ADVERTISEMENT

ಮಹಿಳಾ ಹಾಸ್ಟೆಲ್‌ಗೆ ಪೊಲೀಸ್‌ ಭೇಟಿ: ಖಂಡನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 20:13 IST
Last Updated 28 ಮಾರ್ಚ್ 2017, 20:13 IST
ಮಹಿಳಾ ಹಾಸ್ಟೆಲ್‌ಗೆ ಪೊಲೀಸ್‌ ಭೇಟಿ: ಖಂಡನೆ
ಮಹಿಳಾ ಹಾಸ್ಟೆಲ್‌ಗೆ ಪೊಲೀಸ್‌ ಭೇಟಿ: ಖಂಡನೆ   

ಬೆಂಗಳೂರು: ನಾಗರಬಾವಿಯ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದನ್ನು ಖಂಡಿಸಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ (ಐಸೆಕ್‌) ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

‘ಹಾಸ್ಟೆಲ್‌ಗೆ ಯುವಕನೊಬ್ಬ ಬಂದಿದ್ದಾನೆ ಎಂದು ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಚಂದ್ರಾ ಲೇಔಟ್‌ ಠಾಣೆಗೆ ಕರೆ ಮಾಡಿದ್ದರು. ಇದನ್ನು ಆಧರಿಸಿ ಪೊಲೀಸರು ಭಾನುವಾರ ಸಂಜೆ ಏಕಾಏಕಿ ಹಾಸ್ಟೆಲ್‌ಗೆ ನುಗ್ಗಿದ್ದರು. ಈ ವೇಳೆ ಮಹಿಳಾ ಕಾನ್‌ಸ್ಟೆಬಲ್‌ಗಳು ಇರಲಿಲ್ಲ. ಪುರುಷ ಕಾನ್‌ಸ್ಟೆಬಲ್‌ಗಳು ಹಾಸ್ಟೆಲ್‌ನ ಕೊಠಡಿಗಳ ಬಾಗಿಲು ಬಡಿದು ಒಳನುಗ್ಗಿ ಪರಿಶೀಲನೆ ನಡೆಸಿದ್ದರು. ಇದರಿಂದ ವಿದ್ಯಾರ್ಥಿನಿಯರು ತೊಂದರೆ ಅನುಭವಿಸಿದರು’ ಎಂದು  ವಿದ್ಯಾರ್ಥಿಗಳು ದೂರಿದರು.

‘ಸಂಶೋಧನಾ ವಿದ್ಯಾರ್ಥಿನಿಯೊಬ್ಬರ ಆರೋಗ್ಯ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪರಿಚಯಸ್ಥ ಯುವಕ ಹಾಸ್ಟೆಲ್‌ಗೆ ಬಂದಿದ್ದ. ಆ ಯುವಕನನ್ನು ನೋಡಿದ್ದ ಇನ್ನೊಬ್ಬ ಸಂಶೋಧನಾ ವಿದ್ಯಾರ್ಥಿನಿ ತಪ್ಪಾಗಿ ಅರ್ಥೈಸಿಕೊಂಡು ಪೊಲೀಸರಿಗೆ ಕರೆ ಮಾಡಿದ್ದರು. ಆ ಯುವಕನನ್ನು ವಶಕ್ಕೆ ಪಡೆದ ಪೊಲೀಸರು, ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ’ ಎಂದರು.

ADVERTISEMENT

ನಿರ್ದೇಶಕರ ರಾಜೀನಾಮೆಗೆ ಆಗ್ರಹ: ‘ನಿಲಯದೊಳಗೆ ಬರಲು ಪೊಲೀಸರಿಗೆ ಅನುಮತಿ ನೀಡಿದ ಸಂಸ್ಥೆಯ ನಿರ್ದೇಶಕ ಎಂ.ಜಿ. ಚಂದ್ರಕಾಂತ್‌ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಪೊಲೀಸರು ಬಂದಿರುವ ವಿಷಯವನ್ನು ದೂರವಾಣಿ ಮೂಲಕ ಸಂಸ್ಥೆಯ ನಿರ್ದೇಶಕ ಹಾಗೂ ಹಾಸ್ಟೆಲ್‌ನ ವಾರ್ಡನ್‌ಗೆ ತಿಳಿಸಿದ್ದೆವು. ವಾರ್ಡನ್‌ ಕೂಡಲೇ ಸ್ಥಳಕ್ಕೆ ಬಂದರು. ಆದರೆ, ನಿರ್ದೇಶಕರು  ಬರಲಿಲ್ಲ. ಈ ವೇಳೆ, ನೀವು ಏನಾದರೂ ಮಾಡಿಕೊಳ್ಳಿ ಎಂದು ಪೊಲೀಸರಿಗೆ ಹೇಳಿದ್ದಾಗಿ ನಿರ್ದೇಶಕರು ತಿಳಿಸಿದ್ದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳ ಹಿತ ಕಾಯಬೇಕಾದದ್ದು ನಿರ್ದೇಶಕರ ಜವಾಬ್ದಾರಿ. ಆದರೆ, ಈ ವಿಷಯದಲ್ಲಿ ಅವರು ಸರಿಯಾಗಿ ನಡೆದುಕೊಂಡಿಲ್ಲ. ಇದರಿಂದ ಏನೂ ತಪ್ಪು ಮಾಡದ ಯುವಕ ಪೊಲೀಸ್‌ ಠಾಣೆಯಲ್ಲಿ ನಾಲ್ಕು ಗಂಟೆ ಕಳೆಯುವಂತಾಗಿದೆ’ ಎಂದು ದೂರಿದರು.

‘ಚಂದ್ರಕಾಂತ್‌ ಅವರು ನಿರ್ದೇಶಕರಾಗಿ ಬಂದಾಗಿನಿಂದ ದಿನಕ್ಕೊಂದು ನಿಯಮವನ್ನು ಜಾರಿಗೊಳಿಸುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಹೊಂದಿರುವ ಅವರು ವಿದ್ಯಾರ್ಥಿ ವೇತನ, ವಿಶೇಷ ಅನುದಾನ ಕಡಿತಗೊಳ್ಳುವಂತೆ ಮಾಡಿದ್ದಾರೆ. ಸಂಸ್ಥೆಯ ಆಡಳಿತವನ್ನು ಸುಗಮ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಿ ನಡೆಸಲು ವಿಫಲರಾಗಿದ್ದಾರೆ’ ಎಂದು ದೂರಿದರು.

**

ಆಂತರಿಕ ತನಿಖೆಗೆ ಸಮಿತಿ ರಚನೆ

‘ಘಟನೆ ಬಗ್ಗೆ ಆಂತರಿಕ ತನಿಖೆ ನಡೆಸಲು ನಾಲ್ವರು ಸದಸ್ಯರ ಸಮಿತಿ ರಚಿಸಲಾಗಿದೆ’ ಎಂದು ಪ್ರೊ.ಎಂ.ಜಿ. ಚಂದ್ರಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸರು ಹಾಸ್ಟೆಲ್‌ಗೆ ಬರುವ ಮುನ್ನ ನನ್ನ ಅನುಮತಿ ಪಡೆದಿಲ್ಲ. ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ದೂರು ಕೊಡುತ್ತಿದ್ದಂತೆ ಪೊಲೀಸರು ನೇರವಾಗಿ ಹಾಸ್ಟೆಲ್‌ಗೆ ಬಂದಿದ್ದಾರೆ. ಈ ವೇಳೆ ಯುವಕನೊಬ್ಬ ಕೊಠಡಿಯ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ. ಆತನನ್ನು ವಶಕ್ಕೆ ಪಡೆದಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.