ADVERTISEMENT

ಮಾಗಡಿ ಪಿಡಬ್ಲ್ಯುಡಿ: 57.62 ಕೋಟಿ ಅಕ್ರಮ ದೃಢ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:58 IST
Last Updated 28 ಜುಲೈ 2014, 19:58 IST

ಬೆಂಗಳೂರು: ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಮಾಗಡಿ ಉಪ ವಿಭಾಗದಲ್ಲಿ 2011–12­ರಲ್ಲಿ ₨57.62 ಕೋಟಿ ಮೊತ್ತದ ಅವ್ಯ­ವಹಾರ ನಡೆದಿದ್ದು, 17 ಅಧಿ­ಕಾ­ರಿಗಳು, 16 ಗುತ್ತಿಗೆ­ದಾ­ರರು ಭಾಗಿ­­ಯಾಗಿದ್ದಾರೆ ಎಂದು ಲೋಕಾ­ಯುಕ್ತ ಪೊಲೀಸರು ನ್ಯಾಯಾ­ಲಯಕ್ಕೆ ವರದಿ ಸಲ್ಲಿಸಿದ್ದಾರೆ.

‘ಪ್ರಕರಣದ ತನಿಖೆ ಪೂರ್ಣ­ಗೊ­ಳಿಸಿದ್ದು, 1.76 ಲಕ್ಷ ಪುಟಗಳ ವರದಿ­ಯನ್ನು ರಾಮನಗರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾ­ಗಿದೆ. ನಾಲ್ವರು ಅಧಿಕಾರಿಗಳು ಮತ್ತು 16 ಗುತ್ತಿಗೆದಾರರ ವಿರುದ್ಧ ಆರೋಪ­ಪಟ್ಟಿ ದಾಖಲಿಸಲಾಗಿದೆ. 13 ಅಧಿಕಾರಿಗಳ ವಿರುದ್ಧ ಆರೋಪ­ಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಲೋಕಾ­ಯು­ಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್‌.­ಎನ್.­ಸತ್ಯ-­ನಾರಾಯಣ ರಾವ್ ತಿಳಿಸಿದ್ದಾರೆ.

ಮಾಗಡಿ ಉಪ ವಿಭಾಗದಲ್ಲಿ ₨ 600 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2013ರ ಏಪ್ರಿಲ್ 18ರಂದು 13 ಅಧಿಕಾರಿಗಳು ಮತ್ತು ಮೂವರು ಗುತ್ತಿಗೆದಾರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಈಗ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು 33 ಮಂದಿ ಅವ್ಯವಹಾರದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.

2011–12ನೇ ಆರ್ಥಿಕ ವರ್ಷದಲ್ಲಿ ಲೋಕೋಪಯೋಗಿ ಇಲಾಖೆಯ ಮಾಗಡಿ ಉಪ ವಿಭಾಗಕ್ಕೆ ₨ 236.12 ಕೋಟಿ ಅನುದಾನ ಬಿಡುಗಡೆ ಮಾಡ­ಲಾ­­ಗಿತ್ತು. ಈ ಪೈಕಿ ₨ 137 ಕೋಟಿ ಗುತ್ತಿಗೆದಾರರಿಗೆ ಪಾವತಿ ಆಗಿತ್ತು. ಅದ­ರಲ್ಲಿ ₨ 56.72 ಕೋಟಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳು: ಪ್ರಕರಣಕ್ಕೆ ಸಂಬಂಧಿ­ಸಿ­ದಂತೆ ಲೋಕೋಪ­ಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕೆ.ಬಿ.ದೇವ­ರಾಜು, ಮಾಗಡಿ ಉಪ ವಿಭಾಗದ ನಿವೃತ್ತ ಕಾರ್ಯ­ನಿರ್ವಾಹಕ ಎಂಜಿನಿ­ಯರ್ ಗಂಗಾ­ಧರಯ್ಯ, ನಿವೃತ್ತ ಲೆಕ್ಕ ಪರಿಶೋಧ­ನಾಧಿಕಾರಿ ಶ್ರೀನಿವಾಸ್, ಸಹಾಯಕ ಎಂಜಿನಿಯರ್ ಜಿ.ಕೆ.ಚಂದ್ರ­ಶೇಖರ್ (ಈಗ ಮೃತರು), ಗುತ್ತಿಗೆ­ದಾ­ರ­ರಾದ ಶಂಕರ್, ಕೆಂಪರಾಜು, ನಂಜಯ್ಯ, ಆರ್.ರವಿ, ಧನಂಜಯ, ವೆಂಕ­ೇಶ್, ಎಚ್.ನಾರಾಯಣಪ್ಪ, ವೆಂಕಟ­­ರಾಮು, ಜೆ.ಜಗದೀಶ್, ಕೆ.ಪ್ರಕಾಶ್, ಎಸ್.ಬೈರೇ­ಗೌಡ, ಟಿ.ರಮೇಶ್, ಜಿ.ಎಲ್.ಆಂಜ­ನೇಯ, ಜಿ.­ಕುಮಾರ್, ಎಲ್.­ಉಮಾ­ಶಂಕರ್ ಮತ್ತು ರುದ್ರಸ್ವಾಮಿ ವಿರುದ್ಧ ನ್ಯಾಯಾ­ಲ­ಯಕ್ಕೆ ಆರೋಪಪಟ್ಟಿ ಸಲ್ಲಿಸ­ಲಾಗಿದೆ ಎಂದು ಸತ್ಯ­ನಾರಾಯಣ ರಾವ್ ತಿಳಿಸಿದ್ದಾರೆ.

ಪ್ರಕರಣ ನಡೆದ ಅವಧಿಯಲ್ಲಿ ಇಲಾ­ಖೆಯ ದಕ್ಷಿಣ ವಿಭಾಗದ ಮುಖ್ಯ ಎಂಜಿ­ನಿ­­ಯರ್ ಸದಾಶಿ­ವರೆಡ್ಡಿ ಬಿ.ಪಾಟೀಲ, ಆಂತರಿಕ ಆರ್ಥಿಕ ಸಲಹೆಗಾರರಾಗಿದ್ದ ಗೋವಿಂದ­­ರಾಜು, ಸುಪರಿಂಟೆಂ­ಡಿಂಗ್‌ ಎಂಜಿನಿಯರ್ ಉದಯ­ಶಂಕರ್, ಸಹಾ­ಯಕ ಕಾರ್ಯ­ನಿರ್ವಾಹಕ ಎಂಜಿನಿ­ಯರ್ (ಎಇಇ) ಎ.ನಟರಾಜು, ಸಹಾ­ಯಕ ಎಂಜಿನಿ­ಯ­ರ್‌ಗಳಾದ ಎಚ್‌.­ಎಸ್.­ವೆಂಕಟೇಶ್, ಕಾಂತರಾಜು, ಕೆ.ಆರ್.­­ಆನಂದಕುಮಾರ್, ಕೆ.ಸಿ.­ಪ್ರಭಾಕರ್, ಟಿ.ವಿ.ಮುಕುಂದ, ನಗದು ಗುಮಾಸ್ತ ಪುಟ್ಟಸ್ವಾಮಿ, ಲೋಕೋ­ಪ­ಯೋಗಿ ಇಲಾಖೆಯ ಗುಣ ನಿಯಂತ್ರಣ ವಿಭಾಗದ ಎಇಇಗಳಾದ ಸಿದ್ದಲಿಂಗ­ಕುಮಾರ್, ಎಸ್‌.ವಿ.­ಶ್ರೀನಿವಾಸ್ ಮತ್ತು ಎಇ ವಿ.ಕೃಷ್ಣ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸಂಬಂ­ಧಿ­ಸಿದ ಸಕ್ಷಮ ಪ್ರಾಧಿ­ಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT