ADVERTISEMENT

ಮಾದರಿ ಸ್ಟಾರ್ಟ್‌ಅಪ್‌ ನೀತಿ ರೂಪಿಸಿ

ರಾಜ್ಯ ಸರ್ಕಾರಕ್ಕೆ ರಾಹುಲ್‌ ಗಾಂಧಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 20:13 IST
Last Updated 9 ಅಕ್ಟೋಬರ್ 2015, 20:13 IST

ಬೆಂಗಳೂರು: ದೇಶಕ್ಕೆ ಮಾದರಿ ಆಗುವಂಥ ಸ್ಟಾರ್ಟ್‌ಅಪ್‌ ನೀತಿಯನ್ನು ರೂಪಿಸುವಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ರಾಜ್ಯದ ವಿವಿಧ ಭಾಗಗಳಿಂದ ಬಂದ 16 ಸ್ಟಾರ್ಟ್‌ಅಪ್‌ ಕಂಪೆನಿಗಳ ಪ್ರತಿನಿಧಿಗಳ ಜತೆ ಅವರು ಶುಕ್ರವಾರ ಕುಮಾರಕೃಪಾ ಅತಿಥಿಗೃಹದಲ್ಲಿ ಸಮಾಲೋಚನೆ ನಡೆಸಿದರು.

ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗಳಿಗೆ ಯಾವ ರೀತಿಯ ಉತ್ತೇಜನ ಸಿಗಬೇಕು ಎಂಬ ಬಗ್ಗೆಯೂ ಅವರು ಉದ್ಯಮಿಗಳಿಂದ ಸಲಹೆ ಪಡೆದರು. ಬಳಿಕ  ಸುದ್ದಿಗಾರರ ಜತೆ ಮಾತನಾಡಿದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ, ‘ಸ್ಟಾರ್ಟ್‌ ಅಪ್‌ ಉದ್ಯಮಿಗಳು ನೀಡಿದ ಸಲಹೆಗಳನ್ನು ಆಧರಿಸಿ ನೂತನ ಸ್ಟಾರ್ಟ್‌ಅಪ್‌ ಪಾಲಿಸಿ ಸ್ಥಾಪಿಸುವಂತೆ ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ. ಉದ್ಯಮಿಗಳ ಜತೆ ಇನ್ನೊಮ್ಮೆ ಸಮಾಲೋಚನೆ ನಡೆಸುವಂತೆ ಸೂಚಿಸಿದ್ದಾರೆ’ ಎಂದು ತಿಳಿಸಿದರು.

‘ಸ್ಟಾರ್ಟ್‌ಅಪ್‌ ಉದ್ದಿಮೆ ಸ್ಥಾಪನೆ ವಿಚಾರದಲ್ಲಿ ಮುಂಚೂಣಿಯಲ್ಲಿರುವ ವಿಶ್ವದ 15 ಪ್ರಮುಖ ನಗರಗಳ ಪೈಕಿ ಬೆಂಗಳೂರು ಕೂಡಾ ಸ್ಥಾನ ಪಡೆದಿದೆ. ಈ ಹಿರಿಮೆಯನ್ನು ಉಳಿಸಿಕೊಳ್ಳಬೇಕು. ಸ್ಟಾರ್ಟ್‌ಅಪ್‌ ಸ್ಥಾಪನೆಗೆ ಮುಂದಾಗುವ ಉತ್ಸಾಹಿ ಉದ್ಯಮಿಗಳಿಗೆ ಆರ್ಥಿಕ ನೆರವು ಒದಗಿಸುವುದಕ್ಕೂ ಕಾರ್ಯಕ್ರಮ  ರೂಪಿಸುವಂತೆ ರಾಹುಲ್‌ ಸೂಚಿಸಿದ್ದಾರೆ’ ಎಂದು ಸಚಿವರು ತಿಳಿಸಿದರು. ರಾಹುಲ್‌ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದ ಉದ್ಯಮಿಗಳು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.

ಗ್ರಾಮೀಣ ಪ್ರದೇಶಕ್ಕೂ ಆದ್ಯತೆ ಇರಲಿ:  ‘ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಹೊಸ ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲೂ ಇದಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ರಾಹುಲ್‌ ಗಾಂಧಿ ಅವರಿಗೆ ಸಲಹೆ ನೀಡಿದ್ದೇನೆ’ ಎಂದು ಉಡುಪಿಯ ರೋಬೊಸಾಫ್ಟ್‌ ಸಾಫ್ಟ್‌ವೇರ್‌ ರಫ್ತು ಉದ್ದಿಮೆಯ ಹಣಕಾಸು ವಿಭಾಗದ ನಿರ್ದೇಶಕ ಸುಧೀರ್‌ ಭಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಕ್ತ ಸಂವಾದ: ‘ಸ್ಟಾರ್ಟ್‌ಅಪ್‌ ಸ್ಥಾಪನೆಗೆ ರಾಜ್ಯದಲ್ಲಿ ಇರುವ ತೊಡಕುಗಳ ಬಗ್ಗೆಯೂ ನಾವು ಅವರಿಗೆ ವಿವರಿಸಿದ್ದೇವೆ. ನಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇತ್ತು’ ಎಂದು ಮೈಸೂರಿನ ಸ್ಕ್ಯಾನ್‌ರೇಸ್‌ ಟೆಕ್ನಾಲಜೀಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್‌ ಆಳ್ವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.