ADVERTISEMENT

ಮಸೂದೆ ಹಿಂದಿರುಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸುವ ಬಡಾವಣೆಗಳಲ್ಲಿ ಉದ್ಯಾನಗಳು ಮತ್ತು ಸಾರ್ವಜನಿಕ ಸೌಲಭ್ಯಗಳಿಗಾಗಿ ಮೀಸಲಿಡುವ ಪ್ರದೇಶವನ್ನು ಕಡಿತಗೊಳಿಸುವ ಮಸೂದೆ ಅಂಗೀಕರಿಸಿದ್ದಕ್ಕೆ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಈ ಸಂಬಂಧ ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್‌ ಪಬ್ಬಿಶೆಟ್ಟಿ, ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಎನ್‌.ಎಸ್‌. ಮುಕುಂದ್‌, ಖಜಾಂಚಿ ಡಿ.ಎಸ್‌. ರಾಜಶೇಖರ್‌ ಅವರು ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ.
‘ಯಾವುದೇ ನಗರ ಪ್ರದೇಶದಲ್ಲಿ ಹಸಿರು ವಲಯ ಹಾಗೂ ಮುಕ್ತ ಪ್ರದೇಶದ ಪ್ರಮಾಣವನ್ನು ಕಡಿತಗೊಳಿಸುವುದು ನಾಗರಿಕರ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಇದರಿಂದ ಮಾಲಿನ್ಯದ ಪ್ರಮಾಣ ಹೆಚ್ಚುವುದು ಮಾತ್ರವಲ್ಲದೆ ನಗರ ಉಷ್ಣದ್ವೀಪಗಳು ಸೃಷ್ಟಿಯಾಗುತ್ತವೆ. ರಿಯಲ್‌ ಎಸ್ಟೇಟ್‌ ಪ್ರಿಯರು ಮಾತ್ರ ಈ ಮಸೂದೆಯನ್ನು ಬೆಂಬಲಿಸಲು ಸಾಧ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಚರ್ಚೆಯಿಲ್ಲದೆ ಅಂಗೀಕರಿಸಿದ ಈ ಮಸೂದೆಯನ್ನು ವಾಪಸ್‌ ಕಳುಹಿಸಬೇಕು. ಜನರಿಂದ ಆಕ್ಷೇಪಣೆ ಪಡೆದು ಶಾಸನಸಭೆಯಲ್ಲಿ ಮತ್ತೆ ಚರ್ಚೆ ನಡೆಸಬೇಕು ಎಂಬ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲೂ ಇದೇ ರೀತಿ ಕಾಯ್ದೆ ತಿದ್ದುಪಡಿಗೆ ಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಇಂತಹ ಯತ್ನಕ್ಕೆ ಅವಕಾಶ ಕೊಡಬಾರದು’ ಎಂದು ಮನವಿ ಮಾಡಿದ್ದಾರೆ.

ರಾಜೀವ್‌ ಚಂದ್ರಶೇಖರ್‌ ಆಕ್ಷೇಪ: ‘ಸಿದ್ದರಾಮಯ್ಯ ಅವರ ಸರ್ಕಾರ ಅಂಗೀಕರಿಸಿರುವ ಹೊಸ ಮಸೂದೆ ಕಾಯ್ದೆಯಾಗಿ ಮಾರ್ಪಟ್ಟರೆ ರಾಜ್ಯದ 250 ಪಟ್ಟಣಗಳ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಜತೆಗಿನ ಅಪವಿತ್ರ ಮೈತ್ರಿಯಿಂದ ಇಂತಹ ಮಸೂದೆ ತರಲಾಗಿದೆ’ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹೊಸ ಮಸೂದೆಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುವುದಿಲ್ಲ. ಅದನ್ನು ಹಿಂಪಡೆದು ತಪ್ಪು ತಿದ್ದಿಕೊಳ್ಳದಿದ್ದರೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಬೀದಿಗಿಳಿದು ಹೋರಾಡಲಿವೆ’ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಮಸೂದೆ 2016ಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರ ಪಡೆಯಲಾಗಿತ್ತು. ಉದ್ಯಾನ ಹಾಗೂ ನಾಗರಿಕ ಸೌಲಭ್ಯಗಳಿಗೆ ಇದುವರೆಗೆ ಶೇ 25ರಷ್ಟು ಪ್ರದೇಶವನ್ನು ಮೀಸಲು ಇಡಲಾಗುತ್ತಿತ್ತು. ಆ ಪ್ರಮಾಣವನ್ನು ಈಗ ಶೇ 15ಕ್ಕೆ ಇಳಿಸಲು ಹೊಸ ಮಸೂದೆ ಅವಕಾಶ ಕಲ್ಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.