ADVERTISEMENT

ಮಾನವೀಯ ಮೌಲ್ಯ ಎತ್ತಿಹಿಡಿಯಿರಿ: ರೋಷನ್‌ ಬೇಗ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:39 IST
Last Updated 19 ನವೆಂಬರ್ 2017, 19:39 IST
ವಿದ್ಯಾರ್ಥಿಗಳಿಗೆ ಸಚಿವ ರೋಷನ್‌ ಬೇಗ್‌ ವಿದ್ಯಾರ್ಥಿ ವೇತನ ನೀಡಿದರು.
ವಿದ್ಯಾರ್ಥಿಗಳಿಗೆ ಸಚಿವ ರೋಷನ್‌ ಬೇಗ್‌ ವಿದ್ಯಾರ್ಥಿ ವೇತನ ನೀಡಿದರು.   

ಬೆಂಗಳೂರು: ‘ಯುವಜನತೆ ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಜತೆಗೆ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮಾನವೀಯ ಮೌಲ್ಯ ಎತ್ತಿಹಿಡಿಯಬೇಕು’ ಎಂದು ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ ಸಚಿವ ಆರ್‌.ರೋಷನ್ ಬೇಗ್ ತಿಳಿಸಿದರು.

ಮಹದೇವಪುರ ಕ್ಷೇತ್ರದ ಕುಂದಲಹಳ್ಳಿ ಬಳಿಯ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿ.ವಿ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳು ಉತ್ತಮ ಶಿಕ್ಷಣ ನೀಡುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು, ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಂಡು ದೇಶ ಮುನ್ನಡೆಸುವಷ್ಟು ಸಮರ್ಥರಾಗಿದ್ದಾರೆ. ಬಿಲ್‍ಗೇಟ್ಸ್ ಭಾರತಕ್ಕೆ ಭೇಟಿ ನೀಡಿದ್ದಾಗ ಇಲ್ಲಿನ ಶಿಕ್ಷಣ ವ್ಯವಸ್ಥೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ದೇಶದ ಶೈಕ್ಷಣಿಕ ವ್ಯವಸ್ಥೆಯ ಗುಣಮಟ್ಟವನ್ನು ಬಿಂಬಿಸುತ್ತದೆ ಎಂದರು.

ADVERTISEMENT

25 ವರ್ಷಗಳ ಹಿಂದೆ 7 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಸಿಎಂಆರ್‍ಐ ವಿದ್ಯಾಸಂಸ್ಥೆ ಇಂದು 25,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಸಂಸದ ಕೆ.ಸಿ.ರಾಮಮೂರ್ತಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ₹20ಲಕ್ಷ ಪ್ರೋತ್ಸಾಹ ಧನ ನೀಡುವ ಮೂಲಕ ಶಿಕ್ಷಣದ ಮೇಲೆ ಅವರಿಗಿರುವ ಆಸಕ್ತಿ ಮತ್ತು ಕಾಳಜಿ ತೋರುತ್ತದೆ ಎಂದರು.

ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಶೈಕ್ಷಣಿಕ ಸಂಸ್ಥೆ ಕಟ್ಟುವುದು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕಾರ್ಯವಾಗಿದೆ. ವಿದ್ಯಾಸಂಸ್ಥೆಗಳಲ್ಲಿ ಇಂದು ಹೊಡೆದಾಟ ಕಾಣುತ್ತಿದ್ದೇವೆ. ಇಂತಹ ಬೆಳವಣಿಗೆ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಲಿದೆ. ಶೈಕ್ಷಣಿಕ ಸಂಸ್ಥೆ ಸ್ಥಾಪನೆಗೆ ಶಿಸ್ತು, ತ್ಯಾಗ, ಕಠಿಣ ಶ್ರಮ ಅಗತ್ಯವಿದೆ ಎಂದರು.

ರಾಷ್ಟ್ರೀಯ ಹಾಕಿ ತಂಡದ ಮಾಜಿ ನಾಯಕ ಎ.ಬಿ.ಸುಬ್ಬಯ್ಯ, ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಕಠಿಣ ಪರಿಶ್ರಮ ಹಾಕಬೇಕು ಮತ್ತು ಏಕಾಗ್ರತೆ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕ್ರೀಡೆಗಳಲ್ಲಿ ವಿಜೇತರಾದ ಹಾಗೂ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.