ADVERTISEMENT

ಮಾರಾಟ ಸಹಾಯಕಿ ಜತೆ ಅನುಚಿತ ವರ್ತನೆ

ವೈನ್‌ ಉತ್ಸವದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 20:00 IST
Last Updated 28 ಜುಲೈ 2014, 20:00 IST

ಬೆಂಗಳೂರು:  ಅರಮನೆ ಮೈದಾನದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌­­ನಲ್ಲಿ ಆಯೋ­ಜನೆ­ಯಾಗಿದ್ದ ಅಂತರರಾಷ್ಟ್ರೀಯ ವೈನ್‌ ಉತ್ಸವದಲ್ಲಿ ಮಳಿಗೆಯೊಂದರ ಮಾರಾಟ ಸಹಾಯಕಿ (ಸೇಲ್ಸ್‌ ಗರ್ಲ್‌) ಜತೆ ಅನುಚಿತವಾಗಿ ವರ್ತಿ­ಸಿದ ಪಾನಮತ್ತ ಯುವಕರನ್ನು ಸಾರ್ವ­­ಜನಿಕರೇ ಹಿಡಿದು ಹಿಗ್ಗಾ­ಮುಗ್ಗಾ ಥಳಿಸಿರುವ ಘಟನೆ ಭಾನು­ವಾರ ನಡೆದಿದೆ.

ಘಟನೆ ಸಂಬಂಧ ದೇವನಹಳ್ಳಿಯ ಕಿರಣ್‌ (28) ಮತ್ತು ಸುರೇಂದ್ರ (28) ಎಂಬುವರನ್ನು ಬಂಧಿಸ­ಲಾ­ಗಿದೆ. ಮತ್ತೊಬ್ಬ ಆರೋಪಿ ರವಿ ಪರಾರಿಯಾಗಿದ್ದಾನೆ ಎಂದು ಜೆ.ಸಿ.­ನಗರ ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತರಾದ ಆ ಮೂವರು ಸಂಜೆ ವೈನ್‌ ಉತ್ಸವಕ್ಕೆ ಬಂದಿದ್ದರು. ಉತ್ಸವ­ದಲ್ಲಿ ಮದ್ಯಪಾನ ಮಾಡಿದ್ದ ಅವರು, ಹೋಟೆಲ್‌ನ ಶೌಚಾಲಯದಿಂದ ಮಳಿಗೆಗೆ ಹಿಂದಿರುಗುತ್ತಿದ್ದ ಮಾರಾಟ ಸಹಾಯಕಿಯನ್ನು ಅಡ್ಡಗಟ್ಟಿ ಚುಂಬಿ­ಸಲು ಯತ್ನಿಸಿದ್ದಾರೆ.

ಆಗ ಮಾರಾಟ ಸಹಾಯಕಿ ಪ್ರತಿ­ರೋಧ ತೋರಿದ್ದ­ರಿಂದ ಆರೋಪಿ­ಗಳು, ಅವರನ್ನು ಎಳೆದಾಡಿ ಅನುಚಿತ­ವಾಗಿ ವರ್ತಿಸಿ­ದ್ದಾರೆ. ಈ ವೇಳೆ ಮಾರಾಟ ಪ್ರತಿನಿಧಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಸಾರ್ವ­ಜ­ನಿಕರು ಕಿರಣ್‌ ಮತ್ತು ಸುರೇಂದ್ರನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಾರು ಚಾಲಕನಾದ ರವಿ ತಪ್ಪಿಸಿ­ಕೊಂಡು ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ.

ಕಿರಣ್‌, ಕೆ.ಜಿ.ರಸ್ತೆಯ ಕಂದಾಯ ಭವನದಲ್ಲಿ ಪ್ರಥಮ ದರ್ಜೆ ಗುಮಾಸ್ತ­ನಾಗಿದ್ದಾನೆ. ಸುರೇಂದ್ರ, ವಕೀಲನಾಗಿ­ದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಮಾರು 17 ವರ್ಷದ ಆ ಮಾರಾಟ ಸಹಾಯಕಿಗೆ ಘಟನೆ ವೇಳೆ ತರಚಿದ ಗಾಯಗಳಾಗಿವೆ. ಬಂಧಿತರ ವಿರುದ್ಧ ಹಲ್ಲೆ, ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪ ಹಾಗೂ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರೌಡ್ಡಿಪಟ್ಟಿ
‘ಪ್ರಕರಣದ ಗಂಭೀರತೆಯನ್ನು ಆಧರಿಸಿ ಕಿರಣ್‌ ಮತ್ತು ಸುರೇಂದ್ರ­ನನ್ನು ಜೆ.ಸಿ.ನಗರ ಪೊಲೀಸ್‌ ಠಾಣೆಯ ರೌಡಿಪಟ್ಟಿಗೆ ಸೇರಿಸಲಾ­ಗಿದೆ. ಅವರ ಮೇಲೆ ನಿರಂತರ ಕಣ್ಗಾವಲು ಇಡಲಾಗುತ್ತದೆ’

–ಸಂದೀಪ್‌ ಪಾಟೀಲ್‌
ಉತ್ತರ ವಿಭಾಗದ ಡಿಸಿಪಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.