ADVERTISEMENT

ಮಾಗಡಿ ರಸ್ತೆ ಕೆಳಸೇತುವೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:54 IST
Last Updated 22 ಜುಲೈ 2017, 19:54 IST
ಲೋಕಾರ್ಪಣೆಗೊಂಡ ಮಾಗಡಿ ರಸ್ತೆಯ ಕೆಳಸೇತುವೆ
ಲೋಕಾರ್ಪಣೆಗೊಂಡ ಮಾಗಡಿ ರಸ್ತೆಯ ಕೆಳಸೇತುವೆ   

ಬೆಂಗಳೂರು: ಮಾಗಡಿ ರಸ್ತೆಯಲ್ಲಿ ಸಿದ್ದಯ್ಯ ಪುರಾಣಿಕ್‌ ರಸ್ತೆ ಕೂಡುವ ಸ್ಥಳದಲ್ಲಿ ನಿರ್ಮಿಸಿರುವ ಕೆಳಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಉದ್ಘಾಟಿಸಿದರು.

ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಅಡಿ ₹ 24.76 ಕೋಟಿ ವೆಚ್ಚದಲ್ಲಿ ಈ ಕೆಳಸೇತುವೆ ನಿರ್ಮಿಸಲಾಗಿದೆ.  ಕಾಮಾಕ್ಷಿಪಾಳ್ಯ–ಮೆಜೆಸ್ಟಿಕ್‌ ನಡುವೆ ಸಂಚರಿಸುವ ವಾಹನಗಳು ಹಾಗೂ ಬಸವೇಶ್ವರ ನಗರ– ವಿಜಯನಗರ ನಡುವೆ ಸಿದ್ದಯ್ಯ ಪುರಾಣಿಕ್‌ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಈ ಜಂಕ್ಷನ್‌ನಲ್ಲಿ  ತಡೆ ಇಲ್ಲದೇ ಸಾಗಬಹುದಾಗಿದೆ. 

ಕಾಮಗಾರಿಗೆ ಮೂರೂವರೆ ವರ್ಷ: ಈ ಕಾಮಗಾರಿಗೆ  2013ರ ಅಕ್ಟೋಬರ್‌ 12ರಂದು ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ,  2015ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆ ಬಳಿಕವೂ ಕಾಮಗಾರಿ ಕುಂಟುತ್ತಾ ಸಾಗಿತ್ತು. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದ್ದರು.

ADVERTISEMENT

‘ಬಂಡೆಯೊಂದನ್ನು ಒಡೆದು ಕಾಮಗಾರಿ ನಡೆಸಬೇಕಾಯಿತು. ಕೆಲವು ಒಳಚರಂಡಿ ಕಾಗೂ ಕುಡಿಯುವ ನೀರು ಪೂರೈಸುವ ಕೊಳವೆಗಳನ್ನು ಸ್ಥಳಾಂತರಿಸಬೇಕಾಯಿತು. ಹಾಗಾಗಿ ಕಾಮಗಾರಿ ವಿಳಂಬವಾಯಿತು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ಪಡೆಯುವ ಸಲುವಾಗಿ ಸಮಿತಿ ರಚಿಸಿದ್ದನ್ನು ಚುನಾವಣಾ ಗಿಮಿಕ್‌ ಎಂದು  ಕೆಲವರು ಟೀಕಿಸಿದ್ದಾರೆ. ಕೊಳಚೆ ಪ್ರದೇಶದ ನಿವಾಸಿಗಳಿಗೆ 10 ಸಾವಿರ ಲೀಟರ್‌ ನೀರನ್ನು ಉಚಿತವಾಗಿ ನೀಡುವ ಯೋಜನೆಗೂ ಚುನಾವಣಾ ಗಿಮಿಕ್‌ ಎಂದರು. ಕಚೇರಿಗಳಲ್ಲಿ ಬಸವಣ್ಣ ಅವರ ಭಾವಚಿತ್ರ ಹಾಕುವುದನ್ನು ಕಡ್ಡಾಯ ಮಾಡಿದಾಗ ಹಾಗೂ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಟ್ಟಾಗಲೂ ಇದೇ ಆರೋಪ ಬಂತು. ಕಾಮಾಲೆ ಕಣ್ಣುಗಳಿಗೆ ಎಲ್ಲವೂ ಹೀಗೆಯೇ  ಕಾಣಿಸುತ್ತದೆ.  ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ.  ಜನರ ವಿವೇಚನೆಗೆ ಬಿಡುತ್ತೇನೆ’ ಎಂದರು.

ಶಿವಾನಂದ ವೃತ್ತದ ಬಳಿ ಉಕ್ಕಿನ ಸೇತುವೆ ನಿರ್ಮಿಸುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿರುವ ವಿಚಾರವನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ, ‘ತಪ್ಪು  ನಡೆದಾಗ ದಾಖಲೆ ಸಹಿತ ಆರೋಪ ಮಾಡುವುದು ಒಳ್ಳೆಯದೇ. ಆದರೆ ಕೆಲವು ಮಾಹಿತಿ ಹಕ್ಕು ಕಾರ್ಯಕರ್ತರಿಂದಾಗಿ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ.  ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಳ್ಳಾಟ: ವೇದಿಕೆಯ ಬಳಿ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಅವರ ಬೆಂಬಲಿಗರು ಹಾಗೂ ವಾರ್ಡ್‌ನ ಪಾಲಿಕೆ ಸದಸ್ಯ ಉಮೇಶ್‌ ಶೆಟ್ಟಿ ಬೆಂಬಲಿಗರ ನಡುವೆ ನೂಕಾಟ ನಡೆಯಿತು.  ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂತು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ವಸತಿ ಸಚಿವ ಎಂ.ಕೃಷ್ಣಪ್ಪ, ಮೇಯರ್‌ ಜಿ.ಪದ್ಮಾವತಿ, ಶಾಸಕ ಸುರೇಶ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಉಪಮೇಯರ್‌ ಆನಂದ ಅವರೂ ನೂಕುನುಗ್ಗಲಿನ ನಡುವೆಯೇ ವೇದಿಕೆ ಏರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

‘ಇಂದಿರಾ ಕ್ಯಾಂಟೀನ್‌ಗೆ ಅಡ್ಡಗಾಲು’: ‘ಬಡವರಿಗೆ ರಿಯಾಯಿತಿ ದರದಲ್ಲಿ ಊಟ, ಉಪಾಹಾರ ಒದಗಿಸಲು ಸರ್ಕಾರ ಇಂದಿರಾ ಕ್ಯಾಂಟೀನ್‌ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಇದಕ್ಕೂ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಕಿಡಿಕಾರಿದರು.

‘ಈ ಯೋಜನೆಯ ಒಟ್ಟು ವೆಚ್ಚವೇ  ₹ 73 ಕೋಟಿ. ಅದರಲ್ಲಿ ₹ 65 ಕೋಟಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಮುಖಂಡರೊಬ್ಬರು ಆಪಾದನೆ ಮಾಡಿದ್ದಾರೆ.  ಒಳ್ಳೆಯ ಕೆಲಸ ಮಾಡುವಾಗ ಆರೋಪಗಳು ಸಹಜ. ಆದರೆ, ಸುಳ್ಳು  ಹೇಳುವುದಕ್ಕೂ ಒಂದು ಮಿತಿ ಬೇಡವೇ’ ಎಂದು ಅವರು ಪ್ರಶ್ನಿಸಿದರು.

‘ಮಾನನಷ್ಟ ಮೊಕದ್ದಮೆ ಹೂಡಲು ಸೂಕ್ತವಾದ ಪ್ರಕರಣವಿದು. ಒಬ್ಬ ವಕೀಲನಾಗಿ ಈ ಮಾತನ್ನು ಹೇಳುತ್ತಿದ್ದೇನೆ’ ಎಂದರು.

ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ  ಜಿಲ್ಲಾ ವಕ್ತಾರ ಎನ್‌.ಆರ್‌.ರಮೇಶ್‌ ಅವರು ಇತ್ತೀಚೆಗೆ ಆರೋಪಿಸಿದ್ದರು.

ಕೆಳಸೇತುವೆಗೆ ಕೆಂಪೇಗೌಡರ ಹೆಸರು
‘ಈ ಕೆಳಸೇತುವೆಗೆ  ನಾಡಪ್ರಭು ಕೆಂಪೇಗೌಡ ಅವರ ಹೆಸರು ಇಡಬೇಕೆಂಬ ಬೇಡಿಕೆ ಇದೆ. ಇದಕ್ಕೆ ಸರ್ಕಾರದ ಅಭ್ಯಂತರ ಇಲ್ಲ. ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಬಹುದು’ ಎಂದು ಮುಖ್ಯಮಂತ್ರಿ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.