯಾಲಯದ ‍ಪ್ರಾಧ್ಯಾಪಕಿ ಡಾ. ಕಾವಾಲಮ್ಮ ಮಾತನಾಡಿದರು.  ದಸಂಸದ ಸಂಚಾಲಕ ಎಂ.ಸಿ ನಾರಾಯಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.